ADVERTISEMENT

‘ಸಂಗಂ’ ವಿಶ್ವ ಕವಿ ಸಮ್ಮೇಳನಕ್ಕೆಸತತ ಮೂರು ತಿಂಗಳು ಕೆಲಸ: ಕವಿ ಆರಿಫ್‌ ರಾಜಾ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 22 ಅಕ್ಟೋಬರ್ 2022, 8:29 IST
Last Updated 22 ಅಕ್ಟೋಬರ್ 2022, 8:29 IST
ಆರಿಫ್‌ ರಾಜಾ
ಆರಿಫ್‌ ರಾಜಾ   

ಬಳ್ಳಾರಿ (ಡಾ. ಜೋಳದರಾಶಿ ದೊಡ್ಡನಗೌಡರ ವೇದಿಕೆ): ‘ಸಂಗಂ’ ವಿಶ್ವ ಕವಿ ಸಮ್ಮೇಳನದಲ್ಲಿ ಯಾವ್ಯಾವ ಕವಿಗಳನ್ನು ಆಯ್ಕೆ ಮಾಡಬೇಕು. ಅವರ ಯಾವ ಕವನಗಳನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಸತತ ಮೂರು ತಿಂಗಳು ಕೆಲಸ ಮಾಡಿದ್ದೇವೆ. ಅದರ ಪ್ರತಿಫಲದಿಂದ ಈ ಸಮ್ಮೇಳನದಲ್ಲಿ ಒಂದಕ್ಕಿಂತ ಒಂದು ಉತ್ಕೃಷ್ಟವಾದ ಕವನಗಳನ್ನು ಕೇಳುತ್ತಿದ್ದೇವೆ’

ನಗರದ ಬಿಐಟಿಎಂ ಕಾಲೇಜಿನಲ್ಲಿ ವಿಶ್ವಕವಿ ಸಮ್ಮೇಳನ ಆಯೋಜಿಸಿರುವ ಬಳ್ಳಾರಿಯ ‘ಅರಿವು’ ಹಾಗೂ ‘ಸಂಗಂ’ ತಂಡದ ಸಂಚಾಲಕರಲ್ಲಿ ಒಬ್ಬರಾಗಿರುವ ಕವಿ ಆರಿಫ್‌ ರಾಜಾ ಅವರು ಮಾತುಗಳಿವು.

ಆರಂಭದಲ್ಲಿ ಕವಿಗಳು, ಅವರ ಕವನಗಳ ಆಯ್ಕೆಗೆ ಮಹಾರಾಷ್ಟ್ರದ ಅಹಮ್ಮದ್‌ ನಗರದ ಪದವಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ. ಕಮಲಾಕರ ಭಟ್‌ ನೇತೃತ್ವದಲ್ಲಿ ಅನುವಾದಕರ ಸಮಿತಿ ರಚಿಸಲಾಯಿತು. ಅನುವಾದದ ಗುಣಮಟ್ಟ ಪರಿಶೀಲನೆಗೆ ಲೇಖಕರಾದ ಎಚ್‌.ಎಸ್‌. ಶಿವಪ್ರಕಾಶ್‌, ಕೇಶವ ಮಾಳಗಿ, ರವಿಚಂದ್ರನ್‌ ಚಿತ್ರಂಪಳ್ಳಿ, ಮನು ವಿ. ದೇವದಾಸನ್‌, ಜಯಶ್ರೀನಿವಾಸ್‌ ನೇತೃತ್ವದ ಪರಿಶೀಲನಾ ಸಮಿತಿ ಮಾಡಲಾಯಿತು. ಕವನಗಳ ಅನುವಾದಕ್ಕಾಗಿಯೇ 27 ಜನ ಕೆಲಸ ಮಾಡಿದ್ದಾರೆ. ‘ದಿ ಬೆಸ್ಟ್‌’ ಕೊಡಲು ಪ್ರತಿಯೊಬ್ಬ ಕವಿಯಿಂದ 10ರಿಂದ 15 ಕವನಗಳನ್ನು ತರಿಸಿಕೊಂಡೆವು. ಅದರಲ್ಲಿ 3ರಿಂದ 4 ಕವನಗಳನ್ನು ಆಯ್ಕೆ ಮಾಡಲಾಯಿತು.

