ಕುಡತಿನಿ (ಸಂಡೂರು) : ಪಟ್ಟಣದ ಇಂದಿರಾ ನಗರದಲ್ಲಿರುವ ಪಶು ಚಿಕಿತ್ಸಾಯಲದಲ್ಲಿ ಪಶು ವೈದ್ಯಾಧಿಕಾರಿ, ಪಶು ವೈದ್ಯ ಪರಿವೀಕ್ಷಕ, ‘ಡಿ ಗ್ರೂಪ್’ ಸಿಬ್ಬಂದಿ ಸೇರಿದಂತೆ ಕಾಯಂ ಹುದ್ದೆಗಳು ಸುಮಾರು 10 ವರ್ಷಗಳಿಂದ ಭರ್ತಿಯಾಗದೇ ನಿತ್ಯ ರೈತಾಪಿ ಜನರು ಜಾನುವಾರುಗಳ ಸೂಕ್ತ ಚಿಕತ್ಸೆಗಾಗಿ ಪರಿತಪಿಸುವಂತಾಗಿದೆ.
ಪಶು ಚಿಕಿತ್ಸಾಲಯಕ್ಕೆ ಸರ್ಕಾರದ ಅನುದಾನದಲ್ಲಿ ಈಚೆಗೆ ನೂತನ, ಆಧುನಿಕ ಮಾದರಿಯ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಅಗತ್ಯ ವೈದ್ಯರನ್ನು ನೇಮಕ ಮಾಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರಕ್ಕೆ ಪ್ರಸ್ತುತ ಹೊರ ಸಂಪನ್ಮೂಲ ‘ಡಿ ಗ್ರೂಪ್’ ಸಿಬ್ಬಂದಿಯೇ ಆಧಾರವಾಗಿದ್ದು, ಈ ಸಿಬ್ಬಂದಿಯು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿನ ರೈತರ ಜಾನುವಾರುಗಳಿಗೆ ಪ್ರಭಾರ ವೈದ್ಯರ ಸಲಹೆ, ಮಾರ್ಗದರ್ಶನದಂತೆ ಸಣ್ಣ ಪ್ರಮಾಣದ ಚಿಕಿತ್ಸೆ ನೀಡುತ್ತಿದ್ದಾರೆ.
ಸರ್ಕಾರದಿಂದ ಪಶು ವೈದ್ಯಾಧಿಕಾರಿ– 1, ಪಶು ವೈದ್ಯ ಪರಿವೀಕ್ಷಕ–1, ‘ಡಿ ಗ್ರೂಪ್’ ಸಿಬ್ಬಂದಿ- 2 ಒಟ್ಟು ನಾಲ್ಕು ಕಾಯಂ ಹುದ್ದೆಗಳು ಮಂಜೂರಾಗಿವೆ. ಕಳೆದ ಹತ್ತು ವರ್ಷಗಳಿಂದ ಕನಿಷ್ಠ ಒಬ್ಬ ವೈದ್ಯ, ಸಿಬ್ಬಂದಿ ನೇಮಕ ಮಾಡದೇ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ನಡೆಯ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ.
ಪಟ್ಟಣದಲ್ಲಿ 2021ರ ಜನಗಣತಿಯ ಪ್ರಕಾರ ದನ– 517, ಎಮ್ಮೆ– 323, ಕುರಿ– 25,725, ಮೇಕೆ– 4,935, ನಾಯಿ– 226, ಕೋಳಿ - 90,890, ಹಂದಿ- 100 ದೊಡ್ಡ ಪ್ರಮಾಣದ ಜಾನುವಾರುಗಳಿವೆ. ಪಟ್ಟಣದಲ್ಲಿನ ಬಡ ರೈತರ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದಿರುವುದು ಆತಂಕದ ವಿಚಾರವಾಗಿದೆ.
ಪ್ರಸ್ತುತ ಮಳೆಗಾಲ ಆರಂಭವಾಗಿದ್ದರಿಂದ ಜಾನುವಾರುಗಳಿಗೆ ಗಂಟಲು, ಕರಳು ಬೇನೆ, ನೆಗಡಿ ರೋಗ, ಚೆಪ್ಪೆ ರೋಗ, ಕಾಲು ಬಾಯಿ ಜ್ವರ ಸೇರಿದಂತೆ ಇತರೆ ಕಾಯಿಲೆಗಳು ಹರಡುವ ಸಂಭವವಿದ್ದು, ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರು ದೊರೆಯದೇ ಇರುವುದರಿಂದ ತೊಂದರೆಯಾಗಿದೆ. ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಿದರೇ ಪಟ್ಟಣದಲ್ಲಿನ ಬಡ ರೈತರಿಗೆ ಬಹಳ ಅನುಕೂಲವಾಗುತ್ತದೆ. ವೈದ್ಯರ ಕೊರತೆಯಿಂದ ಬಹಳಷ್ಟು ಕುರಿಗಾಯಿಗಳು ತಮ್ಮ ಜಾನುವಾರುಗಳಿಗೆ ತಾವೇ ಲಸಿಕೆ, ಇತರೆ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.
