ADVERTISEMENT

ತೆಕ್ಕಲಕೋಟೆಯಲ್ಲಿ 3ನೇ ಅಸ್ಥಿಪಂಜರ ಪತ್ತೆ: ಉತ್ಖನನ ಅಂತ್ಯ

ತೆಕ್ಕಲಕೋಟೆಯಲ್ಲಿ ನಡೆಯುತ್ತಿದ್ದ ಉತ್ಖನನ ಅಂತ್ಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:58 IST
Last Updated 13 ಫೆಬ್ರುವರಿ 2026, 6:58 IST
ಮೂರನೇ ಅಸ್ಥಿಪಂಜರ ಪತ್ತೆಯಾದ ಜಾಗವನ್ನು ಉತ್ಖನನ ತಂಡದ ಸಂಶೋಧಕರು ಪರಿಶೀಲಿಸಿದರು. 
ಮೂರನೇ ಅಸ್ಥಿಪಂಜರ ಪತ್ತೆಯಾದ ಜಾಗವನ್ನು ಉತ್ಖನನ ತಂಡದ ಸಂಶೋಧಕರು ಪರಿಶೀಲಿಸಿದರು.     

ತೆಕ್ಕಲಕೋಟೆ: ಇಲ್ಲಿನ ‘ಗೌಡರ ಮೂಲೆ’ ಪ್ರದೇಶದಲ್ಲಿ ಕಳೆದ ಡಿಸೆಂಬರ್‌ನಿಂದ ನಡೆಯುತ್ತಿದ್ದ ಉತ್ಖನನ ಕಾರ್ಯ ಗುರುವಾರ ಅಂತ್ಯಗೊಳ್ಳುವ ಮುನ್ನ ಆದಿಮಾನವನ ಮತ್ತೊಂದು ಅಸ್ಥಿಪಂಜರ ಪತ್ತೆಯಾಯಿತು.

ಸದ್ಯ ಎರಡು ಅಸ್ಥಿಪಂಜರ ಸಿಕ್ಕಿರುವ ಸ್ಥಳದಲ್ಲಿನ ಎಲ್ಲಾ ಮೂಳೆಗಳನ್ನು ಗುರುವಾರ ತೆಗೆದು ಸುರಕ್ಷಿತವಾಗಿ ಇಡಲಾಯಿತು. ನಂತರ ಮಡಿಕೆಗಳನ್ನು ಹೊರತೆಗೆದು ಅಧ್ಯಯನಕ್ಕೆ ತೆಗೆದಿಡುವ ಕಾರ್ಯ ನಡೆಯಿತು. 

ಇದೇ ಪ್ರದೇಶದ ಮೂರನೇ ನೆಲೆಯಲ್ಲಿ ಚಿಕ್ಕ ಗಾತ್ರದ ಮಡಿಕೆ ಹೊರತೆಗೆದ ಬಳಿಕ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್.ಸುಗಂಧಿ ಅವರಿಗೆ ಅದರ ತಳಭಾಗದಲ್ಲಿ ಮಾನವನ ತಲೆಬುರುಡೆ ಗೋಚರಿಸಿತು.

ADVERTISEMENT

ಮತ್ತಷ್ಟು ಬಿಡಿಸಿದಾಗ ಬುರುಡೆಯ ತಳಭಾಗದಲ್ಲಿ ಮತ್ತೊಂದು ಮಡಿಕೆ ಇರುವುದು ಹಾಗೂ ಬುರಡೆಗೆ ಅಂಟಿಕೊಂಡು ಭುಜದ ಭಾಗಗಳು ಕಾಣಿಸಿತು. ಆದರೆ, ಉತ್ಖನನ ಮುಂದುವರಿಸದಿರಲು ತಂಡ ನಿರ್ಧರಿಸಿತು. 

ಇದರ ಕುರಿತು ಪ್ರತಿಕ್ರಿಯಿಸಿದ ನಮಿತಾ, ‘ಅಮೆರಿಕದಲ್ಲಿ ಸೆಮಿಸ್ಟರ್‌ಗಳು ಆರಂಭ ಆಗುತ್ತಿವೆ. ನಾನು ನಿರ್ಗಮಿಸಲೇಬೇಕು. ಅಸ್ಥಿ ಪಂಜರ ತೆಗೆಯದೇ ಹಾಗೆಯೇ ಮುಚ್ಚಲಾಗುವುದು. ಭವಿಷ್ಯದಲ್ಲಿ ಯಾರಾದರೂ ಉತ್ಖನನ ನಡೆಸಿದರೆ, ಅವರಿಗೆ ಸದ್ಯ ಸಿಕ್ಕಿರುವ ಈ ನೆಲೆ ಅನುಕೂಲಕಾರಿ ಆಗಲಿದೆ’ ಎಂದರು.

ಉತ್ಪನನ ತಂಡದಲ್ಲಿ ಮೊಹಾಲಿಯ ಐಐಎಸ್‌ಇಆರ್ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಪ್ರಾಂಜಲ್ ದುಬೆ, ಸಂಶೋಧನಾರ್ಥಿ ಅಶೋಕ ವಿ.ಅಬಕಾರಿ, ಮಧ್ಯಪ್ರದೇಶದ ಸಾಗರದ ಡಾ. ಹರಿಸಿಂಗ್ ವಿಶ್ವವಿದ್ಯಾಲಯದ ಕಾವ್ಯ, ಗುಜರಾತ್ ವಡೋದರಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಮಧುರಾ ಇದ್ದರು. 

‘ಬಳ್ಳಾರಿಯ ಹಳೇ ನೆಲೆಗಳ ರಕ್ಷಣೆ’ 

‘ಆಸ್ಥಿಪಂಜರಗಳನ್ನು ಕಾರ್ಬನ್ ಡೇಟಿಂಗ್‌ಗೆ ಕಳುಹಿಸಿ ನಿಖರ ಮಾಹಿತಿ ಪಡೆಯಲಾಗುವುದು’ ಎಂದು ಉತ್ಖನನ ಕಾರ್ಯದ ನಿರ್ದೇಶಕ ಹಾಗೂ ಹಂಪಿ ಕಮಲಾಪುರದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಆರ್. ಶೇಜೇಶ್ವರ ಹೇಳಿದ್ದಾರೆ. ‘ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದ್ದು ಮುಂದೆ ‘ಬೂದಿದಿಬ್ಬ’ ಸೇರಿ ಇಲ್ಲಿನ ಪ್ರಾಗೈತಿಹಾಸಿಕ ನೆಲೆಗಳನ್ನು ಸಂರಕ್ಷಿತ ಪ್ರದೇಶವಾಗಿ ಘೋಷಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.