ADVERTISEMENT

ಸಿರುಗುಪ್ಪ | ಸೋರುತ್ತಿರುವ ಸರ್ಕಾರಿ ಕಚೇರಿಗಳು

ಒದ್ದೆಯಾಗಿ ಹಾಳಾಗುತ್ತಿವೆ ಕಡತಗಳು | ಕಾರ್ಯನಿರ್ವಹಣೆಗೆ ತೊಡಕು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 7:15 IST
Last Updated 29 ಸೆಪ್ಟೆಂಬರ್ 2025, 7:15 IST
ಸಿರುಗುಪ್ಪ ನಗರಸಭೆಯ ಮೊದಲ ಮಹಡಿಯು ಮಳೆ ನೀರಿಗೆ ಸೋರುತ್ತಿರುವುದು.
ಸಿರುಗುಪ್ಪ ನಗರಸಭೆಯ ಮೊದಲ ಮಹಡಿಯು ಮಳೆ ನೀರಿಗೆ ಸೋರುತ್ತಿರುವುದು.   

ಸಿರುಗುಪ್ಪ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ವಿವಿಧ ಸರ್ಕಾರಿ ಕಚೇರಿಗಳು ಸೋರುತ್ತಿವೆ. ಹೀಗಾಗಿ, ಅಧಿಕಾರಿಗಳ, ಸಿಬ್ಬಂದಿಯ ನಿತ್ಯದ ಕಾರ್ಯನಿರ್ವಹಣೆಗೆ ತೊಂದರೆಯಾಗಿದೆ. 

ತೀರಾ ಈಚಿನ ವರ್ಷದಲ್ಲಿ ನಿರ್ಮಿಸಿದ ಕಟ್ಟಡಗಳಲ್ಲೇ ಸೋರಿಕೆ ಸಮಸ್ಯೆ ಹೆಚ್ಚುತ್ತಿದೆ. ಅವುಗಳಲ್ಲಿ ಅಂಗನವಾಡಿ, ಶಾಲೆಗಳು, ವಿದ್ಯಾರ್ಥಿ ವಸತಿ ನಿಲಯಗಳು, ಆಸ್ಪತ್ರೆ, ತಾಲ್ಲೂಕು ಮಟ್ಟದ ಕಚೇರಿಗಳು ಸೇರಿವೆ. ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯ ಭವನಗಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ನಗರದ ತಹಶೀಲ್ದಾರ್‌ ಕಚೇರಿ ಮತ್ತು ನಗರಸಭೆ ಮೊದಲ ಮಹಡಿಯಲ್ಲಿ ಮಳೆನೀರು ಸೋರಿಕೆ ಸಮಸ್ಯೆ ವಿಪರೀತವಾಗಿದೆ. ಕೃಷಿ ಇಲಾಖೆ, ಕೃಷಿ ಸಂಶೋದನ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಶು ಅಭಿವೃದ್ದಿ ಯೋಜನಾ ಇಲಾಖೆ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸಿರುಗುಪ್ಪ ಹೊಬಳಿಯ ರೈತ ಸಂಪರ್ಕ ಕೇಂದ್ರ, ಸರ್ಕಾರಿ ಅಥಿತಿ ಗೃಹ ಸೇರಿದಂತೆ ಹಲವು ಕಚೇರಿಳ ಚಾವಣಿಯಲ್ಲಿ ನೀರು ಇಂಗುತ್ತಿದ್ದು ಕಡತಗಳು ಒದ್ದೆಯಾಗಿ ಹಾಳಾಗುತ್ತಿವೆ. 

ADVERTISEMENT

ಕೆಲ ಇಲಾಖೆಗಳ ಕಟ್ಟಡಗಳು ಹಳೆಯದಾಗಿದ್ದು, ಪ್ರತಿ ವರ್ಷ ಅವುಗಳ ಚಾವಣಿ ದುರಸ್ತಿ ಮಾಡಿಸುತ್ತಾರೆ. ಆದರೂ, ಮಳೆಯ ನೀರು ಒಳಗೆ ಸೋರುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ಜೋರಾಗಿ ಮಳೆಯಾದರೆ ಬಸ್ ನಿಲ್ದಾಣದಲ್ಲಿ ಮಳೆಯ ನೀರು ಒಳಗೆ ಬರುವ ಕಾರಣ ಸಾರ್ವಜನಿಕರಿಗೆ ಕುಳಿತುಕೊಳ್ಳಲಾಗದ ಸ್ಥಿತಿ ಇದೆ. ಗ್ರಾಮೀಣ ಭಾಗದ ಬಹುತೇಕ ಶಾಲೆಯ ಕಟ್ಟಡಗಳಲ್ಲಿ ಮಳೆಯ ಸೋರಿಕೆಯಿಂದ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ.

Quote - ಮಿನಿ ವಿಧಾನಸೌಧ ನಿರ್ಮಿಸಿಲು ಸರ್ಕಾರಕ್ಕೆ ಪ್ರಸ್ಥಾವನೆ ಹೋಗಿದೆ. ಸ್ಥಳ ಕೂಡ ನಿಗದಿಯಾಗಿದೆ. ಅನುದಾನ ಬಂದಕೂಡಲೇ ಕಾರ್ಯರೂಪಕ್ಕೆ ತರಲಾಗುವುದು. – ಗೌಸಿಯ ಬೇಗಂ ತಹಶೀಲ್ದಾರ್‌ ಸಿರುಗುಪ್ಪ

Quote - ಬಹುತೇಕ ತಾಲ್ಲೂಕಿನ ಸರ್ಕಾರಿ ಕಚೇರಿಗಳು ಅಂಗನವಾಡಿಗಳು ಸೇರಿದಂತೆ ಶಾಲೆಗಳಲ್ಲಿ ಮಳೆನೀರು ಸೋರಿಕೆ ಸಮಸ್ಯೆ ಇದೆ. ಅಧಿಕಾರಿಗಳು ಶಾಸಕರು ಸಮಸ್ಯೆ ಪರಿಹರಿಸಲು ಗಮನಹರಿಸಬೇಕು. ಸೋಮಯ್ಯ ಸಾಮಾಜಿಕ ಕಾರ್ಯಕರ್ತ ಸಿರುಗುಪ್ಪ

Quote - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಶು ಅಭಿವೃದ್ದಿ ಯೋಜನಾ ಇಲಾಖೆ ಕಟ್ಟಡ ಹಳೆದಾಗಿದ್ದು ಇದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಪ್ರಸ್ಥಾವನೆ ಸಲ್ಲಿಸಲಾಗಿದೆ. ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೆವೆ. ಪ್ರದೀಪ್‌ ಕುಮಾರ್‌ ಸಿಡಿಪಿಒ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.