ADVERTISEMENT

ಕನ್ನಡ ಭಾಷೆಯ 31 ಕವಿಗಳ ಕವಿತೆಗಳಲ್ಲಿ ಬಹುತೇಕವು ಇಂಗ್ಲಿಷ್‌ಗೆ ತರ್ಜುಮೆಯಾಗಿದ್ದವು. ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಕಾರ್ಯವನ್ನು ವಿಜಯ ರಾಘವನ್‌, ಕಮಲಾಕರ ಭಟ್‌, ನವೀನ್‌ ಹಳ್ಳಿಮನಿ, ಜಯಶ್ರೀನಿವಾಸ ಮಾಡಿದರು. ಇತರೆ ಭಾಷೆಯ ಕವನಗಳನ್ನು ಎಚ್‌.ಎಸ್‌. ಶಿವಪ್ರಕಾಶ್‌ಮತ್ತು ಅವರ ತಂಡ ಮಾಡಿತು. ವೇದಿಕೆಯ ಪರದೆ ಮೇಲೆ ಪಿಪಿಟಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಕವನಗಳನ್ನು ತೋರಿಸಲು ನಿರ್ಧರಿಸಿ ಆಯಾ ಕವಿಗಳು ಕವನ ವಾಚನ ಮಾಡುತ್ತಿದ್ದಾಗ ಅವರ ಕವನಗಳನ್ನು ಬೇರೆ ಭಾಷೆಗಳಲ್ಲಿ ತೋರಿಸಲಾಯಿತು. ಅದರಂತೆಯೇ ಸಮ್ಮೇಳನದಲ್ಲಿ ಮಾಡಿದೆವು. ಅದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕವಿತೆ ಅಂದರೆ ಲಯ, ಸಂಸ್ಕೃತಿ, ಭಾಷೆಯ ಸೊಗಡು. ಮೂಲ ಭಾಷೆಯಲ್ಲಿ ಎಲ್ಲ ಕವಿಗಳು ಅವರ ಕವನಗಳನ್ನು ಓದಬೇಕು. ಮತ್ತೆ ಪುನಃ ಅವುಗಳನ್ನು ಕನ್ನಡದಲ್ಲಿ ಓದಿಸಲಾಗುತ್ತಿದೆ. ಒಟ್ಟಾರೆ ಎಲ್ಲ ಭಾಷೆಯವರಿಗೆ ಗೊತ್ತಾಗಬೇಕು ಎನ್ನುವುದು ಅದರ ಉದ್ದೇಶ. ಒಟ್ಟು 70 ಜನ ಕವಿಗಳು ಪಾಲ್ಗೊಂಡಿದ್ದು, ಎಲ್ಲರೂ ಸಂಭ್ರಮದಿಂದ ಅವರ ಕವನ ವಾಚನ ಮಾಡುತ್ತಿದ್ದಾರೆ.

‘ಸಂಗಂ’ ಸಮ್ಮೇಳನದಲ್ಲಿ ವಾಚಿಸಿದ ಕವನಗಳನ್ನು ಒಳಗೊಂಡ ಪ್ರಾತಿನಿಧಿಕ ಕವನ ಸಂಕಲನ ಹೊರತರಲು ನಿರ್ಧರಿಸಲಾಗಿದ್ದು, ಸಮ್ಮೇಳನದಲ್ಲಿ ಬಿಡುಗಡೆ ಕಾಣಲಿದೆ. ನಾನು, ಡಾ. ಕಮಲಾಕರ ಭಟ್‌, ಡಾ. ಕೆ. ಶಿವಲಿಂಗಪ್ಪ ಹಂದಿಹಾಳ್‌ ಅವರನ್ನು ಒಳಗೊಂಡ ಸಂಪಾದಕ ಮಂಡಳಿ ರಚಿಸಲಾಗಿತ್ತು. ಮಂಡ್ಯದ ರಾಜೇಂದ್ರ ಪ್ರಸಾದ್‌ ಅವರ ‘ಸಂಕಥನ’ ಪ್ರಕಾಶನದಿಂದ ಕವನ ಸಂಕಲನ ಪ್ರಕಟಿಸಲಾಗಿದೆ. ಸಮ್ಮೇಳನದ ನಂತರ ಕನ್ನಡ ಆವೃತ್ತಿಯಲ್ಲೂ ಹೊರತರಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.