ADVERTISEMENT

ಎಂ.ಬಿ. ಪಾಟೀಲ ಬಹಿರಂಗ ಕ್ಷಮೆಯಾಚಿಸಲಿ: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 14:40 IST
Last Updated 16 ಏಪ್ರಿಲ್ 2019, 14:40 IST
   

ಹೊಸಪೇಟೆ: ‘ವೀರಶೈವ–ಲಿಂಗಾಯತ ಧರ್ಮ ವಿಭಜನೆಗೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ ಅವರು ಕ್ಷಮೆಯಾಚಿಸಿದಂತೆ ಗೃಹ ಸಚಿವ ಎಂ.ಬಿ. ಪಾಟೀಲ ಕೂಡ ಬಹಿರಂಗವಾಗಿ ಕ್ಷಮೆ ಕೇಳಬೇಕು’ ಎಂದು ಶಾಸಕ ಜಗದೀಶ ಶೆಟ್ಟರ್‌ ಆಗ್ರಹಿಸಿದರು.

ಮಂಗಳವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮಾಜಿ ಸಚಿವ ವಿನಯ ಕುಲಕರ್ಣಿ ಕೂಡ ಇತ್ತೀಚೆಗೆ ಕ್ಷಮೆ ಕೇಳಿದ್ದಾರೆ. ಈಗ ಎಂ.ಬಿ. ಪಾಟೀಲ ಅವರ ಸರದಿ. ವೀರಶೈವ–ಲಿಂಗಾಯತ ಧರ್ಮ ವಿಭಜನೆ ಮಾಡಿದರೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಎಂ.ಬಿ. ಪಾಟೀಲ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿದ್ದ ಪತ್ರದ ಸಾರಾಂಶ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ. ಹೀಗಾಗಿ ಈಗಲಾದರೂ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

‘ಮಾಧ್ಯಮಗಳಲ್ಲಿ ಸೋರಿಕೆಯಾಗಿರುವ ಪತ್ರ ನಾನು ಬರೆದಿಲ್ಲ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ. ಸ್ವತಃ ಅವರೇ ಗೃಹಸಚಿವರಾಗಿದ್ದಾರೆ. ಹೀಗಾಗಿ ತನಿಖೆಗೆ ಆದೇಶಿಸಬೇಕು. ಸತ್ಯಾಂಶ ಹೊರಬರುತ್ತದೆ. ಎಂ.ಬಿ. ಪಾಟೀಲ ಅವರ ಸ್ವಾರ್ಥದಿಂದ ವೀರಶೈವ–ಲಿಂಗಾಯತ ಸಮಾಜದವರು, ಸ್ವಾಮೀಜಿಗಳು ಹೋರಾಟದಲ್ಲಿ ಭಾಗವಹಿಸಿ ಬಲಿಪಶು ಆಗಿದ್ದಾರೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.