ADVERTISEMENT

ಪೋಷಕರಿಂದ ಅಧಿಕ ಹಣ ವಸೂಲಿ ಆರೋಪ: ಚೈತನ್ಯ ಟೆಕ್ನೊ ಶಾಲೆ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 14:03 IST
Last Updated 13 ಜುಲೈ 2021, 14:03 IST
ಭಾರತ ವಿದ್ಯಾರ್ಥಿ ಫೆಡರೇಶನ್‌ ಕಾರ್ಯಕರ್ತರು ಮಂಗಳವಾರ ಹೊಸಪೇಟೆಯ ಚೈತನ್ಯ ಟೆಕ್ನೊ ಶಾಲೆ ಎದುರು ಪ್ರತಿಭಟನೆ ನಡೆಸಿದರು
ಭಾರತ ವಿದ್ಯಾರ್ಥಿ ಫೆಡರೇಶನ್‌ ಕಾರ್ಯಕರ್ತರು ಮಂಗಳವಾರ ಹೊಸಪೇಟೆಯ ಚೈತನ್ಯ ಟೆಕ್ನೊ ಶಾಲೆ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಸರ್ಕಾರದ ಆದೇಶ ಮೀರಿ ಮಕ್ಕಳ ಪೋಷಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ಕಾರ್ಯಕರ್ತರು ಮಂಗಳವಾರ ನಗರದ ಸ್ಟೇಶನ್‌ ರಸ್ತೆಯ ಚೈತನ್ಯ ಟೆಕ್ನೊ ಶಾಲೆ ಎದುರು ಪ್ರತಿಭಟನೆ ನಡೆಸಿದರು.

ಶಾಲೆಯ ಮುಖ್ಯಶಿಕ್ಷಕಿ ಹಾಗೂ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಫೆಡರೇಶನ್‌ ತಾಲ್ಲೂಕು ಅಧ್ಯಕ್ಷ ಜೆ. ಶಿವುಕುಮಾರ ಮಾತನಾಡಿ, ‘ಕೋವಿಡ್‌ನಿಂದ ಜನ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ಚೈತನ್ಯ ಟೆಕ್ನೊ ಶಾಲೆಯವರು ಶಾಲೆ ಪ್ರವೇಶ ಶುಲ್ಕ ಹೆಚ್ಚಳ ಮಾಡಿದ್ದಾರೆ. ಯಾವ ಶಾಲೆಯವರು ಶುಲ್ಕ ಹೆಚ್ಚಿಸಬಾರದು ಎಂದು ಸರ್ಕಾರದ ನಿರ್ದೇಶನವಿದೆ. ಹೀಗಿದ್ದರೂ ಅದನ್ನು ಗಾಳಿಗೆ ತೂರಿ ಪೋಷಕರನ್ನು ಹಿಂಸಿಸುತ್ತಿದ್ದಾರೆ. ಈ ವರ್ಷ ನರ್ಸರಿ ಪ್ರವೇಶಕ್ಕೆ ₹6,000 ಶುಲ್ಕ ಹೆಚ್ಚಿಗೆ ಮಾಡಿದ್ದಾರೆ. ಇತರೆ ತರಗತಿಗೆ ಇದಕ್ಕಿಂತ ಹೆಚ್ಚಿದೆ’ ಎಂದು ಆರೋಪಿಸಿದ್ದಾರೆ.

‘ಶಾಲಾ ಮಕ್ಕಳಿಗೆ ಎಂಆರ್‌ಪಿ ದರದಲ್ಲಿ ಪುಸ್ತಕಗಳನ್ನು ಕೊಡಬೇಕು. ಆದರೆ, ಅದಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಹಣ ಪಡೆಯುತ್ತಿದ್ದಾರೆ. ಸ್ವಂತ ಆ್ಯಪ್‌ ಮಾಡಿಕೊಂಡಿದ್ದಾರೆ. ಅದರ ಮೂಲಕವೇ ಪುಸ್ತಕ ಖರೀದಿಗೆ ವ್ಯವಸ್ಥೆ ಮಾಡಿದ್ದಾರೆ. ಆದರೆ, ಅದರ ರಸೀದಿ ಬೇರೊಂದು ಕಂಪನಿಯ ಹೆಸರಿನಲ್ಲಿ ಬರುತ್ತದೆ. ಯಾವುದೇ ಶಾಲೆಯವರು ಶಾಲೆ ಶುಲ್ಕ, ಪುಸ್ತಕಗಳನ್ನು ಕೊಟ್ಟರೆ ಸ್ಥಳೀಯ ವಿಳಾಸದಲ್ಲಿ ರಸೀದಿ ಕೊಡಬೇಕು. ಆದರೆ, ಬೆಂಗಳೂರಿನಲ್ಲಿರುವ ಕಂಪನಿಯ ಹೆಸರಿನಲ್ಲಿ ರಸೀದಿ ಕೊಟ್ಟು ವಂಚಿಸುತ್ತಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.

ADVERTISEMENT

‘ಹೋದ ವರ್ಷವೂ ಇದೇ ತರಹ ಪೋಷಕರಿಂದ ಹಣ ಸುಲಿಗೆ ಮಾಡಿದ್ದರು. ಅದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ನಂತರ ಕೈಬಿಟ್ಟಿದ್ದರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗೂ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಪತ್ರ ಬರೆದುಕೊಟ್ಟಿದ್ದರು. ಈ ವರ್ಷ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾರೆ. ಇದೇ ರೀತಿ ನಗರದ ಬಹುತೇಕ ಖಾಸಗಿ ಶಾಲೆಯವರು ಹೀಗೆಯೇ ಮಾಡುತ್ತಿದ್ದಾರೆ. ಅದನ್ನು ವಿರೋಧಿಸಿ ಬುಧವಾರ (ಜು.14) ಚೈತನ್ಯ ಟೆಕ್ನೊ ಶಾಲೆ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಎಸ್‌ಎಫ್ಐ ಮುಖಂಡರಾದ ಪವನ್‌ ಕುಮಾರ್‌, ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ವಿ. ಸ್ವಾಮಿ, ಉಮಾ ಮಹೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.