ಮಳೆ
ಬಳ್ಳಾರಿ: ರಾಜ್ಯದ ಮಲೆನಾಡು ಮತ್ತು ಕರಾವಳಿಯಲ್ಲಿ ಜುಲೈ ತಿಂಗಳಲ್ಲಿ ಮಳೆ ಅಬ್ಬರಿಸಿದರೆ, ಉತ್ತರ ಮತ್ತು ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಮಳೆ ಕೈಕೊಟ್ಟಿದೆ. 7 ಜಿಲ್ಲೆಗಳಲ್ಲಿ ಶೇ 28 ರಿಂದ ಶೇ 49ರಷ್ಟು ಮಳೆ ಕೊರತೆ ಆಗಿದೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ, ಕೋಲಾರದಲ್ಲಿ ಶೇ 49, ಚಿಕ್ಕಬಳ್ಳಾಪುರ–ಶೇ 43, ಬೆಂಗಳೂರು ಗ್ರಾಮಾಂತರ–ಶೇ 34, ಯಾದಗಿರಿ–ಶೇ 32, ರಾಯಚೂರು–ಶೇ 29, ವಿಜಯಪುರ ಶೇ–29 ಮತ್ತು ಕೊಪ್ಪಳದಲ್ಲಿ ಶೇ 28ರಷ್ಟು ಕಡಿಮೆ ಮಳೆಯಾಗಿದೆ.
ಬೆಂಗಳೂರು ನಗರದಲ್ಲಿ ಶೇ 17, ವಿಜಯನಗರ–ಶೇ 13, ಬಳ್ಳಾರಿ–ಶೇ 4, ರಾಮನಗರ–ಶೇ 1ರಷ್ಟು ಮಳೆ ಕಡಿಮೆ ಆಗಿದೆ. ತಾಲ್ಲೂಕುವಾರು ಮಳೆ ಹಂಚಿಕೆ ಪ್ರಮಾಣ ಗಮನಿಸಿದರೆ, ರಾಜ್ಯದ 83 ತಾಲ್ಲೂಕುಗಳಲ್ಲಿ ಮಳೆ ಕೊರತೆ ಆಗಿದೆ.
ದಕ್ಷಿಣ ಒಳನಾಡು: 10 ಜಿಲ್ಲೆಗಳ ಪೈಕಿ ಮಂಡ್ಯ, ಮೈಸೂರು, ಚಾಮರಾಜನಗರ, ದಾವಣಗೆರೆ ಹೊರತುಪಡಿಸಿ ಇನ್ನುಳಿದ 6 ಜಿಲ್ಲೆಗಳ 32 ತಾಲ್ಲೂಕುಗಳಲ್ಲಿ ಮಳೆ ನಿರೀಕ್ಷೆಗಿಂತ ಕಡಿಮೆ ಆಗಿದೆ. 24 ತಾಲ್ಲೂಕುಗಳಲ್ಲಿ ಶೇ 20ರಿಂದ ಶೇ 63ರಷ್ಟು ಕಡಿಮೆ ಮಳೆಯಾದರೆ, 8 ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಶೇ 1ರಿಂದ ಶೇ 20ರಷ್ಟು ಕೊರತೆ ಆಗಿದೆ. ಕೋಲಾರ, ಮುಳಬಾಗಿಲು ತಾಲ್ಲೂಕಿನಲ್ಲಿ ಕ್ರಮವಾಗಿ ಶೇ 63, ಶೇ 62ರಷ್ಟು ಕಡಿಮೆ ಮಳೆ ಆಗಿದೆ.
ಉತ್ತರ ಒಳನಾಡು: 14 ಜಿಲ್ಲೆಗಳ ಪೈಕಿ 51 ತಾಲ್ಲೂಕುಗಳಲ್ಲಿ ಮಳೆ ಕೈಕೊಟ್ಟಿದೆ. ಈ ಪೈಕಿ 34 ತಾಲ್ಲೂಕುಗಳಲ್ಲಿ ಶೇ 20ರಿಂದ 65ರಷ್ಟು ಮಳೆ ಕೊರತೆಯಾಗಿದೆ. 17 ತಾಲ್ಲೂಕುಗಳಲ್ಲಿ ಶೇ 1ರಿಂದ ಶೇ 18ರಷ್ಟು ಮಳೆ ಪ್ರಮಾಣ ಕುಸಿದಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಶೇ 65ರಷ್ಟು ಮಳೆ ಕೊರತೆಯಾಗಿದೆ. ಇಲ್ಲಿ ಕಳೆದ ತಿಂಗಳು 11.3 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, 3.8 ಸೆಂ.ಮೀ ಮಳೆಯಷ್ಟೇ ಆಗಿದೆ.
‘ಜುಲೈ ತಿಂಗಳ ಮಳೆ ನಿರ್ಣಾಯಕವಾಗಿದ್ದು, ಬಿತ್ತನೆ ಮತ್ತು ಬೆಳೆಗೆ ಮಳೆ ಅವಶ್ಯ. ಈ ತಿಂಗಳಲ್ಲಿ ಮಳೆ ಕೊರತೆಯಾದರೆ, ಅದು ನೇರವಾಗಿ ಬೆಳೆ ಮತ್ತು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಮೇ ತಿಂಗಳೂ ಮತ್ತು ಜೂನ್ ಅರ್ಧ ಭಾಗದವರೆಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಅಬ್ಬರಿಸಿತ್ತು. ಜೂನ್ ಮೊದಲ ವಾರದಲ್ಲೇ ಬಹುತೇಕರು ಬಿತ್ತನೆ ಶುರು ಮಾಡಿದ್ದರು. ನಂತರ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಬಿತ್ತನೆ ಪ್ರದೇಶದಲ್ಲಿ ಮಳೆ ಕೊರತೆಯಾಗಿದೆ’ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದ ಬಿತ್ತನೆಯಾದ ಬೆಳೆ ಬದುಕಿಕೊಂಡಿದೆ. ಆದರೆ, ಸೊಂಪಾಗಿ ಬೆಳೆದಿಲ್ಲ. ರಾಜ್ಯದ ಎಲ್ಲ ಜಲಾಶಯಗಳಲ್ಲೂ ನೀರಿನ ಸಂಗ್ರಹ ಉತ್ತಮವಾಗಿದ್ದು, ನೀರಾವರಿ ಪ್ರದೇಶದ ಬೆಳೆಗೆ ತೊಂದರೆ ಇಲ್ಲ. ಮಳೆಯಾಶ್ರಿತ ಪ್ರದೇಶದಲ್ಲಿ ಮಳೆಯಾಗದಿದ್ದರೆ, ಇಳುವರಿ ಪ್ರಮಾಣ ಕುಸಿಯಬಹುದು’ ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಕೆಂಗೇಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.