ಬಳ್ಳಾರಿ: ಕಬ್ಬಿಣದ ಬೃಹತ್ ಕೈಗಾರಿಕೆಗಳಿಗೆ ‘ಸ್ಪಾಂಜ್ ಐರನ್’ ಕಚ್ಚಾ ವಸ್ತುವನ್ನು ಪೂರೈಸುವ ಕಾರ್ಖಾನೆಗಳಿಂದ ಆಗುತ್ತಿರುವ ಮಾಲಿನ್ಯವು ಬಳ್ಳಾರಿ ನಗರ, ಕುಡುತಿನಿ, ತೋರಣಗಲ್ಲು ಮತ್ತು ಸಂಡೂರು ಭಾಗದಲ್ಲಿ ಜನರ ಆರೋಗ್ಯ, ಕೃಷಿ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
‘ಸ್ಪಾಂಜ್ ಐರನ್ ಕಾರ್ಖಾನೆ ಮತ್ತು ಗಣಿ ಚಟುವಟಿಕೆ ಪ್ರದೇಶದಲ್ಲಿ ದೂಳು ಅಧಿಕವಾಗಿದೆ. ಇದರಿಂದ ಉಸಿರಾಟದ ಸಮಸ್ಯೆ ಸೇರಿ ಅನಾರೋಗ್ಯಗಳಿಗೆ ಕಾರಣವಾಗುತ್ತಿದೆ’ ಎಂಬುದು ವೈದ್ಯರ ಅಭಿಮತ.
‘ಕಾರ್ಖಾನೆಗಳ ಅಕ್ಕಪಕ್ಕದ ಜಮೀನುಗಳಲ್ಲಿ ಬಿತ್ತಿದ ಬೀಜಗಳು ಮೊಳಕೆಯುಡೆಯುವುದಿಲ್ಲ. ಮೊಳಕೆಯೊಡೆದವು ಬೆಳೆಯುತ್ತಿಲ್ಲ. ಬೆಳೆ ಕಾಳು ಕಟ್ಟುವುದಿಲ್ಲ. ಕೆಲವು ವರ್ಷ ಎಕರೆಗೆ ಒಂದು ಸಾವಿರದಂತೆ ಪರಿಹಾರ ನೀಡುತ್ತಿದ್ದ ಕಂಪನಿಗಳು ಈಗ ಅದನ್ನೂ ನಿಲ್ಲಿಸಿವೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಮಾಧವರೆಡ್ಡಿ ಬೇಸರ ವ್ಯಕ್ತಪಡಿಸಿದರು.
ವರ್ಷ 2000ದಲ್ಲಿ ಬಳ್ಳಾರಿಯಲ್ಲಿ ಕಬ್ಬಿಣದ ಅದಿರಿನ ಗಣಿ ಚಟುವಟಿಕೆಗಳು ಪ್ರವರ್ಧಮಾನಕ್ಕೆ ಬಂದ ಬಳಿಕ ಸ್ಪಾಂಜ್ ಐರನ್ ಕಾರ್ಖಾನೆಗಳು ಕಾಲಿರಿಸಿದವು. ಬಳ್ಳಾರಿಯ ಸುತ್ತಮುತ್ತ ಹಲಕುಂದಿ, ಬ್ಯಾಲಚಿಂತೆ, ಬೆಳಗಲ್, ಜಾನೆಕುಂಟೆ, ವೇಣಿವೀರಾಪುರ, ಕುಡುತಿನಿ, ಸಂಡೂರು, ತೋರಣಗಲ್ಲು ಸೇರಿ ಹಲವು ಪ್ರದೇಶಗಳಲ್ಲಿ ಅಸ್ತಿತ್ವ ಕಂಡುಕೊಂಡವು. ಸದ್ಯ ಅಂಥವು 20 ಕಾರ್ಖಾನೆಗಳಿವೆ.
