ಕುಡತಿನಿ (ತೋರಣಗಲ್ಲು): ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಶಿಥಿಲಗೊಂಡ ಶಾಲಾ ಕೊಠಡಿಗಳ ಮರುನಿರ್ಮಾಣ ಕಾರ್ಯ, ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದೆ. ಶಿಥಿಲ ಗೋಡೆಗಳು ಆಪಾಯ ಆಹ್ವಾನಿಸುತ್ತಿವೆ.
ಮಳೆ ಬಂದಾಗ ಗೋಡೆಗಳು ನೆನೆದು, ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಆತಂಕವಿದೆ. ಮಕ್ಕಳು, ಶಿಕ್ಷಕರು ನಿತ್ಯ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
ಕಳೆದ ವರ್ಷ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಜಿಲ್ಲಾ ಖನಿಜ ನಿಧಿಯಲ್ಲಿ ಕೆಲವು ಕೊಠಡಿಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಎರಡು ಕೊಠಡಿಗಳನ್ನು ಮಾತ್ರ ದುರಸ್ತಿಗೊಳಿಸದೆ, ಅರ್ಧಕ್ಕೆ ಕೈಬಿಡಲಾಗಿದೆ.
1ರಿಂದ 8ನೇ ತರಗತಿವರಗಿನ ಈ ಶಾಲೆಯಲ್ಲಿ ಒಟ್ಟು 650 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವರ್ಷ ಇಂಗ್ಲಿಷ್ ಮಾಧ್ಯಮದ ಎಲ್‍ಕೆಜಿ, ಯುಕೆಜಿ ತರಗತಿಗಳು ಸಹ ಆರಂಭಗೊಂಡಿದ್ದು, ಚಿಕ್ಕ ಮಕ್ಕಳ ದಾಖಲಾತಿಯೂ ಹೆಚ್ಚಿದೆ. ಮಕ್ಕಳು ಈ ಕಡೆ ಬಂದಾಗ ಅಪಾಯ ಸಂಭವಿಸಿದರೆ ಏನು ಗತಿ? ಎಂಬ ಆತಂಕ ಪೋಷಕರದ್ದಾಗಿದೆ.
ಹಲವು ಕೊರತೆ: ಶಾಲೆಯ ಆವರಣ ಬಹಳ ಚಿಕ್ಕದಾಗಿದ್ದು, ಮೈದಾನದ ಕೊರತೆ ಇದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ.₹70 ಸಾವಿರ ವೆಚ್ಚದ ನೂತನ ಶುದ್ಧ ಕುಡಿಯುವ ನೀರಿನ ಘಟಕವು ನಿರ್ವಹಣೆ ಕೊರತೆಯಿಂದ ಹಾಳಾಗಿದೆ.
ಶಿಥಿಲ ಕೊಠಟಿಗಳನ್ನು ಶೀಘ್ರ ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಿಸುವಂತೆ ಶಿಕ್ಷಣ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಜನ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೊಠಡಿಗಳಿಲ್ಲ. ಶಿಥಿಲ ಕೊಠಡಿಗಳನ್ನು ತ್ವರಿತವಾಗಿ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಿದರೆ ಅನುಕೂಲವಾಗುತ್ತದೆಕೆ.ನಳಿನಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ
ಶಾಲಾ ಗೋಡೆಗಳನ್ನು ಶೀಘ್ರ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಲು ಸೂಕ್ತ ಕ್ರಮ ವಹಿಸಲಾಗುವುದುಸಿದ್ಧಲಿಂಗಮೂರ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಕುರುಗೋಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.