ADVERTISEMENT

‘ಪಠ್ಯ’ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು: ತೇಜಸ್ವಿ ಕಟ್ಟಿಮನಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 4:11 IST
Last Updated 31 ಜುಲೈ 2025, 4:11 IST
ಬಳ್ಳಾರಿಯ ‘ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ದಲ್ಲಿ ಬುಧವಾರ ನಡೆದ 16ನೇ ಸಂಸ್ಥಾಪನ ದಿನದಲ್ಲಿ ಆಂಧ್ರ ಪ್ರದೇಶದ ಕೇಂದ್ರೀಯ ಗಿರಿಜನ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ತೇಜಸ್ವಿ ಕಟ್ಟಿಮನಿ ಮಾತನಾತನಾಡಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮುನಿರಾಜು, ಭಾಗವಹಿಸಿದ್ದರು
ಬಳ್ಳಾರಿಯ ‘ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ದಲ್ಲಿ ಬುಧವಾರ ನಡೆದ 16ನೇ ಸಂಸ್ಥಾಪನ ದಿನದಲ್ಲಿ ಆಂಧ್ರ ಪ್ರದೇಶದ ಕೇಂದ್ರೀಯ ಗಿರಿಜನ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ತೇಜಸ್ವಿ ಕಟ್ಟಿಮನಿ ಮಾತನಾತನಾಡಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮುನಿರಾಜು, ಭಾಗವಹಿಸಿದ್ದರು   

ಬಳ್ಳಾರಿ: ‘ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನ ಮತ್ತು ಔದ್ಯೋಗಿಕ ಭವಿಷ್ಯ ರೂಪಿಸುವಂತಿರಬೇಕು’ ಎಂದು ಆಂಧ್ರ ಪ್ರದೇಶದ ಕೇಂದ್ರೀಯ ಗಿರಿಜನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ತೇಜಸ್ವಿ ಕಟ್ಟಿಮನಿ ಅಭಿಪ್ರಾಯಪಟ್ಟರು. 

ಬಳ್ಳಾರಿಯ ‘ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ದ (ವಿಎಸ್‌ಕೆಯು)ದಲ್ಲಿ ಬುಧವಾರ ನಡೆದ 16ನೇ ಸಂಸ್ಥಾಪನ ದಿನದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳ ಅಭಿವೃದ್ದಿ ಶಿಕ್ಷಕರ ಕೈಯಲ್ಲಿ ಇದೆ. ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮಗಳನ್ನು ರೂಪಿಸಬೇಕಿದೆ. ಅದಕ್ಕಾಗಿ ಉದ್ಯಮಗಳ ಸಹಭಾಗಿತ್ವವನ್ನೂ ತೆಗೆದುಕೊಳ್ಳಬಹುದು. ಪಠ್ಯಕ್ರಮಗಳನ್ನು ರೂಪಿಸುವಾಗ ಅಧ್ಯಯನಗಳೂ ನಡೆಯಬೇಕು. ಪ್ರಾಧ್ಯಾಪಕರನ್ನು ಉದ್ದಿಮೆಗಳಿಗೆ ಕಳುಹಿಸಿ ಸಂಶೋಧನೆ ಮಾಡಿಸಿ ಮಾಹಿತಿ ಸಂಗ್ರಹಿಸಬೇಕು. ಆಗ ಮಾತ್ರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಹೊರ ಹೋದಾಗ ಯಶಸ್ವಿಯಾಗಲು  ಸಾಧ್ಯ. ವಿದ್ಯಾರ್ಥಿಗಳಲ್ಲಿಯೂ ಪಠ್ಯಕ್ರಮಗಳನ್ನು ಮೀರಿದ ಉತ್ಸಾಹ ಇರುವುದು ಮುಖ್ಯ’ ಎಂದು ಅವರು ಸಲಹೆ ನೀಡಿದರು. 

ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ‘ವಿವಿಯು ಉನ್ನತ ಶಿಕ್ಷಣದ ಜೊತೆಗೆ ಉತ್ತಮ ಬೋಧಕರನ್ನು ಹೊಂದಿದೆ. ಪ್ರಸ್ತುತ ವಿವಿಯಲ್ಲಿ 29 ವಿಭಾಗಗಳಿದ್ದು, ಮುಂದಿನ ದಿನಗಳಲ್ಲಿ 45 ವಿಭಾಗಗಳನ್ನು ಮಾಡುವ ಗುರಿ ಹಾಗೂ ಕೌಶಲ್ಯಧಾರಿತ ಪಠ್ಯಕ್ರಮವನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಅಪ್ಪಗೆರೆ ತಿಮ್ಮರಾಜು ಜನಪದ ಗಾಯನ ಮನಸೂರೆಗೊಳಿಸಿತು. ಪ್ರೊ ಶಾಂತಾನಾಯಕ್‌, ಕುಲಸಚಿವರಾದ (ಆಡಳಿತ) ನಾಗರಾಜು, ಎನ್‌. ಎಂ ಸಾಲಿ, ಹಣಕಾಸು ಅಧಿಕಾರಿ ನಾಗರಾಜ, ಎಲ್ಲ ವಿಭಾಗಗಳ ಮುಖ್ಯಸ್ಥರು, ಡೀನರು, ಸಿಂಡಿಕೇಟ್‌ ಸದಸ್ಯರು, ಬೋದಕ, ಬೋದಕೇತರ ವರ್ಗ, ವಿದ್ಯಾರ್ಥಿಗಳು ಇದ್ದರು.  

