ADVERTISEMENT

ತೆಕ್ಕಲಕೋಟೆ: ಆದಿಮಾನವನ ಪಳೆಯುಳಿಕೆ ಪತ್ತೆ

ತೆಕ್ಕಲಕೋಟೆಯ ಪ್ರಾಗೈತಿಹಾಸಿಕ ಕಾಲದ ನೆಲೆಗಳಲ್ಲಿ ಉತ್ಖನನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:29 IST
Last Updated 7 ಫೆಬ್ರುವರಿ 2026, 2:29 IST
ತೆಕ್ಕಲಕೋಟೆ ಪಟ್ಟಣದ ಪ್ರಾಗೃತಿಹಾಸಿಕ ನೆಲೆಗಳಲ್ಲಿ ಪತ್ತೆಯಾದ 5 ಸಾವಿರ ವರ್ಷಗಳ ಹಿಂದಿನ ಮಾನವನ ಅಸ್ಥಿಪಂಜರ
ತೆಕ್ಕಲಕೋಟೆ ಪಟ್ಟಣದ ಪ್ರಾಗೃತಿಹಾಸಿಕ ನೆಲೆಗಳಲ್ಲಿ ಪತ್ತೆಯಾದ 5 ಸಾವಿರ ವರ್ಷಗಳ ಹಿಂದಿನ ಮಾನವನ ಅಸ್ಥಿಪಂಜರ   

‌ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಪಟ್ಟಣದ ‘ಗೌಡ್ರ ಮೂಲೆ’ ಬೆಟ್ಟದಲ್ಲಿ ಸುಮಾರು 5,000 ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ ಪತ್ತೆಯಾಗಿದೆ ಎಂದು ಉತ್ಖನನ ತಂಡದ ಸಹ ನಿರ್ದೇಶಕಿ, ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್ ಸುಗಂಧಿ ತಿಳಿಸಿದ್ದಾರೆ.

ಹಲವು ತಿಂಗಳಿನಿಂದ ಪಟ್ಟಣದ ‘ಹಿರೇ ಅರ್ಲ’, ‘ಬೂದಿ ದಿಬ್ಬ’, ‘ಬಾಳೆ ತೋಟ’, ‘ಜಕ್ಕೇರು ಗುಡ್ಡ’ ಮತ್ತು ‘ಹುಡೇದಗುಡ್ಡ’ ಸುತ್ತಮುತ್ತಲಿನ ಹಲವು ಸ್ಥಳಗಳಲ್ಲಿ ತಜ್ಞರ ಮೂರು ತಂಡ ಉತ್ಪನನ ಹಾಗೂ ಸಂಶೋಧನಾ ಕಾರ್ಯದಲ್ಲಿ ನಿರತವಾಗಿದೆ. 

‘ವಾರದ ಹಿಂದೆ ಉತ್ಖನನದ ವೇಳೆ ಮಾನವನ ಮೂಳೆಯೊಂದು ಸಿಕ್ಕಿತ್ತು. ಮಣ್ಣನ್ನು ಮತ್ತಷ್ಟು ಅಗೆದಾಗ, 5.5 ಅಡಿ ಉದ್ದದ ಆದಿಮಾನವನ ಅಸ್ಥಿಪಂಜರ ಗೋಚರಿಸಿತು. ಇಲ್ಲಿ ಮಾನವನ ದೇಹದ ಮೇಲೆ ಕಲ್ಲುಗಳನ್ನು ಇಟ್ಟು ಶವ ಸಂಸ್ಕಾರ ಮಾಡಲಾಗಿದೆ. ಇದು 5,000 ವರ್ಷಗಳ ಹಿಂದಿನ ಪಳೆಯುಳಿಕೆ ಇರಬಹುದು’ ಎಂದು ನಮಿತಾ ಎಸ್‌ ಸುಗಂಧಿ ವಿವರಿಸಿದರು. 

ADVERTISEMENT
ಇಲ್ಲಿನ ಕೆಲ ನೆಲೆಗಳಲ್ಲಿ ಸುಮಾರು ಎರಡೂವರೆ ಅಡಿ ಎತ್ತರದ ಗಡಿಗೆಗಳು ದೊರೆತಿವೆ. ಅವುಗಳಲ್ಲಿ ಮೊಳೆಗಳು ಸಿಕ್ಕಿವೆ. ವಿವಿಧ ಗಾತ್ರದ ಮಡಿಕೆಗಳು ಸಹ ಸಿಕ್ಕಿದ್ದು ಶವಸಂಸ್ಕಾರಕ್ಕೆ ಬಳಸಿರುವ ಸಾಧ್ಯತೆ ಇದೆ.
– ನಮಿತಾ ಎಸ್ ಸುಗಂಧಿ, ಪ್ರಾಧ್ಯಾಪಕಿ, ಹಾರ್ಟ್‌ವಿಕ್ ವಿಶ್ವವಿದ್ಯಾಲಯ ಅಮೆರಿಕಾ

