ADVERTISEMENT

ಕಲಿಕೆ ಹಂತದಲ್ಲಿ ಕೌಶಲ ತರಬೇತಿ

ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹೊಲಿಗೆ ಶಿಕ್ಷಣ

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 13 ಸೆಪ್ಟೆಂಬರ್ 2019, 11:22 IST
Last Updated 13 ಸೆಪ್ಟೆಂಬರ್ 2019, 11:22 IST
ಶಾಲೆಯ ವಿದ್ಯಾರ್ಥಿನಿಯರೇ ತಯಾರಿಸಿದ ಅಲಂಕಾರಿಕ ವಸ್ತುಗಳು
ಶಾಲೆಯ ವಿದ್ಯಾರ್ಥಿನಿಯರೇ ತಯಾರಿಸಿದ ಅಲಂಕಾರಿಕ ವಸ್ತುಗಳು   

ಕಂಪ್ಲಿ: ಇಲ್ಲಿನ ಸರ್ಕಾರಿಬಾಲಕಿಯರ ಪ್ರೌಢ ಶಾಲೆಯಲ್ಲಿ ವಿದ್ಯೆಯ ಜತೆಗೆ ಕೌಶಲ ತರಬೇತಿ ನೀಡುವುದರ ಮೂಲಕ ವಿದ್ಯಾರ್ಥಿನಿಯರಿಗೆ ಹೆಚ್ಚುವರಿ ಜ್ಞಾನ ಕೊಡುವ ಕೆಲಸ ಮಾಡಲಾಗುತ್ತಿದೆ.

1988ರಿಂದ ಈ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಹೊಲಿಗೆ ಶಿಕ್ಷಣ ಕೊಡಲಾಗುತ್ತಿದೆ. ಶಾಲೆ ಬಿಟ್ಟ ನಂತರ ಅನೇಕ ವಿದ್ಯಾರ್ಥಿನಿಯರು ಅದರಿಂದ ಬದುಕು ಕಟ್ಟಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೆಲ ವಿದ್ಯಾರ್ಥಿನಿಯರು ತಾವು ಕಲಿತ ಹೊಲಿಗೆ ಕೆಲಸವನ್ನು ಮನೆಯವರಿಗೆ ಕಲಿಸಿ, ಅವರನ್ನು ಸ್ವಾವಲಂಬಿಗೊಳಿಸಿದ್ದಾರೆ. ಶಾಲೆಯ ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿತ್ಯದ ಪಾಠದ ಜತೆಗೆ ಒಂದು ಗಂಟೆ ಹೊಲಿಗೆ ಶಿಕ್ಷಣ ನೀಡಲಾಗುತ್ತಿದೆ.

ಕಸೂತಿ ಕಲೆಗಳಾದ ಕಡ್ಡಿ ಹೊಲಿಗೆ, ರೆಕ್ಕೆ, ಗಂಟು, ಕತ್ತರಿ, ಎಳೆ ಹೊಲಿಗೆ, ಬುಟ್ಟಿ ಹೆಣೆಯುವುದು, ಹೂವಿನ ಬುಟ್ಟಿ, ಬೊಂಬೆ, ಚೀಲ, ವುಲನ್, ಬಾಗಿಲ ತೋರಣ, ವುಲನ್ ಹಾರ, ವಾಲ್ ಪ್ಲೇಟ್, ವ್ಯಾನಿಟಿ ಬ್ಯಾಗ್, ಡ್ರಾಯಿಂಗ್ ಶೀಟ್‍ನಿಂದ ಅಲಂಕಾರಿಕ ತಟ್ಟೆ, ಐಸ್‍ಕ್ರೀಂ ಕಡ್ಡಿಯಿಂದ ಪೆನ್ ಸ್ಟ್ಯಾಂಡ್, ಪೇಪರ್ ಟೀ ಕಪ್ ಬಳಸಿ ತೋರಣ, ಸ್ಪಂಜ್ ಬಳಸಿ ವಿವಿಧ ಆಕಾರದ ಗೊಂಬೆ, ಪೆಟ್ಟಿಕೋಟ್‌, ಅಂಗಿ, ನಿಕ್ಕರ್, ಲಂಗ, ಅಂಬ್ರೆಲ್ ಫ್ರಾಕ್, ರವಿಕೆ ಹೊಲಿಗೆ ಹೇಳಿ ಕೊಡಲಾಗುತ್ತಿದೆ.

ADVERTISEMENT

‘ಸಮಾಜದಲ್ಲಿ ಹೆಣ್ಣು ಮಕ್ಕಳು ಸ್ವಾವಲಂಬನೆಯ ಬದುಕು ಸಾಗಿಸಬೇಕು. ಅದಕ್ಕೆ ಪೂರಕವಾದ ವೃತ್ತಿ ಕೌಶಲ ತರಬೇತಿಯನ್ನು ನೀಡಲಾಗುತ್ತಿದೆ. ಇಲ್ಲಿ ಕಲಿತ ಅನೇಕ ಹುಡುಗಿಯರು ಆತ್ಮಸ್ಥೈರ್ಯದಿಂದ ಬದುಕುತ್ತಿದ್ದಾರೆ' ಎಂದು ಗ್ರೇಡ್-1 ಹೊಲಿಗೆ ಶಿಕ್ಷಕಿ ಎಸ್. ವೀಣಾ ತಿಳಿಸಿದರು.

‘ಭವಿಷ್ಯದಲ್ಲಿ ವಿದ್ಯೆಗೆ ತಕ್ಕಂತೆ ನೌಕರಿ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಾವು ಕಲಿತಿರುವ ಹೊಲಿಗೆ ತರಬೇತಿಯಿಂದ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬಹುದು’ ಎಂದು ವಿದ್ಯಾರ್ಥಿನಿಯರಾದ ಎಚ್.ಎಂ. ಮಹಾದೇವಿ, ವಿ. ವಿಜಯಲಕ್ಷ್ಮಿ ಮತ್ತು ಸ್ನೇಹಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.