ADVERTISEMENT

ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

ಎಚ್.ಎಸ್.ಶ್ರೀಹರಪ್ರಸಾದ್
Published 30 ಏಪ್ರಿಲ್ 2019, 19:30 IST
Last Updated 30 ಏಪ್ರಿಲ್ 2019, 19:30 IST
ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ
ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ   

ಮರಿಯಮ್ಮನಹಳ್ಳಿ: ‘ಅಲ್ಲಿ ಮಕ್ಕಳದ್ದೇ ಸಾಮ್ರಾಜ್ಯ, ಅವರದೇ ಕಾರುಬಾರು, ಹಾಡು, ಕುಣಿತ, ಆಟ-ಪಾಠ, ನೃತ್ಯ, ಸಂಗೀತ, ಕೋಲಾಟ, ನಟನೆಯ ತಾಲೀಮು, ಮಾತಿನ ವರಸೆ, ಚಿಕ್ರಕಲೆ...’

ಇವು ಪಟ್ಟಣದ ದುರ್ಗಾದಾಸ ಕಲಾಮಂದಿರದಲ್ಲಿ ರಂಗ ಸಂಸ್ಕೃತಿ ತಂಡದವರು ಹಮ್ಮಿಕೊಂಡಿರುವ ಮಸ್ತ್ ಮಜಾ ಮಕ್ಕಳ ಬೇಸಿಗೆ ಶಿಬಿರದಲ್ಲಿ ಕಂಡು ಬಂದ ಚಿಣ್ಣರ ಕಲರವದ ದೃಶ್ಯಗಳಿವು.

25 ದಿನಗಳ ಬೇಸಿಗೆ ಶಿಬಿರದಲ್ಲಿ 15 ವರ್ಷದೊಳಗಿನ ಸುಮಾರು 70ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದು, ತಮ್ಮ ಪ್ರತಿಭೆಯನ್ನು ಓರೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಶಿಬಿರದಲ್ಲಿ ಮಕ್ಕಳಿಗೆ ರಂಗ ನಟನೆ, ಚಿತ್ರಕಲೆ, ಮುಖವಾಡ ತಯಾರಿಸುವಿಕೆ, ಲಘು ಪ್ರಹಸನ, ದೇಶಿ ಆಟಗಳು, ಕೋಲಾಟ, ಧ್ವಜ ಕುಣಿತ, ನಾಟಕ ತಯಾರಿಕೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ನುರಿತ ರಂಗ ಕಲಾವಿದರು ತಿಳಿಸಿಕೊಡುತ್ತಿದ್ದಾರೆ.

ಮಕ್ಕಳು ಸಹ ಅದೇ ಖುಷಿಯಿಂದ ಪಾಲ್ಗೊಂಡಿದ್ದಾರೆ. ಬೇಸಿಗೆ ರಜೆಯನ್ನು ಈ ರೀತಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕೆಲ ಮಕ್ಕಳು ರಂಗ ನಟನೆಯಲ್ಲಿ ತೊಡಗಿಕೊಂಡರೆ, ಕೆಲ ಚಿಣ್ಣರು ಚಿತ್ರಕಲೆ, ಆಟದಲ್ಲಿ ಮುಳುಗಿದ್ದಾರೆ. ಕೆಲವರು ಕೋಲಾಟ, ಧ್ವಜ ಕುಣಿತದಲ್ಲಿ ತೊಡಗಿಸಿಕೊಂಡರೆ, ಇನ್ನು ಕೆಲವರು ಮುಖವಾಡ ತಯಾರಿಕೆಯಲ್ಲಿ ತೊಡಗಿಸಿಕೊಂಡು ಅವರಲ್ಲಿ ಹುದುಗಿರುವ ಪ್ರತಿಭೆ ಹೊರಹಾಕುತ್ತಿದ್ದಾರೆ.

‘ನೋಡಿ ಸಾ ನಮಗೆ ಈ ಶಿಬಿರದಲ್ಲಿ ಹೇಳಿ ಕೊಡುವ ಎಲ್ಲಾ ವಿಷಯಗಳು ಇಷ್ಟ. ಕೋಲಾಟ, ನಾಟಕದಲ್ಲಿ ಪಾತ್ರ ಮಾಡುವುದು, ಕುಣಿತ, ಚಿತ್ರಕಲೆ, ಕೋಲಾಟ, ನೃತ್ಯ ಸೇರಿದಂತೆ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದೇವೆ’ ಎನ್ನುತ್ತಾರೆ ಶಿಬಿರಾರ್ಥಿಗಳಾದ ಅಕ್ಷರ, ಸೋಮಶೇಖರ ಹಾಗೂ ಇತರರು.

ರಂಗಭೂಮಿ ಸೇವೆಯಲ್ಲಿ ತೊಡಗಿರುವ ಪಟ್ಟಣದ ರಂಗ ಸಂಸ್ಕೃತಿ ತಂಡದ ಬಿ.ಎಂ.ಎಸ್.ಪ್ರಭು, ಎಲ್.ಪ್ರಶಾಂತ್ ಕುಮಾರ್, ಮಂಜುಳಾ, ಮಧುಸೂದನ್ ಮಡಿಕೇರಿ, ತುಮಕೂರಿನ ಹರಿಕಥೆ ಮಂಜು, ಎಲ್.ಉದಯಕುಮಾರ್, ಎಲ್.ಯೋಗಾನಂದ, ಎಲ್.ಗಂಗಾಧರ, ಮಾಳಗಿ ಮಂಜುನಾಥ ಅವರು ಶಿಬಿರದ ನೇತೃತ್ವ ವಹಿಸಿದ್ದಾರೆ.

‘ನೋಡ್ರಿ, ಮಕ್ಕಳಿಗೆ ಬೇಸಿಗೆ ರಜೆ ಬಂದರೆ ಎಲ್ಲಿಲ್ಲದ ಸಂಭ್ರಮ. ಆದರೆ, ಪೋಷಕರಿಗೆ ಮಕ್ಕಳನ್ನು ಸಂಭಾಳಿಸುವುದು ಕಷ್ಟ. ಆದ್ದರಿಂದ ಇಂತಹ ಬೇಸಿಗೆ ಶಿಬಿರಗಳು ಮಕ್ಕಳಿಗೆ ಹೆಚ್ಚು ಅನುಕೂಲ. ಪ್ರತಿಯೊಂದು ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸ ಮಾಡಬೇಕಿದೆ. ಮುಖ್ಯವಾಗಿ ಪಠ್ಯೇತರ ಚಟುವಟಿಕೆಯತ್ತ ತೊಡಗಿಸಿದಾಗ ಅವರಲ್ಲಿ ಕ್ರಿಯಾಶೀಲತೆ, ಆಸಕ್ತಿ ಜತೆಗೆ ದೈಹಿಕ, ಮಾನಸಿಕ ಹಾಗೂ ಬೌದ್ಧಿಕವಾಗಿ ಬೆಳೆಯಲು ನೆರವಾಗುತ್ತದೆ’ ಎನ್ನುತ್ತಾರೆ ಶಿಬಿರದ ಸಂಚಾಲಕರಾದ ಎಲ್.ಪ್ರಶಾಂತ್, ಹರಿಕಥೆ ಮಂಜು ಹಾಗೂ ಬಿ.ಎಂ.ಎಸ್. ಪ್ರಭು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.