ADVERTISEMENT

ಜಿಲ್ಲಾಡಳಿತ ಭವನ ನಿರ್ಮಾಣ ದಾರಿ ಸುಗಮ

ನಿವೇಶನಕ್ಕಾಗಿ ಹೌಸಿಂಗ್‌ ಬೋರ್ಡ್‌ಗೆ ಸಲ್ಲಿಸಿದ ತಕರಾರು ಅರ್ಜಿ ವಜಾ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಏಪ್ರಿಲ್ 2022, 7:42 IST
Last Updated 24 ಏಪ್ರಿಲ್ 2022, 7:42 IST

ಹೊಸಪೇಟೆ (ವಿಜಯನಗರ): ನಗರದ ತುಂಗಭದ್ರಾ ಸ್ಟೀಲ್‌ ಪ್ರಾಡಕ್ಟ್ಸ್‌ಗೆ (ಟಿಎಸ್‌ಪಿ) ಸೇರಿದ ಜಾಗದಲ್ಲಿ ಉದ್ದೇಶಿತ ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ದಾರಿ ಸುಗಮಗೊಂಡಿದೆ.

ಜಿಲ್ಲಾಡಳಿತ ಭವನ ನಿರ್ಮಾಣಕ್ಕೂ ಮುನ್ನ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ನಿವೇಶನ ಒದಗಿಸಿಕೊಡಬೇಕೆಂದು 69 ಜನ ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠದ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಶುಕ್ರವಾರ ಅವರ ಅರ್ಜಿಯನ್ನು ವಜಾಗೊಳಿಸಿದೆ.

ಕೇಂದ್ರ ಸರ್ಕಾರವು ಟಿ.ಎಸ್‌.ಪಿ ಮುಚ್ಚಿದ ನಂತರ, 2017ರಲ್ಲಿ ಅದಕ್ಕೆ ಸೇರಿದ 82.37 ಎಕರೆ ಜಾಗವನ್ನು ₹55.22 ಕೋಟಿಗೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ ಪರಭಾರೆ ಮಾಡಿತ್ತು. ಅಲ್ಲಿ ಮಂಡಳಿಯು ಲೇಔಟ್‌ ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲು ತೀರ್ಮಾನಿಸಿತ್ತು. 974 ಜನ ನಿವೇಶನಕ್ಕಾಗಿ ಮುಂಗಡವಾಗಿ ಠೇವಣಿ ಭರಿಸಿ, ಅರ್ಜಿ ಸಲ್ಲಿಸಿದ್ದರು.

ADVERTISEMENT

ಆದರೆ, ವಿಜಯನಗರ ಜಿಲ್ಲೆ ಘೋಷಣೆಯಾದ ನಂತರ ಸರ್ಕಾರವು ಆ ಜಾಗವನ್ನು ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ನೀಡಿತ್ತು. ಬಳಿಕ ಹೌಸಿಂಗ್‌ ಬೋರ್ಡ್‌, ಅರ್ಜಿದಾರರ ಠೇವಣಿ ಹಿಂತಿರುಗಿಸುವುದಾಗಿ ತಿಳಿಸಿತ್ತು. ಆದರೆ, ಈ ಪೈಕಿ 69 ಜನ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಕೋರ್ಟ್‌ ಆದೇಶದಿಂದ ಅವರಿಗೆ ಹಿನ್ನಡೆಯಾಗಿದೆ.

ನೂತನ ಜಿಲ್ಲಾಡಳಿತ ಭವನ ನಿರ್ಮಾಣವಾಗುವವರೆಗೆ ಟಿಎಸ್‌ಪಿ ಹಳೆಯ ಕಟ್ಟಡದಲ್ಲಿ ತಾತ್ಕಲಿಕವಾಗಿ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಕೆಲ ಕಚೇರಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಕಟ್ಟಡ ನವೀಕರಣ ಕಾರ್ಯ ಭರದಿಂದ ನಡೆದಿದೆ. ಇನ್ನಷ್ಟೇ ಜಿಲ್ಲಾಡಳಿತ ಭವನಕ್ಕೆ ನೀಲನಕಾಶೆ ಸಿದ್ಧಗೊಳ್ಳಬೇಕಿದೆ.

‘ಶುಕ್ರವಾರ ಕೋರ್ಟ್‌ನಿಂದ ಆದೇಶ ಹೊರಬರಬೇಕಿತ್ತು. ನಾನು ಬೆಂಗಳೂರಿನಲ್ಲಿದ್ದು, ನಮ್ಮ ವಕೀಲರಿಂದ ಇನ್ನಷ್ಟೇ ಮಾಹಿತಿ ಪಡೆಯಬೇಕಿದೆ’ ಎಂದು ಗೃಹ ನಿರ್ಮಾಣ ಮಂಡಳಿಯ ಎಂಜಿನಿಯರ್‌ ಶಿವಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಅರ್ಜಿದಾರರು ಮಾಹಿತಿಗೆ ಲಭ್ಯರಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.