ADVERTISEMENT

ಹಂಪಿ ಉತ್ಸವಕ್ಕೆ ಸಾವಿರ ಕಲಾವಿದರು!

ಹೊರರಾಜ್ಯದವರಿಗಿಲ್ಲ ಅವಕಾಶ; ಸ್ಥಳೀಯರಿಗೆ ಸಿಂಹಪಾಲು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಫೆಬ್ರುವರಿ 2019, 17:30 IST
Last Updated 25 ಫೆಬ್ರುವರಿ 2019, 17:30 IST
ಹಂಪಿಯ ತುಂಗಭದ್ರಾ ನದಿ ತಟದಲ್ಲಿ ಮಂಗಳವಾರ ಸಂಜೆ ತುಂಗಾ ಆರತಿ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿರುವುದು
ಹಂಪಿಯ ತುಂಗಭದ್ರಾ ನದಿ ತಟದಲ್ಲಿ ಮಂಗಳವಾರ ಸಂಜೆ ತುಂಗಾ ಆರತಿ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿರುವುದು   

ಹೊಸಪೇಟೆ: ಮಾ. 2 ಮತ್ತು 3ರಂದು ನಡೆಯಲಿರುವ ‘ಹಂಪಿ ಉತ್ಸವ’ಕ್ಕೆ ಸ್ಥಳೀಯರು ಸೇರಿದಂತೆ ರಾಜ್ಯದ ನಾನಾ ಭಾಗದ ಸಾವಿರಕ್ಕೂ ಹೆಚ್ಚು ಕಲಾವಿದರು ಮೆರಗು ತಂದುಕೊಡಲಿದ್ದಾರೆ.

ಬರದ ಕಾರಣಕ್ಕಾಗಿ ಎರಡು ದಿನ ಸರಳವಾಗಿ ಉತ್ಸವ ಆಚರಿಸುತ್ತಿರುವುದರಿಂದಈ ಸಲದ ಉತ್ಸವದಲ್ಲಿ ಹೊರರಾಜ್ಯ, ಹೊರದೇಶದ ಕಲಾವಿದರನ್ನು ಆಹ್ವಾನಿಸಿಲ್ಲ. ಐದು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಬಳ್ಳಾರಿ ಜಿಲ್ಲೆಯ ಕಲಾವಿದರಿಗೆ ಸಿಂಹಪಾಲು ಅವಕಾಶ ಸಿಕ್ಕಿದೆ.

ಉತ್ಸವದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಕೂಗು ಬಹಳ ವರ್ಷದಿಂದಲೂ ಇತ್ತು. ಅದಕ್ಕೆ ಜಿಲ್ಲಾ ಆಡಳಿತ ಈ ಸಲ ಸ್ಪಂದಿಸಿದೆ. ಉತ್ಸವಕ್ಕೆ ಹಣದ ಕೊರತೆ ಉಂಟಾಗಿರುವುದು ಕೂಡ ಅನ್ಯ ಭಾಗದ ಕಲಾವಿದರನ್ನು ಕರೆಸದೆ ಇರುವುದು ಇನ್ನೊಂದು ಕಾರಣ ಎಂದು ಹೇಳಲಾಗುತ್ತಿದೆ.

ADVERTISEMENT

‘ಈ ಸಲದ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಿರುವುದು ಒಳ್ಳೆಯ ಸಂಗತಿ. ಇದೊಂದೆ ಸಲ ಅಲ್ಲ. ಪ್ರತಿ ಉತ್ಸವದಲ್ಲಿ ಇದೇ ರೀತಿ ಆಗಬೇಕು. ಶೇ 75ರಷ್ಟು ಕಾರ್ಯಕ್ರಮಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು. ಇನ್ನುಳಿದವು ಹೊರರಾಜ್ಯ, ಹೊರದೇಶದವರಿಗೆ ಕೊಡಬಹುದು’ ಎಂದು ಗಾಯಕ ಮಾರುತಿ ಹೇಳಿದರು.

ಈ ಹಿಂದಿನಂತೆ ರೈತರಿಗಾಗಿ ವಿಚಾರ ಸಂಕಿರಣ, ಮಕ್ಕಳ ಉತ್ಸವ, ಕವಿಗೋಷ್ಠಿ ಹಾಗೂ ವಸ್ತು ಪ್ರದರ್ಶನ ಕೂಡ ಆಯೋಜಿಸಲಾಗಿದೆ.

