ADVERTISEMENT

ಶಿಂಗ್ರಿಹಳ್ಳಿ: ಆಸರೆಗೆ ಹಂಬಲಿಸುತ್ತಿರುವ ಕುಟುಂಬ

ಬುದ್ಧಿಮಾಂಧ್ಯ ಮಗನ ಜೊತೆ ಗೋದಾಮಿನಲ್ಲಿ ವಾಸವಿರುವ ಭರಮವ್ವ

ವಿಶ್ವನಾಥ ಡಿ.
Published 1 ಆಗಸ್ಟ್ 2024, 5:27 IST
Last Updated 1 ಆಗಸ್ಟ್ 2024, 5:27 IST
ಹರಪನಹಳ್ಳಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಕಿಟ್ ನ್ನು ವಿತರಿಸಲಾಯಿತು. ಯೋಜನಾಧಿಕಾರಿ ಸುಬ್ರಹ್ಮಣ್ಯ ಮತ್ತು ಪದಾಧಿಕಾರಿಗಳಿದ್ದರು
ಹರಪನಹಳ್ಳಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಕಿಟ್ ನ್ನು ವಿತರಿಸಲಾಯಿತು. ಯೋಜನಾಧಿಕಾರಿ ಸುಬ್ರಹ್ಮಣ್ಯ ಮತ್ತು ಪದಾಧಿಕಾರಿಗಳಿದ್ದರು   

ಹರಪನಹಳ್ಳಿ: ಕನಿಷ್ಠ ಸೌಲಭ್ಯಗಳಿಲ್ಲದೇ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ತಾಯಿಯು ಬುದ್ದಿಮಾಂಧ್ಯ ಮಗನ ಜೊತೆ ಗೋದಾಮಿನಲ್ಲಿ ವಾಸಿಸುವ ಸ್ಥಿತಿ ಇದೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಶಿಂಗ್ರಿಹಳ್ಳಿಯಲ್ಲಿರುವ ಮಡಿವಾಳರ ಭರಮವ್ವ ಕುಟುಂಬದ ಧಾರುಣ ಸ್ಥಿತಿಯಿದು. ಸಿಂಗ್ರಿಹಳ್ಳಿಯಲ್ಲಿ ಮಡಿವಾಳ ವೃತ್ತಿ ಮಾಡಿಕೊಂಡಿದ್ದ ಭರಮಕ್ಕನ ಪತಿ ಭೀಮಪ್ಪ ಅವರು ಅಕಾಲಿಕವಾಗಿ ಮರಣ ಹೊಂದಿದ್ದಾರೆ. ಬುದ್ದಿಮಾಂಧ್ಯನಾಗಿದ್ದ ಹಿರಿಯ ಪುತ್ರ ಹನುಮಂತ ಮನೆಬಿಟ್ಟು ಹೋದವನು ಹಿಂತಿರುಗಿ ಬರಲೇ ಇಲ್ಲ. ಇದೇ ಚಿಂತೆಯಲ್ಲಿ ಸೊರಗಿದ ಭರಮವ್ವನ ಕಣ್ಣಿನಲ್ಲಿ ದೋಷ ಕಾಣಿಸಿಕೊಂಡು ಮಾನಸಿಕ, ದೈಹಿಕವಾಗಿ ಕುಗ್ಗಿದ್ದಾರೆ. ಬಟ್ಟೆ ತೊಳೆಯುವ ಕುಲಕಸುಬಿನಿಂದ ಜೀವನ ಮುನ್ನಡೆಸಲು ಸಾಧ್ಯವಾಗಲಿಲ್ಲ.

ಸ್ವಂತ ಮನೆಯಿಲ್ಲದೇ ಅಲ್ಲಲ್ಲಿ ವಾಸವಿದ್ದ ಕುಟುಂಬವೂ, ಈಗ ಗ್ರಾಮದ ಸ್ವಸಹಾಯ ಸಂಘಕ್ಕೆ ಸೇರಿದ್ದ ಪಾಳುಬಿದ್ದ ಗೋದಾಮಿನಲ್ಲಿ ನೆಲೆ ಕಂಡಿದೆ. ಬುದ್ದಿಮಾಂಧ್ಯ ಪುತ್ರ ಕೆಂಚಪ್ಪ ಜೊತೆ ಭರಮ‌ವ್ವ ದಿನ ಕಳೆಯುವಂತಾಗಿದೆ. ಬುದ್ದಿಮಾಂಧ್ಯ ಪುತ್ರ ಕೆಂಚಪ್ಪ ಯಾರಾದರೂ ತಿನ್ನಲು ಕೊಟ್ಟರೆ ಅದನ್ನು ಮನೆಗೆ ತಂದು ತಾಯಿ ಜೊತೆಗೆ ಸೇವಿಸಿ ಅಂದಿನ ದಿನ ಕಳೆಯುತ್ತಾರೆ. ದಯನೀಯ ಪರಿಸ್ಥಿತಿಯಲ್ಲಿರುವ ಶಿಂಗ್ರಿಹಳ್ಳಿಯ ಭರಮವ್ವನಿಗೆ ಪಡಿತರ ಚೀಟಿ ಮತ್ತು ಸರ್ಕಾರದ ಸೌಲಭ್ಯಗಳಿಲ್ಲ.