‘ಈ ಕಾರ್ಖಾನೆಗಳಲ್ಲಿ ಕಲುಮೆಯಲ್ಲಿ ಕಬ್ಬಿಣದ ಅದಿರು ಕಾಯಿಸಿ, ಕಬ್ಬಿಣ ಬೇರ್ಪಡಿಸಿ, ಗಟ್ಟಿಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಈ ಹಂತದಲ್ಲಿ ಹೊರ ಹೊಮ್ಮುವ ದೂಳು ಹತ್ತಾರು ಕಿಲೋಮೀಟರ್ ಹೋಗುತ್ತದೆ. ಮನೆ, ಹೊಲಗಳ ಮೇಲೆ ಕೂರುತ್ತದೆ. ಮಳೆ ಬಂದರೆ, ಮನೆಗಳ ಚಾವಣಿಯಿಂದ ಡಾಂಬರಿನಂತೆ ನೀರು ಹರಿಯುತ್ತದೆ. ಎಲ್ಲೆಲ್ಲಿ ಕಾರ್ಖಾನೆಗಳು ಇವೆಯೋ ಅವುಗಳ ಸುತ್ತಲಿನ ಕನಿಷ್ಠ ಐದು ಕಿ.ಮೀ ಪ್ರದೇಶ ಕಡುಗಪ್ಪಾಗಿ ರೂಪಾಂತರಗೊಂಡಿದೆ’ ಎಂದು ಸ್ಥಳೀಯರು ತಿಳಿಸಿದರು.
ಹೆಸರಿಗಷ್ಟೇ ಇಎಸ್‌ಪಿ
‘ಕಾರ್ಖಾನೆಗಳಲ್ಲಿ ಕುಲುಮೆಯ ಚಿಮಣಿಗಳಿಗೆ ಕಡ್ಡಾಯವಾಗಿ ಎಲೆಕ್ಟ್ರೋಸ್ಟ್ಯಾಟಿಕ್ ಪ್ರೆಸಿಪಿಟೇಟರ್ (ಇಎಸ್‌ಪಿ) ಬಳಸಲು ಮಾಲಿನ್ಯ ನಿಯಂತ್ರಣಾ ಮಂಡಳಿ ಸೂಚಿಸಿದೆ. ಇದು ದೂಳು ಬೇರ್ಪಡಿಸಿ ಹೊಗೆ ಮಾತ್ರವೇ ಕುಲುಮೆಯಿಂದ ಹೊರಹೋಗುವಂತೆ ಮಾಡುತ್ತದೆ. ಎಲ್ಲ ಕಾರ್ಖಾನೆಗಳು ಈ ವ್ಯವಸ್ಥೆ ಅಳವಡಿಸಿಕೊಂಡಿವೆ. ಆದರೆ, ವಿದ್ಯುತ್ ಹೊರೆಯ ಕಾರಣಕ್ಕೆ ಬಹುತೇಕ ಕಾರ್ಖಾನೆಗಳು ಬಳಸುತ್ತಿಲ್ಲ.ಹೀಗಾಗಿ ಕಪ್ಪು ಬಣ್ಣದ ದೂಳು ಪರಿಸರ ಸೇರುತ್ತಿದೆ’ ಎಂದು ಸ್ಪಾಂಜ್ ಐರನ್ ಕಾರ್ಖಾನೆಗಳ ಒಕ್ಕೂಟ, ಹೆಸರು ಹೇಳಲಿಚ್ಚಿಸದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾರ್ಖಾನೆಗಳ ಸುತ್ತಲು ಹಸಿರು ಬೆಳೆಸಬೇಕು ಎಂಬ ಸೂಚನೆಯಿದೆ. ಅದು ಪಾಲನೆ ಆಗುತ್ತಿಲ್ಲ. ಅದಿರು ಪೂರೈಕೆ ಲಾರಿಗಳಿಂದ ರಸ್ತೆಗಳಲ್ಲಿ ಗುಂಡಿ ಬೀಳುತ್ತಿವೆ. ದೂಳು ತಡೆಗೆ ಅದಿರು ಸಾಗಣೆ ವೇಳೆ ಲಾರಿಗಳಿಗೆ ಟಾರ್ಪಲಿನ್ ಹೊದಿಸುವ ಕೆಲಸವು ಆಗುತ್ತಿಲ್ಲ’ ಎಂದು ಕುಡುತಿನಿ ನಿವಾಸಿ ರಾಮು ತಿಳಿಸಿದರು.