‘ತೆಕ್ಕಲಕೋಟೆಯ ಭೂಪ್ರದೇಶವು ಬಹು ವಿಶಿಷ್ಟವಾಗಿದೆ. ಶಿಲಾಯುಗ, ನವಶಿಲಾಯುಗ ಮತ್ತು ಲೋಹಯುಗದ ಕುರುಹುಗಳು ಇಲ್ಲಿವೆ. ಇಲ್ಲಿ ಸಿಕ್ಕಿರುವ ಪಳೆಯುಳಿಕೆಗಳ ಸಂರಕ್ಷಣೆ ಮತ್ತು ಅದರ ಕಾಲಮಾನ ಅಧ್ಯಯನಕ್ಕೆ ಗ್ರೀಸ್ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞೆ ಸುಸೇನ್ ಕ್ರಿಕ್ ಪ್ಯಾಟ್ರಿಕ್ ಸ್ಮಿತ್ ಅವರ ಸಲಹೆ, ಮಾರ್ಗದರ್ಶನ ನೆರವಾಗಿದೆ’ ಎಂದು ಅವರು ತಿಳಿಸಿದರು.

ಆದಿಮಾನವರು ಬಳಸುತ್ತಿದ್ದ ಚೂಪಾದ ಕಲ್ಲಿನ ಆಯುಧಗಳು, ಕೈ ಕೊಡಲಿ, ಪ್ರಾಣಿಗಳ ಹಲ್ಲು, ಒರಳು, ಗುಂಡು ಸೇರಿ ಇತರೆ ಮಹತ್ವದ ವಸ್ತುಗಳು ಇಲ್ಲಿ ಪತ್ತೆಯಾಗಿವೆ. ಮುಖ್ಯವಾಗಿ ಈ ಜಾಗ ಶಿಲಾಯುಧ ತಯಾರಿಕೆಯ ಕಾರ್ಖಾನೆಯಾಗಿತ್ತು ಎಂದು ಅಂದಾಜಿಸಲಾಗಿದೆ.

ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ, ತೆಕ್ಕಲಕೋಟೆಯಲ್ಲಿ ಪ್ರಾಗೈತಿಹಾಸಿಕ, ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಸ್ಥಳಗಳ ಉತ್ಖನನಕ್ಕೆ ಕೇಂದ್ರ ಸರ್ಕಾರ ಕಳೆದ ವರ್ಷ ಅನುಮೋದನೆ ನೀಡಿತ್ತು. ಉತ್ಪನನ ತಂಡದಲ್ಲಿ ಐಐಟಿ ಕಾನ್ಪುರದ ಡಾ. ಯಶಸ್ವಿನಿ ಜಯದೇವಯ್ಯ, ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಜಿ. ರೋಹಿಣಿ ಮತ್ತು ಅಶೋಕ ಅಬಕಾರಿ ಇದ್ದಾರೆ.

ತೆಕ್ಕಲಕೋಟೆ ಪಟ್ಟಣದ ಪ್ರಾಗೃತಿಹಾಸಿಕ ನೆಲೆಗಳಲ್ಲಿ ಪತ್ತೆಯಾದ ಶವ ಸಂಸ್ಕಾರಕ್ಕಾಗಿ ಬಳಸುತ್ತಿದ್ದ ಮಡಿಕೆ
ತೆಕ್ಕಲಕೋಟೆ ಪಟ್ಟಣದ ಪ್ರಾಗೃತಿಹಾಸಿಕ ನೆಲೆಯಲ್ಲಿ ಪತ್ತೆಯಾದ ಶವ ಸಂಸ್ಕಾರಕ್ಕಾಗಿ ಬಳಸುತ್ತಿದ್ದ ಮಡಿಕೆ
ತೆಕ್ಕಲಕೋಟೆ ಪಟ್ಟಣದ ಪ್ರಾಗೃತಿಹಾಸಿಕ ನೆಲೆಗಳಲ್ಲಿ ಅಮೇರಿಕಾದ ಹಾರ್ಟ್ ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್ ಸುಗಂಧಿ ನೇತೃತ್ವದ ತಂಡ ಉತ್ಖನನ ಕಾರ್ಯದಲ್ಲಿ ತೊಡಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.