
ತೆಕ್ಕಲಕೋಟೆ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಮಂಗಳವಾರ ಗುಡುಗು ಸಹಿತ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಭತ್ತದ ಬೆಳೆ ನೆಲ ಕಚ್ಚಿದೆ.
ಎಂ.ಸೂಗೂರು, ರುದ್ರಪಾದ, ನಡವಿ, ನಿಟ್ಟೂರು, ಹೆರಕಲ್ಲು ಗ್ರಾಮಗಳಲ್ಲಿ ಸೋನಾ ಮಸೂರಿ, ಆರ್‌ಎನ್‌ಆರ್, ಗಂಗಾ ಕಾವೇರಿ ತಳಿಯ ಭತ್ತದ ಬೆಳೆಯ ಕಟಾವು ನಡೆಯುತ್ತಿದೆ. ಈಗ ಸುರಿದ ಅಕಾಲಿಕ ಮಳೆಯಿಂದಾಗಿ ರೈತರ ಆತಂಕ ಹೆಚ್ಚಿಸಿದೆ.
ತೆಕ್ಕಲಕೋಟೆ, ಕರೂರು ಹೋಬಳಿ ವ್ಯಾಪ್ತಿಯ ಭೈರಾಪುರ, ದರೂರು, ಬಲಕುಂದಿ, ಉಪ್ಪಾರ ಹೊಸಳ್ಳಿ, ಹಳೇಕೋಟೆ ಗ್ರಾಮದ ಭತ್ತದ ಬೆಳೆಯು ಕಾಳು ಕಟ್ಟಿದ್ದು, ರೈತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ಸಂಜೆ ವೇಳೆ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಭತ್ತದ ಬೆಳೆ ನೆಲಕಚ್ಚಿದೆ. ಕೆಲವಡೆ ಅರ್ಧದಷ್ಟು ಬೆಳೆ ನೆಲ ಕಚ್ಚಿದ್ದರೆ ಮತ್ತಷ್ಟು ಕಡೆ ಸಂಪೂರ್ಣ ಸುರುಳಿ ಸುತ್ತಿ ನೆಲಕ್ಕೆ ಬಿದ್ದಿದೆ.
ಸಿರಿಗೇರಿ ವ್ಯಾಪ್ತಿಯ ಕೊಂಚೆಗೇರಿ, ದಾಸಾಪುರ ಗ್ರಾಮಗಳ ರೈತರಾದ ಚಂದ್ರಪ್ಪ, ಶೇಷಪ್ಪ, ತಿಮ್ಮಪ್ಪ, ಈರಣ್ಣ ಸೇರಿದಂತೆ ನೂರಾರು ರೈತರ ಭತ್ತದ ಬೆಳೆ ನೆಲಕಚ್ಚಿದೆ ಇದರಿಂದ ಬೆಳೆ ಕುಂಠಿತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ಮುಗಿದ ನಂತರ ಭತ್ತದ ಬೆಳೆ ಕಟಾವ್ ಮಾಡುವ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳೆದ ಎರಡು ದಿನಗಳಿಂದ ಸಂಜೆ ವೇಳೆ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಭತ್ತದ ಬೆಳೆ ನೆಲಕಚ್ಚಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.