ADVERTISEMENT

ಸಚಿವ ಸ್ಥಾನದ ಪ್ರಹಸನ ಕೊನೇ ಹಂತಕ್ಕೆ: ಶೀಘ್ರ ಸಂಪುಟಕ್ಕೆ?

ಆರ್. ಹರಿಶಂಕರ್
Published 2 ಏಪ್ರಿಲ್ 2025, 5:48 IST
Last Updated 2 ಏಪ್ರಿಲ್ 2025, 5:48 IST
ಬಿ.ನಾಗೇಂದ್ರ 
ಬಿ.ನಾಗೇಂದ್ರ    

ಬಳ್ಳಾರಿ: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಹಸನ ಬಹುತೇಕ ಕೊನೆ ಹಂತ ತಲುಪಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಏ.2ರ ದೆಹಲಿ ಪ್ರವಾಸದ ಬಳಿಕ ಉತ್ತರ ಸಿಗಲಿದೆ. 

ಕರ್ನಾಟಕ ಭವನದ ಹೊಸ ಕಟ್ಟಡ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮ್ಯಯ ಏ.2ರಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಆದರೆ, ಇದಕ್ಕೂ ಮುಖ್ಯವಾಗಿ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕಾತಿ ಕುರಿತು ಪಕ್ಷದ ವರಿಷ್ಠರೊಂದಿಗೆ ಚರ್ಚಿಸುವುದೇ ಅವರ ದೆಹಲಿ ಪ್ರವಾಸದ ಮುಖ್ಯ ಅಜೆಂಡಾ ಎಂದು ಗೊತ್ತಾಗಿದೆ.

ಇನ್ನು ನಿರ್ದಿಷ್ಟವಾಗಿ ಹೇಳುವುದಾದರೆ, ನಾಗೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಅನುಮತಿ ಕೋರಲೆಂದೇ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. 

ADVERTISEMENT

ಒಂದಷ್ಟು ಸಚಿವರನ್ನು ಸಂಪುಟದಿಂದ ಕೈಬಿಡಬೇಕು, ಹೊಸಬರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಚರ್ಚೆಯೂ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದೆ. ಆದರೆ, ಸರ್ಕಾರ ಬಂದು ಎರಡೂವರೆ ವರ್ಷ ಪೂರ್ಣಗೊಳ್ಳುವ ಸಮಯಕ್ಕೆ ಸಂಪುಟ ಪುನಾರಚನೆ ಕೈಗೊತ್ತಿಕೊಳ್ಳಬೇಕು ಎಂಬ ಒತ್ತಾಯಗಳೂ ಇವೆ. ಇಲ್ಲವಾದರೆ, ಸರ್ಕಾರದಲ್ಲಿ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಹಾಗಾಗಿ ಸದ್ಯ ಸಂಪುಟ ಪುನಾರಚನೆಯಂಥ ಜೇನಿನ ಗೂಡಿಗೆ ಕೈ ಹಾಕದೇ ನಾಗೇಂದ್ರ ಅವರಿಗೆ ಮಾತ್ರ ಅವಕಾಶ ನೀಡುವಂತೆ ಸಿದ್ದರಾಮಯ್ಯ ದೆಹಲಿ ನಾಯಕರ ಬಳಿ ಒತ್ತಾಯ ಮಂಡಿಸಲಿದ್ದಾರೆ ಎಂದು ಗೊತ್ತಾಗಿದೆ. 

ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಸ್ವತಃ ಸಿದ್ದರಾಮಯ್ಯ ಅವರೂ ಬಹಿರಂಗವಾಗಿಯೇ ವಾಗ್ದಾನ ನೀಡಿದ್ದಾರೆ. ಅದನ್ನು ಈಡೇರಿಸಿಕೊಳ್ಳಲೇಬೇಕಾದ ಅನಿವಾರ್ಹತೆ ಅವರಿಗೂ ಇದೆ. ಹೀಗಾಗಿಯೇ ಏಪ್ರಿಲ್‌ 2ರಂದು ದೆಹಲಿಗೆ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. 

ಅಲ್ಪಾವಧಿಯ ಸ್ಥಾನ?: ಬಿ. ನಾಗೇಂದ್ರ ಅವರು ಸದ್ಯ ಸಚಿವರಾದರೂ ಅದು ಅಲ್ಪಕಾಲಿಕ ಎನ್ನುತ್ತಿವೆ ಉನ್ನತ ಮೂಲಗಳು. ಅಧಿಕಾರದ ಪರಸ್ಪರ ಹಂಚಿಕೆ ಸೂತ್ರದ ಆಧಾರದಲ್ಲೇ ಕೆಲವೊಂದು ಜಿಲ್ಲೆಗಳಲ್ಲಿ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಎರಡೂವರೆ ವರ್ಷಗಳ ಬಳಿಕ ಈಗಿರುವ ಸಚಿವರನ್ನು ಬದಲಿಸಿ ಅವರ ಜಿಲ್ಲೆಯ ಬೇರೊಬ್ಬ ಶಾಸಕರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. 