ಮಾತಿನಲ್ಲೇ ಜಾಡಿಸಿದ ರುದ್ರೇಶ್‌

‘ವಿಎಸ್‌ಕೆ ವಿಶ್ವವಿದ್ಯಾಲಯ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ. ಈ ಬೆಳವಣಿಗೆ ಹಾದಿಯಲ್ಲಿ ವಿಶ್ವವಿದ್ಯಾಲಯಕ್ಕೆ ಗುರಿ ಎಷ್ಟು ಮುಖ್ಯವೋ ಮಾರ್ಗವೂ ಅಷ್ಟೇ ಮುಖ್ಯವಾಗುತ್ತದೆ. ವಿವಿಯ ಬೇರು ಗಟ್ಟಿಯಾಗಿರಬೇಕಿದ್ದರೆ ಮಾರ್ಗ ಉತ್ತಮವಾಗಿರಬೇಕು ನೈತಿಕವಾಗಿರಬೇಕು’ ಎಂದು ವಿವಿಯ ನಿಕಟಪೂರ್ವ ಕುಲಸಚಿವ (ಆಡಳಿತ) ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಆಡಳಿತಾಧಿಕಾರಿಯೂ ಆದ ಎಸ್‌.ಎನ್‌ ರುದ್ರೇಶ್‌ ಅಭಿಪ್ರಾಯಪಟ್ಟರು. 

ವಿವಿಯಲ್ಲಿನ ಘಟಿಕೋತ್ಸವ ಪ್ರಮಾಣ ಪತ್ರ ಹಗರಣ ಟೆಂಡರ್‌ ಪ್ರಕ್ರಿಯೆಗಳ ವಿಳಂಬಗಳ ಹಿನ್ನೆಲೆಯಲ್ಲಿ ರುದ್ರೇಶ್‌ ಆಡಿರುವ ಮಾತುಗಳು ಪ್ರಾಮುಖ್ಯತೆ ಪಡೆದುಕೊಂಡಿದೆ. ವಿವಿಯ ವ್ಯವಸ್ಥೆಗಳ ವಿರುದ್ಧ ಅವರು ಪರೋಕ್ಷವಾಗಿ ಟೀಕಿಸಿದ್ದಾರೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. 

‘ಗಾಂಧಿ ಹೇಳಿದಂತೆ ಗುರಿ ಜತೆಗೆ ಮಾರ್ಗಗಳು ಮುಖ್ಯ. ಇದನ್ನು ವಿಶ್ವವಿದ್ಯಾಲಯದ ಕುಲಪತಿ ಡೀನ್ ಸಿಂಡಿಕೇಟ್‌ ಸದಸ್ಯರು ತೀರ್ಮಾನ ಮಾಡಬೇಕಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ ನೈತಿಕತೆ ಮುಖ್ಯ’ ಎಂದು ಅವರು ಹೇಳಿದರು.  

‘ಕುಲಪತಿಗೆ ಇನ್ನೂ ಮೂರು ವರ್ಷಗಳ ಅಧಿಕಾರವಧಿ ಇದೆ. ಇದನ್ನು ಬಳಸಿಕೊಂಡರೆ ವಿವಿ ಬೆಳೆಯುತ್ತದೆ. ವ್ಯವಸ್ಥೆ ಎಂದ ಮೇಲೆ ಕೆಟ್ಟವರು ಇದ್ದೇ ಇರುತ್ತಾರೆ. ಅದನ್ನೂ ಮೀರಿ ವಿವಿ ಬೆಳೆಯಬೇಕು’ ಎಂದು ಪರೋಕ್ಷ ಕುಟುಕಿದರು.  

ಇತರ ವಿವಿಗಳ ಜೊತೆ ಪೈಪೋಟಿ ನೀಡಬೇಕಾದರೆ ಗುಣಮಟ್ಟದ ಶಿಕ್ಷಣ ಅವಶ್ಯಕ. ವಿದ್ಯಾರ್ಥಿಗಳಿಗೆ ಔಚಿತ್ಯಪೂರ್ಣ ಶಿಕ್ಷಣ ನೀಡುವ ಜವಾಬ್ದಾರಿ ಇರುತ್ತದೆ. ಭವಿಷ್ಯದಲ್ಲಿ ಈ ವಿವಿ ಅತ್ಯುತ್ತಮ ಸ್ಥಾನ ಪಡೆಯಲಿದೆ.
ಪ್ರೊ ಮುನಿರಾಜು, ಕುಲಪತಿ, ವಿಎಸ್‌ಕೆಯು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.