ಕ್ರೀಡೆಗಳಿಗೆ ಬಿಸಿಲಿನ ಆತಂಕ:

ಉತ್ಸವದ ಪ್ರಯುಕ್ತ ಬೆಳಿಗ್ಗೆ ಒಂಬತ್ತರಿಂದ ಸಂಜೆ ಆರರ ವರೆಗೆ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಬಡ್ಡಿ, ವಾಲಿಬಾಲ್‌, ಕಲ್ಲೆತ್ತುವುದು, ತೂಕು ಎತ್ತುವುದು, ಕುಸ್ತಿ ಸ್ಪರ್ಧೆ ಸೇರಿವೆ.

ಆದರೆ, ಬೆಳಿಗ್ಗೆ ಏಳರಿಂದ ಸಂಜೆ ಆರರ ವರೆಗೆ ಮೈಸುಡುವ ಬಿಸಿಲು ಇರುತ್ತಿದ್ದು, ಇದು ಕ್ರೀಡಾಕೂಟದ ಮೇಲೆ ಪರಿಣಾಮ ಬೀರುವ ಆತಂಕ ಜಿಲ್ಲಾ ಆಡಳಿತವನ್ನು ಕಾಡುತ್ತಿದೆ.

ಎರಡು ವಾರಗಳಿಂದ ಸೂರ್ಯ ಕೆಂಡ ಕಾರುತ್ತಿದ್ದಾನೆ. ಹೊರಗೆ ಜನ ಓಡಾಡುವುದು ವಿರಳವಾಗಿದೆ. ಇಂತಹದ್ದರಲ್ಲಿ ಜನ ಕ್ರೀಡಾಕೂಟಗಳ ವೀಕ್ಷಣೆಗೆ ಬರುತ್ತಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

’ನವೆಂಬರ್‌ನಲ್ಲಿಯೇ ಉತ್ಸವದ ನಿಮಿತ್ತ ಕ್ರೀಡಾಕೂಟ ಹಮ್ಮಿಕೊಂಡಿದ್ದಾಗ ಕಡಿಮೆ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಇಂತಹ ನಿಗಿನಿಗಿ ಬಿಸಿಲಿನಲ್ಲಿ ಜನ ಸೇರುವುದು ಅನುಮಾನ. ಸೇರಿದರೂ ಬಹಳ ಕಡಿಮೆ ಸಂಖ್ಯೆಯಲ್ಲಿ ಸೇರಬಹುದು’ ಎನ್ನುತ್ತಾರೆ ಕುಸ್ತಿ ಪಟು ರಾಜು.

‘ಸಂಜೆ ಆರರಿಂದ ರಾತ್ರಿ ಹತ್ತರ ವರೆಗೆ ಕ್ರೀಡೆಗಳನ್ನು ಹಮ್ಮಿಕೊಳ್ಳಬಹುದಿತ್ತು. ಹೊನಲು ಬೆಳಕಿನಲ್ಲಿ ಜನ ಖುಷಿಯಿಂದ ನೋಡುತ್ತಿದ್ದರು’ ಎಂದು ಹೇಳಿದರು.

ಸುಳಿಯದ ಸಚಿವರು:

ಉತ್ಸವಕ್ಕೆ ಐದು ದಿನಗಳಷ್ಟೇ ಉಳಿದಿವೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ, ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರಾದ ಈ. ತುಕಾರಾಂ, ಪಿ.ಟಿ. ಪರಮೇಶ್ವರ ನಾಯ್ಕ ಒಮ್ಮೆಯೂ ಹಂಪಿ ಕಡೆ ಸುಳಿದಿಲ್ಲ.

ಶಿವಕುಮಾರ ಒಮ್ಮೆಯೂ ಹಂಪಿಗೆ ಬಂದು ಸಿದ್ಧತೆ ಪರಿಶೀಲನೆ ನಡೆಸಿಲ್ಲ. ಎಲ್ಲ ಮಾಹಿತಿಯನ್ನು ದೂರವಾಣಿಯಲ್ಲೇ ಪಡೆದುಕೊಳ್ಳುತ್ತಿದ್ದಾರೆ. ಇನ್ನು ತುಕಾರಾಂ, ಪರಮೇಶ್ವರ ನಾಯ್ಕ ಅದರ ಬಗ್ಗೆ ಆಸಕ್ತಿ ತೋರಿಸಿಲ್ಲ. ಸಚಿವರಾದ ನಂತರ ಇಬ್ಬರು ಒಮ್ಮೆಯೂ ಇಡೀ ಜಿಲ್ಲೆ ಸುತ್ತಿಲ್ಲ. ಬರದಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೂ ಭೇಟಿ ನೀಡಿಲ್ಲ.

ಇನ್ನು ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಕೂಡ ಈ ಕಡೆ ಸುಳಿದಿಲ್ಲ. ಎಲ್ಲವೂ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಒಬ್ಬರೇ ನೋಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.