ADVERTISEMENT

ಡಿ.14ರಿಂದ ಕಬ್ಬು ಕಟಾವು: ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 9:39 IST
Last Updated 13 ಡಿಸೆಂಬರ್ 2018, 9:39 IST

ಬಳ್ಳಾರಿ: "ಎನ್‌ಎಸ್‌ಎಲ್‌ ಕಾರ್ಖಾನೆಯ ನೇತೃತ್ವದಲ್ಲಿ ಕಬ್ಬು ಕಟಾವು ಕಾರ್ಯ ಡಿ.15ರಿಂದ ಆರಂಭವಾಗಲಿದ್ದು 31ರವರೆಗೂ ನಡೆಯಲಿದೆ. ಶುಭ ದಿನ ಎಂಬ ಕಾರಣಕ್ಕೆ ಡಿ.12ರಂದು ಗದ್ದೆಗಳಲ್ಲಿ ಪೂಜೆ ನಡೆಸಲಾಯಿತು’ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ತಿಳಿಸಿದರು.

‘ಕಬ್ಬು ಖರೀದಿ ಕಾರ್ಯ ಸಂಕೀರ್ಣ ಸನ್ನಿವೇಶವನ್ನು ಎದುರಿಸುತ್ತಿದೆ. 20 ವರ್ಷದ ಹಿಂದೆ ಸಿರುಗುಪ್ಪ ಸಕ್ಕರೆ ಕಾರ್ಖಾನೆ ಮುಚ್ಚಿ ಬೆಳೆಗಾರರು ತೊಂದರೆ ಎದುರಿಸಿದ್ದಾಗ ಜಿಲ್ಲಾಡಳಿತ ಸ್ಪಂದಿಸಿರಲಿಲ್ಲ. ಆದರೆ ಈ ವರ್ಷ ಜಿಲ್ಲಾಡಳಿತ ಸಕಲ ನೆರವನ್ನೂ ನೀಡಿದೆ’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.

‘ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ ಬೆಳೆದಿರುವ ಕಬ್ಬು ಕಟಾವು ದಿನಾಂಕವನ್ನು ನಿಗದಿ ಮಾಡಲಾಗುತ್ತಿದೆ. ಯಾವ ಬೆಳೆಗಾರರಿಗೂ ತೊಂದರೆ ಆಗುವುದಿಲ್ಲ. ಅವಸರಪಟ್ಟು ಕಟಾವು ಮಾಡಿ ನಷ್ಟ ಹೊಂದಿದರೆ ಜಿಲ್ಲಾಡಳಿತ ಹೊಣೆಗಾರನಾಗುವುದಿಲ್ಲ. ರೈತರು ತಾಳ್ಮೆಯಿಂದ ಕಾಯಬೇಕು’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಹೊರಜಿಲ್ಲೆಗಳ ಕಾರ್ಖಾನೆಗಳಲ್ಲಿ ಕಬ್ಬಿನ ದರ ಪ್ರತಿ ಟನ್‌ಗೆ ₨ 2,612 ಇದೆ. ಆದರೆ ₨ 2,662 ನೀಡಬೇಕು ಎಂದು ಸೂಚಿಸಲಾಗಿದೆ. ಹಿಂದಿನ ವರ್ಷದಲ್ಲಿದ್ದಂತೆಯೇ ಕಟಾವು ವೆಚ್ಚವನ್ನು ನಿಗದಿ ಮಾಡಲಾಗಿದೆ. ಕಟಾವು ಮಾಡಲು ಕೂಲಿಗಳನ್ನು ಹಿಂದಿನ ವರ್ಷ ಬೆಳೆಗಾರರು ಹೆಚ್ಚು ಕೂಲಿ ನೀಡಿ ಕರೆತಂದಿದ್ದರು. ಈ ಸೀಸನ್‌ನಲ್ಲಿ ಕೂಲಿಗಳ ಕೊರತೆ ಸಾಮಾನ್ಯ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.