ADVERTISEMENT

ಉತ್ತಮ ಪೊಲೀಸ್ ಠಾಣೆ ಪಟ್ಟಿ: ಸಿರಿಗೇರಿಗೆ ಅಧಿಕಾರಿಗಳ ಭೇಡಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 4:11 IST
Last Updated 9 ಅಕ್ಟೋಬರ್ 2025, 4:11 IST
ತೆಕ್ಕಲಕೋಟೆ ಸಮೀಪದ ಸಿರಿಗೇರಿ ಪೊಲೀಸ್ ಠಾಣೆಗೆ ಕೇಂದ್ರ ಗೃಹ ವ್ಯವಹಾರಗಳ ಮೌಲ್ಯಮಾಪನಾಧಿಕಾರಿ ಭೇಟಿನೀಡಿ ಮೂಲಸೌಕರ್ಯ ಕುರಿತು ಪರಿಶೀಲನೆ ನಡೆಸಿದರು
ತೆಕ್ಕಲಕೋಟೆ ಸಮೀಪದ ಸಿರಿಗೇರಿ ಪೊಲೀಸ್ ಠಾಣೆಗೆ ಕೇಂದ್ರ ಗೃಹ ವ್ಯವಹಾರಗಳ ಮೌಲ್ಯಮಾಪನಾಧಿಕಾರಿ ಭೇಟಿನೀಡಿ ಮೂಲಸೌಕರ್ಯ ಕುರಿತು ಪರಿಶೀಲನೆ ನಡೆಸಿದರು   

ತೆಕ್ಕಲಕೋಟೆ: ಸಮೀಪದ ಸಿರಿಗೇರಿ ಪೊಲೀಸ್ ಠಾಣೆಗೆ ಕೇಂದ್ರ ಗೃಹ ವ್ಯವಹಾರಗಳ ತಂಡದ ಮೌಲ್ಯಮಾಪನಾಧಿಕಾರಿ ಬುಧವಾರ ಭೇಟಿನೀಡಿ ಉತ್ತಮ ಪೊಲೀಸ್ ಠಾಣೆ ಆಯ್ಕೆಯ ಭೌತಿಕ ಪರಿಶೀಲನೆ ಹಾಗೂ ನಾಗರಿಕರ ಪ್ರತಿಕ್ರಿಯೆ ಆಲಿಸುವ ಸಭೆ ನಡೆಸಿದರು.

‘ಸೇವಾ ದೃಷ್ಟಿಯಿಂದ ಅತ್ಯುತ್ತಮವಾಗಿರುವ ದೇಶದ 10 ಪೊಲೀಸ್ ಠಾಣೆಗಳ ಪಟ್ಟಿ ತಯಾರಿಸಲು ಭೌತಿಕ ಸಮೀಕ್ಷೆ ಕಾರ್ಯ ನಡೆದಿದ್ದು, ಈ ಹಿನ್ನೆಲೆಯಲ್ಲಿ ಭೇಟಿ ನೀಡಲಾಗಿದೆ’ ಎಂದು ತಂಡದ ಮೌಲ್ಯಮಾಪನಾಧಿಕಾರಿ ಸಯ್ಯದ್ ಮಹಮ್ಮದ್ ಹಸನ್ ತಿಳಿಸಿದರು.

‘ಕೇಂದ್ರ ಗೃಹ ಸಚಿವಾಲಯವು ದೇಶದಾದ್ಯಂತ 15 ಸಾವಿರ ಠಾಣೆಗಳಲ್ಲಿ 100 ಉತ್ತಮ ಠಾಣೆಗಳನ್ನು ಆಯ್ಕೆ ಮಾಡಿದ್ದು ಅದರಲ್ಲಿ ರಾಜ್ಯದ ಮೂರು ಠಾಣೆಗಳನ್ನು ಗುರುತಿಸಲಾಗಿದೆ. ರಾಯಚೂರು ಜಿಲ್ಲೆಯ ಕವಿತಾಳ ಮತ್ತು ಬಳಗಾನೂರು ಠಾಣೆ ಹಾಗೂ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಪೊಲೀಸ್ ಠಾಣೆ ಪಟ್ಟಿಯಲ್ಲಿ ಸ್ಥಾನ ಪಡೆದಿವೆ’ ಎಂದು ತಿಳಿಸಿದರು.

ADVERTISEMENT

‘ಆಯಾ ಠಾಣೆಗಳ ವಾರ್ಷಿಕ ಕಾರ್ಯನಿರ್ವಹಣೆ, ಮೌಲ್ಯಮಾಪನ ಮತ್ತು ಸಮೀಕ್ಷೆ, ಅಪರಾಧ ತಡೆಗಟ್ಟುವಿಕೆ ಮತ್ತು ನಿಯಂತ್ರಣ, ತನಿಖೆ, ಚಾರ್ಜ್ ಶೀಟ್‌ಗಳ ಸಲ್ಲಿಕೆ ಆಧಾರದ ಮೇಲೆ ಶ್ರೇಯಾಂಕ ನೀಡಲಾಗಿದೆ. ಠಾಣೆಯ ಮೂಲಸೌಕರ್ಯ ಮತ್ತು ನಾಗರಿಕರ ಪ್ರತಿಕ್ರಿಯೆ ಹಾಗೂ ಇನ್ನಿತರ ನಿಯತಾಂಕಗಳ ಮೇಲೆ ಕಾರ್ಯಕ್ಷಮತೆಯ ಮಾಪನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಠಾಣೆಯ ಕುರಿತು ಚರ್ಚಿಸಿದರು. ಅಲ್ಲದೆ, ಸಹಾಯವಾಣಿ ಸಂಖ್ಯೆ 112ಕ್ಕೆ ಕರೆಮಾಡಿ ಸಿರಿಗೇರಿಯ ವಿಳಾಸ ನೀಡಿ ಸಹಾಯಕ್ಕೆ ಬರುವಂತೆ ದೂರು ದಾಖಲಿಸಿದರು. ಅವರ ಕರೆಗೆ ಸ್ಫಂದಿಸಿದ ಪೊಲೀಸರು ಕೇವಲ ಏಳು ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಿದ್ದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯ ಅಪರಾಧ ವಿಭಾಗದ ಡಿವೈಎಸ್ಪಿ ವೆಂಕಟೇಶ ಯು., ಸಿರುಗುಪ್ಪ ಸಿಪಿಐ ವೈ.ಎನ್. ಹನುಮಂತಪ್ಪ, ತೆಕ್ಕಲಕೋಟೆ ಸಿಪಿಐ ಚಂದನ ಗೋಪಾಲ, ಪಿಎಸ್ಐ ಶಶಿಧರ ನಾಯಕ, ತೆಕ್ಕಲಕೋಟೆ ಪಿಎಸ್ಐ ಸದ್ದಾಂ ಹುಸೇನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.