ಸಿಬ್ಬಂದಿ ಕೊರೆತೆ ನಿಗಿಸಲು, ಜಾನುವಾರುಗಳ ಸಂರಕ್ಷಣೆ, ಚಿಕಿತ್ಸೆಯ ದೃಷ್ಠಿಯಿಂದ ಪಶು ಪಾಲನಾ, ಪಶು ಚಿಕಿತ್ಸಾಲಯದ ಜಿಲ್ಲಾ ಮಟ್ಟದ ಅಧಿಕಾರಿಗಳು ಬಳ್ಳಾರಿ ತಾಲ್ಲೂಕಿನ ಪಶು ವೈದ್ಯಾಧಿಕಾರಿ ಡಾ.ಸ್ನೇಹ ಅವರನ್ನು ಹೆಚ್ಚುವರಿಯಾಗಿ ಈ ಕೇಂದ್ರವನ್ನು ನೇಮಿಸಿದ್ದಾರೆ. ಆದರೆ ಅವರು ಹೆಸರಿಗೆ ಮಾತ್ರ ಇದ್ದು, ಒಂದು ದಿನವೂ ಸಹ ಆಸ್ಪತ್ರೆಯ ಕಡೆ ಸುಳಿಯುವುದಿಲ್ಲ ಎಂದು ಜನರ ಆರೋಪವಾಗಿದೆ.
ಕುಡತಿನಿ ಪಟ್ಟಣ, ಸುತ್ತಿನ ಗ್ರಾಮಗಳ ರೈತಾಪಿ ಜನರ ಒತ್ತಾಯದ ಮೇರೆಗೆ ಇಲಾಖೆಯ ಅಧಿಕಾರಿಗಳು ಹರಗಿನಡೋಣಿ ಗ್ರಾಮದಲ್ಲಿನ ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯ ಪರಿವೀಕ್ಷಕರನ್ನು ವಾರದಲ್ಲಿ ಮೂರು ದಿನ ಕುಡತಿನಿಯ ಪಶು ಆಸ್ಪತ್ರೆಯಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದರಿಂದ ರೈತರು ತುಸು ನೆಮ್ಮದಿಯ ವಿಚಾರವಾಗಿದೆ.
ಕುಡತಿನಿಯಲ್ಲಿ ರೈತಾಪಿ ಜನರು ಹೆಚ್ಚಿನ ಪ್ರಮಾಣದಲ್ಲಿ ವಾಸ ಮಾಡುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳಿವೆ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಕೊರೆತೆಯಿಂದ ಸೂಕ್ತ ಚಿಕಿತ್ಸೆಗಾಗಿ ಪರತಪಿಸುವಂತೆಯಾಗಿದೆ.ಕಂದಾರಿ ರಾಮಾಂಜಿನಪ್ಪ, ಕುಡತಿನಿ ಪಟ್ಟಣದ ನಿವಾಸಿ
ಹಲವಾರು ವರ್ಷಗಳಿಂದ ಖಾಲಿ ಹುದ್ದೆ ಸಮಸ್ಯೆ ಇದೆ. ರಾಜ್ಯದ ಎಲ್ಲ ಕೇಂದ್ರಗಳಲ್ಲಿ ಇದೇ ಪರಿಸ್ಥಿತಿ ಇದೆ. ಮುಂದಿನ ಸಾಮಾನ್ಯ ವರ್ಗಾವಣೆಯಲ್ಲಿ ಕೇಂದ್ರಕ್ಕೆ ನೂತನ ವೈದ್ಯರು ಬರುವ ನಿರೀಕ್ಷೆ ಇದೆಹನುಮಂತ ನಾಯ್ಕ್ ಕಾರಬಾರಿ, ಉಪ ನಿರ್ದೇಶಕ ಜಿಲ್ಲಾ ಪಶು ಪಾಲನಾ ಮತ್ತು ಪಶು ಚಿಕಿತ್ಸಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.