‘ಇಎಸ್‌ಪಿ ಬಳಸದ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದೇವೆ. ಈ ದೂರುಗಳು ಮಂಡಳಿಯ ಕೇಂದ್ರ ಕಚೇರಿವರೆಗೆ ಹೋಗುತ್ತವೆ. ನಂತರ ಏನಾಗುವುದೋ ತಿಳಿಯುವುದೇ ಇಲ್ಲ. ಬೆಳೆಹಾನಿಗೆ ಪರಿಹಾರ ನೀಡುತ್ತಿದ್ದ ಕಾರ್ಖಾನೆಗಳು ಈಗ ರೈತರನ್ನು ನಿರ್ಲಕ್ಷಿಸುತ್ತಿವೆ. ಕಾರ್ಖಾನೆಗಳಿಗೆ ಆರಂಭದಲ್ಲಿ ಸ್ಥಳೀಯರೇ ಮಾಲೀಕರು ಆಗಿದ್ದರು. ಈಗ ಉತ್ತರ ಭಾರತೀಯರು ಆಗಿದ್ದಾರೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅವರಿಗೆ ಕಾಳಜಿಯಿಲ್ಲ’ ಎಂದು ಹೋರಾಟಗಾರ ಎರ‍್ರಿಸ್ವಾಮಿ ಆರೋಪಿಸಿದರು.
‘ಸ್ಪಾಂಜ್ ಐರನ್ ಕಂಪನಿಗಳೆಲ್ಲವೂ ಇಎಸ್‌ಪಿ ಅಳವಡಿಸಿಕೊಂಡಿವೆ. ಪರಿಶೀಲಿಸುತ್ತೇವೆ. ಸ್ಥಳೀಯರ ದೂರುಗಳನ್ನು ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಬಳ್ಳಾರಿ ವಲಯದ ಪರಿಸರ ಅಧಿಕಾರಿ ಸಿದ್ದೇಶ್ವರ ಬಾಬು ಪ್ರತಿಕ್ರಿಯಿಸಿದರು.
ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಕಾರ್ಖಾನೆಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ಎಷ್ಟೇ ದೊಡ್ಡವರಿದ್ದರೂ ಕ್ರಮಕ್ಕೆ ಹಿಂಜರಿಯುವುದಿಲ್ಲ. ಕ್ರಮದ ರೂಪದಲ್ಲಿ ಉತ್ತರ ನೀಡುತ್ತೇವೆಪಿ.ಎಂ.ನರೇಂದ್ರ ಸ್ವಾಮಿ ಶಾಸಕ ಅಧ್ಯಕ್ಷ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಕಾರ್ಖಾನೆಗಳ ವಿರುದ್ಧ 2004ರಿಂದಲೂ ಹೋರಾಟ ನಡೆದಿದೆ. ಮಾಲಿನ್ಯ ನಿಂತಿಲ್ಲ. ರಾಜಿ ಪಂಚಾಯಿತಿಗೆ ಬರುವ ಕಾರ್ಖಾನೆಯವರು ಹಣ ಗುತ್ತಿಗೆ ಒಪ್ಪಂದ ಉದ್ಯೋಗದ ಆಮಿಷ ಒಡ್ಡುತ್ತಾರೆರಾಮು ಸ್ಥಳೀಯ ನಿವಾಸಿ.
ಕಾರ್ಖಾನೆಗಳ ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಮತ್ತಷ್ಟು ಗಂಭೀರವಾಗಲಿದೆ.ಡಾ. ಗಂಗಾಧರ ಗೌಡ ನಿರ್ದೇಶಕ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.