ADVERTISEMENT

ವಿಶೇಷ ಮಕ್ಕಳ ಶಾಲಾ ಕಟ್ಟಡ ಉದ್ಘಾಟನೆ

’ಬುದ್ಧಿಮಾಂದ್ಯರು, ಅಶಕ್ತರ ಬಗ್ಗೆ ಕಾಳಜಿ ತೋರಿದರಷ್ಟೇ ಸಾಲದು‘

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 11:26 IST
Last Updated 16 ಜೂನ್ 2019, 11:26 IST
ಹೊಸಪೇಟೆಯಲ್ಲಿ ಗುರುವಾರ ಆಕಾಂಕ್ಷ ವಿಶೇಷ ಮಕ್ಕಳ ಶಾಲೆಯ ಕಟ್ಟಡವನ್ನು ನಗರಸಭೆ ಮಾಜಿ ಸದಸ್ಯ ಜಿ. ಕುಲ್ಲಾಯಪ್ಪ ಉದ್ಘಾಟಿಸಿದರು
ಹೊಸಪೇಟೆಯಲ್ಲಿ ಗುರುವಾರ ಆಕಾಂಕ್ಷ ವಿಶೇಷ ಮಕ್ಕಳ ಶಾಲೆಯ ಕಟ್ಟಡವನ್ನು ನಗರಸಭೆ ಮಾಜಿ ಸದಸ್ಯ ಜಿ. ಕುಲ್ಲಾಯಪ್ಪ ಉದ್ಘಾಟಿಸಿದರು   

ಹೊಸಪೇಟೆ: ವಾತ್ಸಲ್ಯ ಟ್ರಸ್ಟ್‌ನಿಂದ ಆರಂಭಿಸಿರುವ ಆಕಾಂಕ್ಷ ವಿಶೇಷ ಮಕ್ಕಳ ವಸತಿರಹಿತ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಗುರುವಾರ ನಗರದ ಅನಂತಶಯನಗುಡಿಯಲ್ಲಿ ನೆರವೇರಿತು.

ನಗರಸಭೆ ಮಾಜಿ ಸದಸ್ಯ ಜಿ. ಕುಲ್ಲಾಯಪ್ಪ ಉದ್ಘಾಟಿಸಿ, ’ವಾತ್ಸಲ್ಯ ಟ್ರಸ್ಟ್‌ ಉತ್ತಮವಾದ ಕೆಲಸ ಮಾಡುತ್ತಿದೆ. ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ಆರೈಕೆ, ತರಬೇತಿ ನೀಡುವ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಸಾಮಾನ್ಯವಾದುದಲ್ಲ. ಯಾವುದೇ ಫಲಾಪೇಕ್ಷೆಯಿಲ್ಲದೆ ಸಂಸ್ಥೆ ಕಳೆದ 15 ವರ್ಷಗಳಿಂದ ದುಡಿಯುತ್ತಿದೆ. ಇಂತಹ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕಿದೆ‘ ಎಂದು ಹೇಳಿದರು.

’ಇಷ್ಟು ವರ್ಷ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸಿದ ಸಂಸ್ಥೆ ಈಗ ಸ್ವಂತ ಕಟ್ಟಡ ಹೊಂದಿರುವುದು ಸಂತೋಷದ ಸಂಗತಿ. ಸಂಸ್ಥೆಯ ಬೆಳವಣಿಗೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು‘ ಎಂದು ತಿಳಿಸಿದರು.

ADVERTISEMENT

ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ಯಶಸ್ವಿನಿ ಮಾತನಾಡಿ, ’ಸುರೇಶ ಕುಷ್ಟಗಿ ಅವರು ಕಂಡಿದ್ದ ಕನಸು ಇಂದು ಸಾಕಾರಗೊಂಡಿದೆ. ಈ ಟ್ರಸ್ಟ್‌ ಆರಂಭಿಸಿದ ಅವರ ಎರಡನೇ ಪುಣ್ಯತಿಥಿ ದಿನದಂದೇ ಕಟ್ಟಡ ಉದ್ಘಾಟಿಸಲಾಗಿದೆ‘ ಎಂದರು.

’ಟ್ರಸ್ಟ್‌ ಕಟ್ಟುವಾಗ, ಕಟ್ಟಡ ನಿರ್ಮಿಸಲು ಆರಂಭದಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಆದರೆ, ಟ್ರಸ್ಟಿನ ಎಲ್ಲ ಸಿಬ್ಬಂದಿಯ ಪರಿಶ್ರಮದಿಂದ ಅವುಗಳನ್ನು ಮೆಟ್ಟಿ ನಿಂತು ಒಂದು ಹಂತಕ್ಕೆ ಬಂದಿದ್ದೇವೆ. ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ನಮ್ಮ ಕೆಲಸವನ್ನು ನೋಡಿ, ಬುದ್ಧಿಮಾಂದ್ಯ ಮಕ್ಕಳ ಕಲ್ಯಾಣಕ್ಕಾಗಿ ನೆರವು ಕೊಡಬೇಕು. ಸಂಸ್ಥೆಯನ್ನು ಬೆಳೆಸಬೇಕು‘ ಎಂದು ಮನವಿ ಮಾಡಿದರು.

ಟ್ರಸ್ಟ್‌ ಅಧ್ಯಕ್ಷ ಗಂಗಾಧರ ಎಚ್‌. ಕುಷ್ಟಗಿ, ’ಅಶಕ್ತರು, ಬುದ್ಧಿಮಾಂದ್ಯರು, ಅಂಗವಿಕಲರ ಬಗ್ಗೆ ಕಾಳಜಿ ತೋರಿದರಷ್ಟೇ ಸಾಲದು. ಅವರಿಗೆ ವಿಶೇಷ ಪ್ರಾಶಸ್ತ್ಯ ಕೊಡಬೇಕು. ಅಂತಹವರಿಗಾಗಿ ದುಡಿಯುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಎಲ್ಲ ರೀತಿಯ ಅಗತ್ಯ ನೆರವು ಕಲ್ಪಿಸಿಕೊಡಬೇಕು‘ ಎಂದು ಹೇಳಿದರು.

ಟ್ರಸ್ಟಿನ ಕೆ.ಎಸ್‌. ಸುಬ್ರಮಣ್ಯ ಗುಪ್ತಾ, ಎಸ್‌. ರಾಘವೇಂದ್ರ, ಹುಳ್ಳಿ ಪ್ರಕಾಶ್‌, ಚಂದ್ರಶೇಖರ್‌, ಎಸ್‌.ವೈ. ಗುರುಶಾಂತ, ತಾಯಪ್ಪ ನಾಯಕ, ನಾಗರತ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.