ADVERTISEMENT

‘ಆಧುನಿಕತೆಯಿಂದ ದೇಶಿ ಕಸುಬು ನಿರ್ಲಕ್ಷ್ಯ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 17:42 IST
Last Updated 20 ನವೆಂಬರ್ 2019, 17:42 IST
ಕುಲಪತಿ ಪ್ರೊ.ಸ.ಚಿ. ರಮೇಶ, ಪ್ರಾಧ್ಯಾಪಕರಾದ ರಮೇಶ ನಾಯಕ, ಸಿ.ಡಿ.ಮಹಾದೇವ ಹಾಗೂ ವಿಠ್ಠಪ್ಪ ಗೋರಂಟ್ಲಿ ಅವರು ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು
ಕುಲಪತಿ ಪ್ರೊ.ಸ.ಚಿ. ರಮೇಶ, ಪ್ರಾಧ್ಯಾಪಕರಾದ ರಮೇಶ ನಾಯಕ, ಸಿ.ಡಿ.ಮಹಾದೇವ ಹಾಗೂ ವಿಠ್ಠಪ್ಪ ಗೋರಂಟ್ಲಿ ಅವರು ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು   

ಹೊಸಪೇಟೆ: ‘ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ನಮ್ಮ ದೇಶಿಯ ಕರಕುಶಲಗಳು, ಕಸುಬು, ಕಲೆ, ಸಂಸ್ಕೃತಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇಶಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಲೆ ಲೇಖಕರ ಕಮ್ಮಟದಲ್ಲಿ ಮಾತನಾಡಿದ ಅವರು, ‘ಪ್ರಕೃತಿಯಲ್ಲಿ ಸಿಗುವ ಎಲ್ಲಾ ವಸ್ತುಗಳು ಜ್ಞಾನದ ಸ್ವರೂಪ. ಅದನ್ನು ನಾವು ಗಮನಿಸುವುದಿಲ್ಲ. ಜಾಗತೀಕರಣದ ಪ್ರಭಾವದಿಂದ ಸಾಮಾನ್ಯ ಜ್ಞಾನವನ್ನು ನಿರ್ಲಕ್ಷಿಸಿ ನಮ್ಮ ದೇಶಿಯ ಜ್ಞಾನ ಪರಂಪರೆಯನ್ನು ಮರೆಯುತ್ತಿದ್ದೇವೆ’ ಎಂದು ವಿಷಾದಿಸಿದರು.

ಆರೋಗ್ಯಕರ ದೃಷ್ಟಿಯಿಂದ ದೇಶಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಸ್ತುತ ದಿನಗಳಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ದೇಶಿ ವಿಜ್ಞಾನ-ತಂತ್ರಜ್ಞಾನವು ಅನುಭವ, ನಂಬಿಕೆ, ಭಾವನೆ ಹಾಗೂ ದುಡಿಮೆಯನ್ನು ಆಧರಿಸಿ ದೇಶಿಯ ಸಮುದಾಯವನ್ನು ಪ್ರಮುಖ ಅಂಶವಾಗಿ ನೋಡುತ್ತವೆ. ಈ ನಿಟ್ಟಿನಲ್ಲಿ ನಮ್ಮ ಜನಪದರು ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು ತಮ್ಮ ಸರಳ ಜ್ಞಾನದಿಂದ ತಿಳಿದುಕೊಳ್ಳುತ್ತಿದ್ದರು. ಆಧುನಿಕ ವಿಜ್ಞಾನವು ಬರೀ ಊಹೆ, ಸೂತ್ರ, ಪ್ರಯೋಗ ಹಾಗೂ ತರ್ಕವನ್ನು ಆಧರಿಸಿದೆ’ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ವಿಠ್ಠಪ್ಪ ಗೋರಂಟ್ಲಿ, ‘ನಾವು ಚಂದ್ರಯಾನಕ್ಕೆ ಪ್ರಯಾಣ ಬೆಳೆಸುತ್ತಿದ್ದೇವೆ. ಆದರೆ ಅನ್ನ ನೀಡುವ ಕಸುಬುಗಳನ್ನು ಮರೆಯುತ್ತಿದ್ದೇವೆ. ಇದರಿಂದ ನಾವು ಹೇಗೆ ಊಟ ಮಾಡಲು ಸಾಧ್ಯ. ಗಾಂಧೀಜಿ ಅವರ ಪ್ರಕಾರ, ಗುಡಿ ಕೈಗಾರಿಕೆಯಿಂದ ಮೋಕ್ಷ ಪಡೆಯಲು ಸಾಧ್ಯ.ಆದರೆ ನಾವು ಗುಡಿ ಕೈಗಾರಿಕೆಗಳನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡುತ್ತಿದ್ದೇವೆ’ ಎಂದರು.

ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ರಮೇಶ ನಾಯಕ, ‘ವಿಜ್ಞಾನ ಎಂದರೆ ಕ್ರಮಬದ್ಧವಾದ ಅಧ್ಯಯನ. ಅದು ನಿಶ್ಚಿತವಾದ ಫಲಿತಾಂಶಗಳನ್ನು ಎದುರು ನೋಡುತ್ತದೆ. ತಂತ್ರಜ್ಞಾನ ನೀತಿ-ನಿಯಮಗಳ ಅನುಸಾರದಲ್ಲಿ ಕೆಲಸ ಮಾಡುತ್ತದೆ. ಆದರೆ ದೇಶಿ ವಿಜ್ಞಾನ ಮತ್ತು ತಂತ್ರಜ್ಞಾನ ಸರಳವಾದ, ಎಲ್ಲರಿಗೂ ಅರ್ಥವಾಗುವಂತಹ ಅಂಶಗಳನ್ನು ಒಳಗೊಂಡಿದೆ’ ಎಂದು ತಿಳಿಸಿದರು.

ಡೀನ್‌ ಕೇಶವನ್‌ ಪ್ರಸಾದ್‌, ವಿಜ್ಞಾನ ವಿಭಾಗದ ಮುಖ್ಯಸ್ಥ ಸಿ. ಮಹಾದೇವ, ಪ್ರಾಧ್ಯಾಪಕರಾದ ಎಸ್‌.ವೈ. ಸೋಮಶೇಖರ್‌, ಎಫ್‌.ಟಿ. ಹಳ್ಳಿಕೇರಿ, ಸಿ.ಎಸ್‌. ವಾಸುದೇವನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.