ADVERTISEMENT

ಸಿರುಗುಪ್ಪ | ಬಳಕೆಗೆ ಬಾರದ ಪಿಂಕ್ ಶೌಚಾಲಯ: ನಗರಸಭೆ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಮೇ 2025, 5:44 IST
Last Updated 1 ಮೇ 2025, 5:44 IST
ಸಿರುಗುಪ್ಪ ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪಿಂಕ್ ಶೌಚಾಲಯದ ಬಾಗಿಲು ಬಂದ್ ಆಗಿದೆ
ಸಿರುಗುಪ್ಪ ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪಿಂಕ್ ಶೌಚಾಲಯದ ಬಾಗಿಲು ಬಂದ್ ಆಗಿದೆ   

ಸಿರುಗುಪ್ಪ: ನಗರದ ಬಸ್ ನಿಲ್ದಾಣದ ಪಕ್ಕದಲ್ಲಿನ ‘ಅವಳು–ಮಹಿಳಾ ಪಿಂಕ್ ಶೌಚಾಲಯ’ ಮತ್ತು ಮಗುವಿಗೆ ತಾಯಿ ಹಾಲುಣಿಸುವ ಕೇಂದ್ರ, ವಿಶ್ರಾಂತಿ ಕೊಠಡಿ, ಸ್ನಾನಗೃಹ ಕಟ್ಟಡ ಉದ್ಘಾಟನೆಗೊಂಡರೂ ಬಳಕೆಗೆ ಸಿಗದೇ ನಿತ್ಯವೂ ಮಹಿಳೆಯರು ಮುಜುಗರ ಅನುಭವಿಸುವಂತಾಗಿದೆ.

ಕಳೆದ ಐದು ತಿಂಗಳಿನಿಂದ ಸಾರ್ವಜನಿಕ ಬಸ್ ನಿಲ್ದಾಣದ ಮಹಿಳಾ ಶೌಚಾಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಹಿಳೆಯರಿಗಾಗಿ ಶೌಚಾಲಯ ಇಲ್ಲದಂತಾಗಿದೆ. ಮಹಿಳಾ ಪ್ರಯಾಣಿಕರು ‘ಅವಳು’ ಮಹಿಳಾ ಪಿಂಕ್ ಶೌಚಾಲಯಕ್ಕೆ ಹೋಗಿ, ವಾಪಸ್ ಬರುವಂತಾಗಿದೆ.

ಬಸ್ ನಿಲ್ದಾಣ, ಇಂದಿರಾ ಕ್ಯಾಂಟೀನ್, ಮಾರುಕಟ್ಟೆ ಪ್ರದೇಶದ ಮಧ್ಯಭಾಗದಲ್ಲಿದ್ದರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ನೆಲ ಮತ್ತು ಒಂದು ಅಂತಸ್ತಿನ ಕಟ್ಟಡ ಬಳಸದೇ ನಿರುಪಯುಕ್ತವಾಗಿದ್ದು, ನಾಮ ಫಲಕ ನೋಡಿ ಅತ್ತ ಸುಳಿಯುವ ಮಹಿಳೆಯರು ಬೀಗ ಜಡಿದ ಕೊಠಡಿ ನೋಡಿಕೊಂಡು ಹಿಂತಿರುಗುವಂತಾಗಿದೆ.

ADVERTISEMENT

2021–22ನೇ ಸಾಲಿನ ಅಮೃತ ನಿರ್ಮಲ ಯೋಜನೆಯಡಿ ₹26 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಪಿಂಕ್ ಶೌಚಾಲಯ ಮತ್ತು ಹಾಲುಣಿಸುವ ಕೇಂದ್ರ 2 ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾಗಿದ್ದು, ಜನವರಿ ತಿಂಗಳಲ್ಲಿ ಶಾಸಕ, ನಗರಸಭಾಧ್ಯಕ್ಷರು, ನಗರ ಸಭೆ ಆಯುಕ್ತರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿದ್ದರೂ ಬಳಕೆಗೆ ಸಿಗದಂತಾಗಿದೆ.

ಈ ಕೇಂದ್ರದಲ್ಲಿ ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿ, ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ, ದೂರದ ಊರಿನಿಂದ ಮಕ್ಕಳೊಂದಿಗೆ ಬರುವವರಿಗಾಗಿ ಹಾಲುಣಿಸುವ ಸೌಲಭ್ಯ, ಜತೆಗೆ ಬಟ್ಟೆ ಬದಲಾಯಿಸಲು ಡ್ರೆಸ್ಸಿಂಗ್‌ ರೂಂ, ಇಷ್ಟೆಲ್ಲಾ ಸೌಲಭ್ಯ ಒಂದೇ ಸೂರಿನಡಿ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರುಪಯುಕ್ತವಾಗಿದೆ.

‘ನಗರಸಭೆ ಅಧಿಕಾರಿಗಳು ಅನುದಾನದ ಕೊರತೆ ನೆಪ ಹೇಳಿ ಪಿಂಕ್ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ. ಪಿಂಕ್ ಶೌಚಾಲಯ ಮಹಿಳೆಯರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ನಿವಾಸಿ ನಾಗಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಧ್ವನಿಗೂಡಿಸಿದರು.

ಈ ಕುರಿತು ಸಿರುಗುಪ್ಪ ನಗರಸಭೆ ಪೌರಾಯುಕ್ತ ಗುರುಪ್ರಸಾದ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.

29-ಸಿರುಗುಪ್ಪ-04 : ಸಿರುಗುಪ್ಪ ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ
ಮಹಿಳಾ ಶೌಚಾಲಯ ನಿರ್ಮಾಣ ಹಂತದಲ್ಲಿದ್ದು ಪಿಂಕ್ ಶೌಚಾಲಯ ಕೇಂದ್ರವನ್ನು ಮಹಿಳೆಯರ ಬಳಕೆಗೆ ನೀಡುವಂತೆ ನಗರಸಭೆಗೆ ಹಲವಾರು ಬಾರಿ ವಿನಂತಿಸಲಾಗಿದೆ. ಆದರೆ ಪ್ರಯೋಜನ ಆಗಿಲ್ಲ
ಕೆ. ತಿರುಮಲೇಶ್ ಡಿಪೊ ವ್ಯವಸ್ಥಾಪಕ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.