ADVERTISEMENT

ಕಳಪೆ ಬೀಜ, ರಸಗೊಬ್ಬರ ಮಾರಿದರೆಕಾನೂನು ಕ್ರಮ ಜರುಗಿಸಿ–ಡಿ.ಸಿ

​ಪ್ರಜಾವಾಣಿ ವಾರ್ತೆ
Published 25 ಮೇ 2022, 15:09 IST
Last Updated 25 ಮೇ 2022, 15:09 IST
ಹೊಸಪೇಟೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರು ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ಬೆಳೆ ವಿಮೆ, ಕೀಟನಾಶಕಗಳ ಕುರಿತ ಭಿತ್ತಿಪತ್ರ ಹಾಗೂ ಪೋಸ್ಟರ್‌ ಬಿಡುಗಡೆ ಗೊಳಿಸಿದರು
ಹೊಸಪೇಟೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರು ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ಬೆಳೆ ವಿಮೆ, ಕೀಟನಾಶಕಗಳ ಕುರಿತ ಭಿತ್ತಿಪತ್ರ ಹಾಗೂ ಪೋಸ್ಟರ್‌ ಬಿಡುಗಡೆ ಗೊಳಿಸಿದರು   

ಹೊಸಪೇಟೆ (ವಿಜಯನಗರ): ‘ಮುಂಗಾರು ಹಂಗಾಮಿನಲ್ಲಿ ಕಳಪೆ ಬೀಜ, ರಸಗೊಬ್ಬರ ಮಾರಾಟ ಮಾಡುವ ಸಂಭವವಿದ್ದು, ಅದರ ಮೇಲೆ ತೀವ್ರ ನಿಗಾ ವಹಿಸಬೇಕು. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಬುಧವಾರ ನಡೆದ ಮುಂಗಾರು ಹಂಗಾಮಿನ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಬಿತ್ತನೆ ಸಮಯದಲ್ಲಿ ಬೀಜ ಹಾಗೂ ರಸಗೊಬ್ಬರ ಪೂರೈಕೆದಾರರು, ಮಾರಾಟಗಾರರು ಕಳಪೆ ಬೀಜ, ರಸಗೊಬ್ಬರಗಳನ್ನು ವಿತರಿಸಿ ರೈತರಿಗೆ ಮೋಸ ಮಾಡುವ ಸಾಧ್ಯತೆ ಇದೆ. ಅಧಿಕಾರಿಗಳು ವಿಚಕ್ಷಣ ದಳದ ಮೂಲಕ ದಿಢೀರ್‌ ದಾಳಿ ನಡೆಸಿ, ಪರಿಶೀಲಿಸಬೇಕು. ಕಲಬೆರಕೆ ಮತ್ತು ಕಳಪೆ ಸಾಮಗ್ರಿಗಳನ್ನು ಪೂರೈಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ಬೆಳೆ ವಿಮೆಗೆ ಕುರಿತು ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಿ, ನೋಂದಣಿ ಮಾಡಿಸಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಬ್ಯಾಂಕ್ ಮ್ಯಾನೇಜರ್‌ಗಳು, ಪ್ರಗತಿಪರ ರೈತರು, ರೈತ ಮುಖಂಡರುಗಳಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸಿ ತಿಳಿವಳಿಕೆ ಮೂಡಿಸಬೇಕು. ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆ ಕುರಿತು ಆಕಾಶವಾಣಿಯಲ್ಲಿ ಫೋನ್-ಇನ್ ಕಾರ್ಯಕ್ರಮದ ಮೂಲಕ ರೈತರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.