ಬಳ್ಳಾರಿ ಜಿಲ್ಲೆಯಲ್ಲೂ ಸಂಪುಟ ಸೇರಲು ಶಾಸಕರೊಬ್ಬರು ಸರತಿಯಲ್ಲಿದ್ದಾರೆ ಎನ್ನಲಾಗಿದೆ. ಈ ಪ್ರಕಾರ ನೋಡುವುದಾದರೆ ಶಾಸಕ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಕ್ಕರೂ ಅದು ಅಲ್ಪಾವಧಿಯದ್ದಾಗಿರುತ್ತದೆ ಎಂದು ಗೊತ್ತಾಗಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೂ ವರ್ಷಗಳ ಬಳಿಕ ಈ ಪ್ರಹಸನ ನಡೆಯುತ್ತದೆ. ಆ ಸಮಯ ಬರಲು ಇನ್ನು ಆರೇಳು ತಿಂಗಳು ಬಾಕಿ ಉಳಿದಿದೆ. ಅಷ್ಟರೊಳಗೆ ಅಧಿಕಾರ ಸಿಕ್ಕರೆ ಆರು ತಿಂಗಳಾದರೂ ಅಧಿಕಾರದಲ್ಲಿರಬಹುದು. ಇಲ್ಲವಾದರೆ, ಅಧಿಕಾರವೇ ಸಿಗದೇ ಹೋಗಬಹುದು ಎಂಬುದು ಬಿ. ನಾಗೇಂದ್ರ ಅವರ ಆತಂಕ. ಹೀಗಾಗಿ ಅವರು ಆರು ತಿಂಗಳ ಮಟ್ಟಿಗಾದರೂ ನನಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಗೊತ್ತಾಗಿದೆ. 

ಕ್ಷೇತ್ರಕ್ಕೇ ಬಂದಿಲ್ಲ ಪ್ರಶ್ನೆ ಕೇಳಿಲ್ಲ

ವಾಲ್ಮೀಕಿ ನಿಗಮದಲ್ಲಿನ ಹಗರಣದ ಹಿನ್ನೆಲೆಯಲ್ಲಿ 2024ರ ಜೂನ್‌ 6ರಂದು ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಕೆಲ ದಿನ ಅವರು ಜೈಲಿನಲ್ಲಿದ್ದರು. ಬಿಡುಗಡೆ ಬಳಿಕ ಅವರು ಒಂದೆರಡು ಬಾರಿ ಕ್ಷೇತ್ರಕ್ಕೆ ಬಂದು ಹೋಗಿರುವುದು ಬಿಟ್ಟರೆ ಉಳಿದಂತೆ ಇತ್ತ ತಲೆ ಹಾಕಿಯೂ ನೋಡಿಲ್ಲ. ಬಾಣಂತಿಯರ ಸಾವು ಸಂಭವಿಸಿದಾಗಲೂ ಒಣ ಮೆಣಸಿನ ಕಾಯಿ ಮಾರುಕಟ್ಟೆಗೆ ಹೋರಾಟಗಳು ನಡೆದಾಗಲೂ ದರ ಕುಸಿದರೂ ಅವರ ಸಮಸ್ಯೆ ಕೇಳಲಾಗಲಿ ಕ್ಷೇತ್ರ ಹೇಗಿದೆ ಎಂದು ನೋಡಲಾಗಲಿ ಅವರು  ಬಂದಿಲ್ಲ.  ಇಷ್ಟೇ ಅಲ್ಲ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಕ್ರಿಯವಾಗಿ ಕಲಾಪದಲ್ಲೂ ಪಾಲ್ಗೊಂಡಿಲ್ಲ. ಬಜೆಟ್‌ ಅಧಿವೇಶನದ ವೇಳೆಯಲ್ಲೂ ಅವರು ಸದನದಲ್ಲಿ ಕಾಣಲಿಲ್ಲ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಗಲಿ ಜಿಲ್ಲೆಗೆ ಸಂಬಂಧಿಸಿದಂತೆ ಆಗಲಿ ವಿಧಾನಸಭೆಯಲ್ಲಿ ಅವರು ಒಂದೂ ಪ್ರಶ್ನೆಯನ್ನು ಕೇಳಿಲ್ಲ. ಚರ್ಚೆಗಳಲ್ಲಿ ಪಾಲ್ಗೊಂಡಿಲ್ಲ. ಕ್ಷೇತ್ರದೆಡೆಗಿನ ಅವರ ದಿವ್ಯ ನಿರ್ಲಕ್ಷ್ಯದ ಬಗ್ಗೆ ಜನರಲ್ಲಿ ಅಸಮಾಧಾನವೂ ಇದೆ.  ಈ ಮಧ್ಯೆ ಅವರು ಮಾ.21ರಂದು ನಡೆದಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಾಣಿಸಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.