ADVERTISEMENT

ತೆಕ್ಕಲಕೋಟೆ | 6 ಜನರಿಗೆ ನಾಯಿ ಕಡಿತ : ಔಷಧಿ ಇಲ್ಲವೆಂದ ವೈದ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 6:59 IST
Last Updated 16 ಅಕ್ಟೋಬರ್ 2025, 6:59 IST
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತಕ್ಕೆ ಚುಚ್ಚುಮದ್ದನ್ನು ಖಾಸಗಿ ಔಷಧಿ ಕೇಂದ್ರದಿಂದ ತರಿಸಿ ಹಾಕಿಸಲಾಯಿತು
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತಕ್ಕೆ ಚುಚ್ಚುಮದ್ದನ್ನು ಖಾಸಗಿ ಔಷಧಿ ಕೇಂದ್ರದಿಂದ ತರಿಸಿ ಹಾಕಿಸಲಾಯಿತು   

ತೆಕ್ಕಲಕೋಟೆ: ಕರೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತಕ್ಕೆ ಚುಚ್ಚುಮದ್ದು ಇಲ್ಲ ಎಂದು ಹೇಳಿ ಚಿಕಿತ್ಸೆಗಾಗಿ ಬೇರೆಡೆ ಹೋಗುವಂತೆ ತಿಳಿಸಿದ ಘಟನೆ ಬುಧವಾರ ನಡೆದಿದೆ.

ಗ್ರಾಮದ ಬಸವರೆಡ್ಡಿ ಅವರ ಮಗ ರಾಘವೇಂದ್ರ ರೆಡ್ಡಿ ಅವರು ನಾಯಿ ಕಡಿತಕ್ಕೆ ಕೆಲ ದಿನಗಳ ಹಿಂದೆ ಒಳಗಾಗಿದ್ದರು. ಬುಧವಾರ ಮೂರನೆ ಚುಚ್ಚುಮದ್ದು ಹಾಕಬೇಕಾಗಿತ್ತು. ಆದರೆ, ಆಸ್ಪತ್ರೆಗೆ ತೆರಳಿದಾಗ ಚುಚ್ಚುಮದ್ದು ಇಲ್ಲ. ತೆಕ್ಕಲಕೋಟೆ ಇಲ್ಲವೆ ಸಿರುಗುಪ್ಪ ನಗರ ಆಸ್ಪತ್ರೆಗೆ ತೆರಳುವಂತೆ ವೈದ್ಯರಾದ ಡಾ.ಬಾಲಾಜಿ ತಿಳಿಸಿದರು' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಇಬ್ಬರು, ಮಂಗಳವಾರ ಮೂವರಿಗೆ ಹಾಗೂ ಬುಧವಾರ 6 ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ADVERTISEMENT

’ಕಳೆದ 15 ದಿನಗಳಲ್ಲಿ 20ಕ್ಕೂ ಹೆಚ್ಚು ಜನ ನಾಯಿ ಕಡಿತಕ್ಕೆ ಒಳಗಾಗಿದ್ದು, ನಿತ್ಯವೂ ಕರೂರು ಗ್ರಾಮದಿಂದ 2 ರಿಂದ 3 ಜನ ಚಿಕಿತ್ಸೆಗೆ ತೆರಳುವಂತಾಗಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ಚುಚ್ಚು ಮದ್ದು ಹಾಕಲೇ ಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದಾಗ ವೈದ್ಯಾಧಿಕಾರಿ ಡಾ.ಬಾಲಾಜಿ ಖಾಸಗಿ ಔಷಧಿ ಕೇಂದ್ರದಿಂದ ಚುಚ್ಚುಮದ್ದು ತರಿಸಿ ಹಾಕಿದ್ದಾರೆ.

'ಆಸ್ಪತ್ರೆಯ ಸ್ಟಾಕ್ ರಿಜಿಸ್ಟರ್‌ನಲ್ಲಿ ಔಷಧ ದಾಸ್ತಾನಿನ ಕುರಿತು ಯಾವುದೇ ಮಾಹಿತಿ ಇಲ್ಲ. ನಾಯಿ ಕಡಿತದ ಔಷಧಿ ಆಸ್ಪತ್ರೆಯಲ್ಲಿ ಇಲ್ಲದೆ ಇರುವುದು ವೈದ್ಯರ ನಿರ್ಲಕ್ಷ್ಯವನ್ನು ತೋರಿಸುತ್ತದೆ' ಎಂದು ವೈ. ಕೃಷ್ಣಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ದಮ್ಮೂರು ಬಸವರಾಜ ಇವರ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.