
ಬಳ್ಳಾರಿ: ‘ನಮ್ಮ ಜಿಲ್ಲೆಯಲ್ಲಿ ಸಂಗ್ರಹವಾದ ‘ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್)’ದ ಹಣ ಬಳಸಿಕೊಳ್ಳಲು ನಮಗೇ ಆಗುತ್ತಿಲ್ಲ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇಂಥ ಅನ್ಯಾಯವಾಗಿದ್ದಿದ್ದರೆ ಇಷ್ಟು ಹೊತ್ತಿಗೆ ಪರಿಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಬಳ್ಳಾರಿ ವಿಷಯದಲ್ಲಿ ಮಲತಾಯಿ ಧೋರಣೆ ಪ್ರದರ್ಶಿಸಲಾಗುತ್ತಿದೆ’ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ಮಂಗಳವಾರ, ಬಳ್ಳಾರಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಅವರು ಪ್ರಸ್ತಾಪಿಸಿದರು.
‘ಬಳ್ಳಾರಿ ಡಿಎಂಎಫ್‌ನಲ್ಲಿ ಸಾಕಷ್ಟು ಹಣವಿದೆ. ಆದರೆ, ಅದನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ, ಜಿಲ್ಲಾಧಿಕಾರಿಗಳಿಗೆ ಎಷ್ಟು ಮನವಿಕೊಟ್ಟರೂ ಸಮಸ್ಯೆ ಬಗೆಹರಿದಿಲ್ಲ. ಎರಡು ವರ್ಷಗಳಿಂದ ಒಂದು ಸಭೆ ಮಾಡಲು ಆಗಿಲ್ಲ. ರಾಜ್ಯ ಸರ್ಕಾರವೇನು ನಮಗೆ ಅನುದಾನ ಕೊಡಬೇಕಾಗಿಲ್ಲ. ನಮ್ಮ ಜಿಲ್ಲೆಯಲ್ಲಿ, ನಮ್ಮ ಖನಿಜದಿಂದ ಉತ್ಪತ್ತಿಯಾದ ಹಣದಲ್ಲಿ ಪ್ರತಿ ಕ್ಷೇತ್ರಗಳಿಗೆ ₹200 ಕೋಟಿ ಹಣ ಸಿಗಲಿದೆ. ನಾವು ಉತ್ತರ ಕರ್ನಾಟಕದವರು ನಮ್ಮ ಪರವಾಗಿ ಮಾತನಾಡುವವರು ಯಾರೂ ಇಲ್ಲ. ಅದೇ ಬೇರೆ ಜಿಲ್ಲೆಗಳಲ್ಲಾಗಿದ್ದಿದ್ದರೆ ಇಷ್ಟು ಹೊತ್ತಿಗೆ ಪರಿಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಏನೇ ಮಾಡಿದರೂ ಬಳ್ಳಾರಿ ಜನ ಸಹಿಸಿಕೊಳ್ಳುತ್ತಾರೆ ಎಂಬ ಧೋರಣೆ ಬೇಡ. ಈ ಸಮಸ್ಯೆ ಕೂಡಲೇ ಬಗೆಹರಿಯಬೇಕು’ ಎಂದು ಆಗ್ರಹಿಸಿದರು.
‘ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆಗಳಿವೆ. ಸರ್ಕಾರಕ್ಕೆ ಪ್ರಶ್ನೆ ಕೇಳಿದಾಗ ಗ್ರೂಪ್ ‘ಎ’ನಲ್ಲಿ ಶೇ 62ರಷ್ಟು, ಗ್ರೂಪ್ ‘ಬಿ ‘ನಲ್ಲಿ ಶೇ 80, ಗ್ರೂಪ್ ‘ಸಿ’ಯಲ್ಲಿ ಶೇ 100ರಷ್ಟು ಕೆಲಸವನ್ನು ಸ್ಥಳೀಯ ಕನ್ನಡಿಗರಿಗೆ ನೀಡಿರುವುದಾಗಿ ಕಂಪನಿಗಳು ಉತ್ತರ ನೀಡಿವೆ. ಇಷ್ಟು ಪ್ರಮಾಣದಲ್ಲಿ ನಮ್ಮವರಿಗೆ ಕೆಲಸ ಕೊಟ್ಟಿದ್ದರೆ, ನಮ್ಮ ಜನ ಏಕೆ ಬೆಂಗಳೂರಿನಂಥ ನಗರಗಳಲ್ಲಿ ಡೆಲಿವರಿ ಬಾಯ್‌ಗಳಾಗಿ, ಕೂಲಿಕಾರರಾಗಿ ದುಡಿಯುತ್ತಿದ್ದರು’ ಎಂದು ಅಧಿವೇಶನದಲ್ಲಿ ಪ್ರಶ್ನೆ ಮಾಡಿದರು.
