ADVERTISEMENT

ತೆಕ್ಕಲಕೋಟೆ | ಬಿಡಾಡಿ ದನಗಳ ಹಾವಳಿ: ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:19 IST
Last Updated 14 ಆಗಸ್ಟ್ 2025, 5:19 IST
ತೆಕ್ಕಲಕೋಟೆ ಪಟ್ಟಣದ ನೀಲಕಂಠ ದೇವಸ್ಥಾನದ ಬಳಿ ಇರುವ ಬಿಡಾಡಿ ದನ
ತೆಕ್ಕಲಕೋಟೆ ಪಟ್ಟಣದ ನೀಲಕಂಠ ದೇವಸ್ಥಾನದ ಬಳಿ ಇರುವ ಬಿಡಾಡಿ ದನ   

ತೆಕ್ಕಲಕೋಟೆ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದಲ್ಲಿ 20 ವಾರ್ಡ್‌ಗಳಿವೆ. ಕಾಡಸಿದ್ದೇಶ್ವರ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ನಾಡ ಕಚೇರಿ, ರಾಷ್ಟ್ರೀಯ ಹೆದ್ದಾರಿ ಅಲ್ಲದೆ ಶಾಲಾ ಕಾಲೇಜುಗಳ ಆವರಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ.

ರಾಷ್ಟ್ರೀಯ ಹೆದ್ದಾರಿ ಮಧ್ಯೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ದನಗಳು ಸದಾ ಮಲಗಿರುತ್ತವೆ. ಹೀಗಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇನ್ನೊಂದೆಡೆ ಕೆಲ ದನಗಳು ಅಂಗಡಿ ಮುಂಗಟ್ಟುಗಳ ಮುಂಭಾಗದ ವಸ್ತುಗಳು, ಇಲ್ಲವೆ ಗಾಡಿಗಳ ಬ್ಯಾಗ್‌ಗಳಲ್ಲಿ ಇಟ್ಟಿರುವ ಸಾಮಗ್ರಿ ತಿಂದು ಹಾನಿ ಮಾಡುತ್ತಿವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘30ಕ್ಕೂ ಹೆಚ್ಚು ದನಗಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇರುತ್ತವೆ. ಈ ಕುರಿತು ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅವುಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು' ಎಂದು ಸರ್ಕಾರಿ ಬಾಲಕರ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶೇಕಣ್ಣ ಒತ್ತಾಯಿಸಿದರು.

‘ಬಿಡಾಡಿ ದನಗಳ ಹಾವಳಿ ತಡೆಗಟ್ಟುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಭಯದಲ್ಲೇ ಕಾಲ ಕಳೆಯುವಂತಾಗಿದೆ’ ಎಂಬುದು ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ. ಮಾರುತಿ ಆರೋಪ.

ಖಾಸಗಿ ವ್ಯಕ್ತಿಗಳು ತಮ್ಮ ದನಗಳನ್ನು ಬಿಡಾಡಿ ದಿನಗಳ ಜತೆಗೆ ಬಿಡುವುದರಿಂದ ಈ ಸಂಖ್ಯೆ 80 ರಿಂದ 100 ವರೆಗೆ ಆಗಿದೆ. ಹಗಲೆಲ್ಲ ಬೀದಿ ಬೀದಿ ಸುತ್ತುವ ಕೆಲವು ದನಗಳು ಸಂಜೆಗೆ ಮನೆ ಸೇರುತ್ತವೆ. ದನಗಳಿಗೆ ಏನೇ ಮಾಡಿದರೂ ಮಾಲೀಕರು ಬಂದು ಜಗಳ ತೆಗೆಯುತ್ತಾರೆ ಎಂದು ತರಕಾರಿ ಮಾರುಕಟ್ಟೆ ಹಾಗೂ ಅಂಗಡಿ ಮಾಲೀಕರು ದೂರುತ್ತಾರೆ.

ADVERTISEMENT
ತೆಕ್ಕಲಕೋಟೆ ಪಟ್ಟಣದ ನೀಲಕಂಠ ದೇವಸ್ಥಾನದ ಬಳಿ ಇರುವ ಬಿಡಾಡಿ ದನ
ದನಗಳ ಮಾಲೀಕರು ಅವುಗಳನ್ನು ಎಲ್ಲೆಂದರಲ್ಲಿ ಬಿಡಬಾರದು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಮುಂದೆ ರಸ್ತೆಗಳಲ್ಲಿ ಬಿಡಾಡಿ ದನಗಳು ಕಂಡು ಬಂದರೆ ಅವುಗಳನ್ನು ಸಮೀಪದ ಗೋಶಾಲೆಗೆ ಬಿಡಲಾಗುವುದು ಎಂದು ಡಂಗೂರ ಸಾರಿಸಲಾಗಿದೆ.
–ಪರಶುರಾಮ ಪಟ್ಟಣ, ಪಂಚಾಯಿತಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.