ADVERTISEMENT

‘ಹೀನ ಸ್ಥಿತಿಗೆ ತಲುಪಿದ ಈ ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆಗಳು ನೆರವಿಗೆ ಧಾವಿಸಬೇಕಿದೆ. ನಿರ್ಗತಿಕರ ಮನೆಗೆ ಸವಲತ್ತುಗಳನ್ನು ತಲುಪಿಸಿದರೆ, ಸರ್ಕಾರ ರೂಪಿಸುವ ಮನೆ ಮನೆಗೆ ಕಾರ್ಯಕ್ರಮಗಳು ಅರ್ಥಪೂರ್ಣಗೊಳ್ಳುತ್ತವೆ’ ಎನ್ನುತ್ತಿದ್ದಾರೆ ಗ್ರಾಮಸ್ಥರು.

ನೆರವಿಗೆ ಧಾವಿಸಿದ ಗ್ರಾಮಾಭಿವೃದ್ದಿ ಯೋಜನ: ಸಿಂಗ್ರಿಹಳ್ಳಿ ಮಡಿವಾಳರ ಭರಮವ್ವ ಕುಟುಂಬದ ಪರಿಸ್ಥಿತಿ ಬಗ್ಗೆ ಗ್ರಾಮದಲ್ಲಿ ಸುದ್ದಿ ಹರಡಿತ್ತು. ಈ ಬಗ್ಗೆ ಮಾಹಿತಿ ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪದಾಧಿಕಾರಿಗಳು ಮೊದಲು ಅವರಿಗೆ ನಿತ್ಯದ ಅಗತ್ಯವಸ್ತುಗಳನ್ನು ಖರೀದಿಸಿ ತಂದು ಹಸ್ತಾಂತರಿಸಿದರು.

ಯೋಜನಾಧಿಕಾರಿ ಸುಬ್ರಹ್ಮಣ್ಯ ಮಾತನಾಡಿ, ‘ನಿರ್ಗತಿಕ ಕುಟುಂಬಕ್ಕೆ ವೀರೇಂದ್ರ ಹೆಗ್ಗಡೆ ಅವರು ಆದೇಶದ ಮೇರೆಗೆ ಬಟ್ಟೆ, ಚಾಪೆ, ದಿಂಬು, ಬೆಡ್ ಶೀಟ್, ಪಾತ್ರೆಗಳು, ದಿನಸಿ ಸಾಮಾಗ್ರಿಗಳಿರುವ ವಾತ್ಸಲ್ಯ ಕಿಟ್ ವಿತರಿಸಲಾಗಿದೆ. ಇನ್ನೂ ಮುಂದೆ ನಮ್ಮ ಸಂಸ್ಥೆ ಪ್ರತಿ ತಿಂಗಳು ಭರಮವ್ವ ಅವರಿಗೆ ₹1000 ಮಾಸಾಶನ ಕೊಡಲು ನಿರ್ಧರಿಸಿದೆ’ ಎಂದು ತಿಳಿಸಿದರು.

 ಹರಪನಹಳ್ಳಿ ತಾಲ್ಲೂಕು ಶಿಂಗ್ರಿಹಳ್ಳಿಯ ಗೋದಾಮಿನಲ್ಲಿ ವಾಸವಿರುವ ಭರಮವ್ವ ಮತ್ತು ಕೆಂಚಪ್ಪ ಕುಟುಂಬ
 ಹರಪನಹಳ್ಳಿ ತಾಲ್ಲೂಕು ಶಿಂಗ್ರಿಹಳ್ಳಿಯ ಗೋಡಾನ್ ನಲ್ಲಿ ವಾಸವಿರುವ ಭರಮವ್ವ ಮತ್ತು ಕೆಂಚಪ್ಪ ಕುಟುಂಬ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.