ತೋರಣಗಲ್ಲು: ಹೋಬಳಿಯ ತಾಳೂರು ಗ್ರಾಮದ ರೈತ ಗಡ್ಡೆ ಬಸವರಾಜ್ ಅವರು ತಮ್ಮ ಜಮೀನಿನಲ್ಲಿ ಥೈವಾನ್‍ಪಿಂಕ್ ಪೇರಲ ಹಣ್ಣಿನ ಬೆಳೆಯನ್ನು ಸಾವಯುವ ಕೃಷಿ ಪದ್ಧತಿ ಮೂಲಕ ಬೆಳೆದು, ಅಧಿಕ ಇಳುವರಿ ಪಡೆಯುವ ಮೂಲಕ ಯುವ ರೈತರಿಗೆ ಮಾದರಿಯಾಗಿದ್ದಾರೆ.
ಐಟಿಐ ಶಿಕ್ಷಣ ಪಡೆದ ಅವರು, ಜಿಂದಾಲ್ ಕಾರ್ಖಾನೆಯ ಕೆಲಸಬಿಟ್ಟು ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. ಮೊದಲು ಜೋಳ, ಮೆಕ್ಕೆಜೋಳ, ಭತ್ತ, ವೀಳ್ಯದೆಲೆ, ಈರುಳ್ಳಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರು. ನಷ್ಟ ಹೆಚ್ಚಿದ್ದರಿಂದ ಪೇರಲ ಬೆಳೆಯಲು ಮುಂದಾದರು.
ಮೂರು ಎಕರೆಯಲ್ಲಿ ಒಂದು ಸಾವಿರ ಪೇರಲೆ ಸಸಿಗಳಿಂದ ಭರಪೂರ ಇಳುವರಿ ಬಂದಿದೆ. ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ಬೇಸಾಯ ಕೈಗೊಂಡಿದ್ದರ ಫಲವಾಗಿ ಉತ್ಕೃಷ್ಟ ಗುಣಮಟ್ಟದ, ಹೆಚ್ಚು ತೂಕದ ಹಣ್ಣುಗಳು ಇವರ ಜಮೀನನಲ್ಲಿ ಕಾಣಸಿಗುತ್ತವೆ.
‘ರಾಯಚೂರಿನ ಖಾಸಗಿ ಫೌರಂಹೌಸ್‌ನಿಂದ ಒಟ್ಟು ₹50 ಸಾವಿರಕ್ಕೆ ಒಂದು ಸಾವಿರ ಸಸಿಗಳನ್ನು ತಂದು, ಗಿಡದಿಂದ ಗಿಡಕ್ಕೆ ಏಳು ಅಡಿ ಅಂತರ, ಸಾಲಿನಿಂದ ಸಾಲಿಗೆ ಎಂಟು ಅಡಿ ಅಂತರದಲ್ಲಿ ನೆಡಲಾಯಿತು. ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ನಾಟಿ ಮಾಡಿದೆ. ರಾಸಾಯನಿಕ ಗೊಬ್ಬರ, ಔಷಧ ಬಳಕೆ ಮಾಡದೇ ಕೇವಲ ಕೊಟ್ಟಿಗೆ ಗೊಬ್ಬರವನ್ನು ಸಕಾಲಕ್ಕೆ ಬಳಕೆ ಮಾಡುತ್ತೇನೆ. ಜೀವಾಮೃತ ತಯಾರಿಸಿ, ಬೆಳೆಗಳಿಗೆ ಸಿಂಪಡಣೆ ಮಾಡಿದ್ದರಿಂದ ರೋಗ ಬಾಧೆ ಇಲ್ಲವಾಗಿದೆ. ಪ್ರತಿ ಹಣ್ಣು ಸುಮಾರು 500 ಗ್ರಾಂ ತೂಕವಿದೆ’ ಎನ್ನುತ್ತಾರೆ ಬಸವರಾಜ್.
‘ಪೇರಲೆ ಹಣ್ಣುಗಳನ್ನು ವಾರಕ್ಕೆ ಒಂದು ಬಾರಿ ಮಾತ್ರ ಕಟಾವು ಮಾಡಲಾಗುತ್ತದೆ. ಈಗಾಗಲೇ ಮೂರು ಟನ್‍ಗೂ ಅಧಿಕ ಹಣ್ಣುಗಳನ್ನು ಕಟಾವು ಮಾಡಿ ಬಳ್ಳಾರಿ, ಸಂಡೂರು, ತೋರಣಗಲ್ಲು ಸೇರಿದಂತೆ ಸ್ಥಳೀಯ ವ್ಯಾಪಾರಿಗಳಿಗೂ ಮಾರಾಟ ಮಾಡುತ್ತೇನೆ’ ಎಂದರು.
‘ಜಮೀನಿನಲ್ಲಿ ಎರಡು ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಕೃಷಿ ಇಲಾಖೆಯ ನೆರವಿನಿಂದ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ. ಪ್ರಾಣಿ, ಪಕ್ಷಿ, ಕೀಟಗಳ ತಡೆಗೆ ₹1 ಲಕ್ಷ ವೆಚ್ಚದಲ್ಲಿ ಪ್ಲಾಸ್ಟಿಕ್ ವೈಯರ್‌ನ ಬಲೆಯನ್ನು ಗಿಡಗಳ ಮೇಲ್ಭಾಗದಲ್ಲಿ ಹಾಕಲಾಗಿದೆ. ಕಳೆ ಬಾರದಂತೆ ಮಲಚಿಂಗ್ ಪೇಪರ್ ಅನ್ನು ಗಿಡಗಳ ತಳಭಾಗದಲ್ಲಿ ಹಾಕಿದ್ದೇನೆ’ ಎಂದು ವಿವರಿಸಿದರು.
***
ಪೇರಲ ಹಣ್ಣಿನ ಬೆಳೆ ಉತ್ತಮವಾಗಿ ದೊರೆತದ್ದರಿಂದ 4 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿದ್ದೇನೆ
–ಗಡ್ಡೆಬಸವರಾಜ್ ರೈತ
***
‘ಇಲಾಖೆಯಿಂದ ಮಾರ್ಗದರ್ಶನ’
‘ತಾಳೂರು ಗ್ರಾಮದ ರೈತ ಬಸವರಾಜ್ ಅವರಿಗೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸೂಕ್ತ ಮಾರ್ಗದರ್ಶನ ಸಲಹೆ–ಸೂಚನೆಗಳನ್ನು ನೀಡಲಾಗಿದೆ. ಅನೇಕ ಬಾರಿ ಹಣ್ಣಿನ ತೋಟಕ್ಕೆ ಭೇಟಿ ನೀಡಲಾಗಿದೆ. ಅವರ ಕಠಿಣ ಪರಿಶ್ರಮದಿಂದ ಪೇರಲ ಹಣ್ಣಿನ ಬೆಳೆ ಉತ್ತಮವಾಗಿ ಬೆಳೆದಿದೆ’ ಎಂದು ಸಂಡೂರಿನ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಹನುಪ್ಪನಾಯಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.