‘ವಾಸ್ತವದಲ್ಲಿ ಸ್ಥಳೀಯರಿಗೆ, ಕನ್ನಡಿಗರಿಗೆ ಸರಿಯಾದ ಕೆಲಸ ನೀಡುತ್ತಿಲ್ಲ. ನಮ್ಮವರು ಅವಕಾಶ ವಂಚಿತರಾಗುತ್ತಿದ್ದಾರೆ. ಹೊರಗುತ್ತಿಗೆ ಮೂಲಕ ಕೆಲಸಗಾರರನ್ನು ತೆಗೆದುಕೊಳ್ಳುವ ಮೂಲಕ ಕೈಗಾರಿಕೆಗಳು ಸರೋಜಿನಿ ಮಹಿಷಿ ವರದಿಯನ್ನು ಉಲ್ಲಂಘಿಸುತ್ತಿವೆ. ಹೀಗಾಗಿ ನಮ್ಮ ಜನ ಬೆಂಗಳೂರಿನಂಥ ಮಹಾನಗರಗಳಿಗೆ ಗುಳೇ ಹೋಗುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಅವರ ಜನರಿಗೆ ಅನ್ಯಾಯವಾಗಿದ್ದರೆ, ಎಲ್ಲರೂ ರಕ್ಷಣೆಗೆ ಬರುತ್ತಿದ್ದರು. ಆದರೆ, ಬಳ್ಳಾರಿಯವರಿಗೆ ಅನ್ಯಾಯವಾದಾಗ ಯಾರೂ ನೆರವಿಗೆ ಬರುತ್ತಿಲ್ಲ. ಜಿಲ್ಲೆಯ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ನೀಡಿರುವ ಕೆಲಸಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಇದಕ್ಕಾಗಿ ಸಮಿತಿ ರಚನೆಯಾಗಬೇಕು’ ಎಂದು ಒತ್ತಾಯಿಸಿದರು.
ಸರ್ಕಾರ ಅಭಿಯಾನ ಮಾಡಲಿ
‘ಬಳ್ಳಾರಿ ನಗರ ಭಾಗಶಃ ಕೊಳೆಗೇರಿಗಳಿಂದ ಆವೃತ್ತವಾಗಿದೆ. ಅಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡದ ಕುಟುಂಬಗಳ ಮೇಲೆ ಹೆಚ್ಚಿನ ಬಡ್ಡಿ ಹಾಕಲಾಗುತ್ತಿದೆ. ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಜನ ಕತ್ತಲಲ್ಲಿ ಮಲಗುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಸರ್ಕಾರ ವಿದ್ಯುತ್ ಬಿಲ್‌ಗಳ ಮೇಲಿನ ಬಡ್ಡಿ ಮನ್ನಾ ಮಾಡಿದರೆ ಜನ ಅಸಲು ಪಾವತಿಸಲು ಸಿದ್ಧರಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು. ಒಂದು ಅಭಿಯಾನ ಮಾಡಿ ಆರು ತಿಂಗಳು ಸಮಯ ನೀಡಿದರೆ ಜನ ಬಿಲ್ ಪಾವತಿ ಮಾಡಲಿದ್ದಾರೆ. ಬಡಜನರಿಗೆ ತೊಂದರೆ ಕೊಡಬಾರದು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.