ADVERTISEMENT

ಹಂಪಿ ವಿ.ವಿ.ಯಲ್ಲಿ ಶಿಲ್ಪಕಲೆ ಸಂಗ್ರಹಾಲಯ

ಮಾನವ ಸಂಪನ್ಮೂಲ ಸಚಿವಾಲಯಕ್ಕೆ ₹49 ಕೋಟಿ ಮೊತ್ತದ ಪ್ರಸ್ತಾವ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 17 ಮೇ 2019, 19:45 IST
Last Updated 17 ಮೇ 2019, 19:45 IST
   

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಶಿಲ್ಪಕಲೆ ಸಂಗ್ರಹಾಲಯ ನಿರ್ಮಾಣಕ್ಕೆ ವಿ.ವಿ. ಯೋಜನೆ ಹಾಕಿಕೊಂಡಿದೆ.

ವಿ.ವಿ. ಕಡೆಯಿಂದ ಈ ನಿಟ್ಟಿನಲ್ಲಿ ಈಗಾಗಲೇ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ₹49 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ.ಸಚಿವಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ಕೂಡ ವಿ.ವಿ.ಗೆ ಸಿಕ್ಕಿದೆ ಎಂದು ತಿಳಿದು ಬಂದಿದೆ. ಆದರೆ, ಸಾರ್ವತ್ರಿಕ ಚುನಾವಣೆಯಿಂದ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅನುಮೋದನೆಗೆ ವಿಳಂಬವಾಗಿದೆ.

ವಿ.ವಿ.ಯ ಶಿಲ್ಪಕಲಾ ವಿಭಾಗದಲ್ಲಿರುವ ಶಿಲ್ಪಗಳು ಹಾಗೂ ಅನ್ಯ ಭಾಗದ ಉತ್ಕೃಷ್ಟ ಶಿಲ್ಪಗಳನ್ನು ಸಂಗ್ರಹಾಲಯದಲ್ಲಿ ತಂದು ಇಡುವ ಯೋಜನೆ ಇದೆ. ಶಿಲ್ಪಗಳ ಗಾತ್ರಕ್ಕೆ ಅನುಸಾರ ಅವುಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಇಡಲಾಗುತ್ತದೆ. ಪ್ರತಿಯೊಂದು ಶಿಲ್ಪದ ಕೆಳಗಡೆ ಕಿರು ಡಿಜಿಟಲ್‌ ಪರದೆ ಅಳವಡಿಸಲಾಗುತ್ತದೆ. ಟಚ್‌ ಸ್ಕ್ರಿನ್‌ ಸೌಲಭ್ಯವಿರುವ ಪರದೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಶಿಲ್ಪದ ಕುರಿತ ವಿವರವಾದ ಮಾಹಿತಿ ಸಿಗಲಿದೆ.

ADVERTISEMENT

ಅದೇ ಸಂಗ್ರಹಾಲಯದಲ್ಲಿ ಹಸ್ತ ಪ್ರತಿಗಳು, ಜಾನಪದ ಮತ್ತು ಬುಡಕಟ್ಟು ಕಲೆಗಳಿಗೆ ಸಂಬಂಧಿಸಿದ ಪರಿಕರಗಳು, ಅಪರೂಪದ ಛಾಯಾಚಿತ್ರಗಳ ಪ್ರತ್ಯೇಕ ಗ್ಯಾಲರಿ ನಿರ್ಮಿಸುವ ಯೋಜನೆಯೂ ಇದೆ.

‘ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯ ಜತೆ ಜತೆಗೆ ಅದಕ್ಕೆ ಪೂರಕವಾದ ಬೇರೆ ಬೇರೆ ರೀತಿಯ ಚಟುವಟಿಕೆಗಳು ಕೂಡ ನಡೆಯಬೇಕು ಎನ್ನುವುದು ವಿ.ವಿ. ಮೊದಲ ಕುಲಪತಿ ಪ್ರೊ. ಚಂದ್ರಶೇಖರ ಕಂಬಾರ ಸೇರಿದಂತೆ ನಂತರ ಬಂದ ಕುಲಪತಿಗಳ ಮಹದಾಸೆ ಆಗಿತ್ತು. ಆ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದೇವೆ’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ವಿಶ್ವವಿದ್ಯಾಲಯದಲ್ಲಿ ವಿವಿಧ ರೀತಿಯ ಶಿಲ್ಪಗಳಿವೆ. ಅವುಗಳನ್ನು ಒಂದೇ ಸೂರಿನಡಿ ಇಟ್ಟು ಡಿಜಿಟಲ್‌ ತಂತ್ರಜ್ಞಾನದ ಸಹಾಯದಿಂದ ಮಾಹಿತಿ ಕೊಡಲಾಗುವುದು. ಸಮಗ್ರ ಮಾಹಿತಿಗಾಗಿ ಪ್ರತ್ಯೇಕವಾದ ಬೃಹತ್‌ ಡಿಜಿಟಲ್‌ ಪರದೆ ಅಳವಡಿಸಲಾಗುವುದು. ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಎಲ್ಲ ರೀತಿಯ ಮಾಹಿತಿ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ಶಿಲ್ಪಕಲೆ ಸಂಗ್ರಹಾಲಯವನ್ನು ಅಂತರರಾಷ್ಟ್ರೀಯ ದರ್ಜೆಯಲ್ಲಿ ನಿರ್ಮಿಸಲಾಗುವುದು. ಬೇರೆ ಬೇರೆ ದೇಶಗಳ ಜನ ಬಂದು ಅಧ್ಯಯನ ಮಾಡಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ’ ಎಂದು ವಿವರಿಸಿದರು.

‘ಅದೇ ಸಂಗ್ರಹಾಲಯದಲ್ಲಿ ಬುಡಕಟ್ಟು, ಜಾನಪದಕ್ಕೆ ಸಂಬಂಧಿಸಿದ ವಸ್ತುಗಳು, ಅಪರೂಪದ ಛಾಯಾಚಿತ್ರಗಳು, ಚಿತ್ರಕಲೆಗಳಿಗೆ ಸಂಬಂಧಿಸಿದ ಪ್ರತ್ಯೇಕ ಗ್ಯಾಲರಿ ತಲೆ ಎತ್ತಲಿದೆ. ಸಂಶೋಧನೆ ಮಾಡುವವರಿಗೆ ಪೂರಕವಾಗಿ ಸಂಗ್ರಹಾಲಯ ನಿರ್ಮಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.