ADVERTISEMENT

ಕಂಪ್ಲಿ | ತುಂಗಭದ್ರಾ ನೆರೆ: ಬೇಸಾಯ, ಮೀನುಗಾರಿಕೆಗೆ ಬರೆ

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 21 ಆಗಸ್ಟ್ 2025, 5:09 IST
Last Updated 21 ಆಗಸ್ಟ್ 2025, 5:09 IST
ಕಂಪ್ಲಿ ತಾಲ್ಲೂಕು ನಂ.1 ಇಟಗಿ ಗ್ರಾಮ ಬಳಿಯ ಶಂಕರಾಚಾರಿ ಮಡುವು ಬಳಿಯ ಕೊಠಡಿಯೊಳಗೆ ಪಂಪ್‍ಸೆಟ್‍ಗಳು ತುಂಗಭದ್ರಾ ನದಿ ಪ್ರವಾಹದಿಂದ ಜಲಾವೃತವಾಗಿರುವ ದೃಶ್ಯ
ಕಂಪ್ಲಿ ತಾಲ್ಲೂಕು ನಂ.1 ಇಟಗಿ ಗ್ರಾಮ ಬಳಿಯ ಶಂಕರಾಚಾರಿ ಮಡುವು ಬಳಿಯ ಕೊಠಡಿಯೊಳಗೆ ಪಂಪ್‍ಸೆಟ್‍ಗಳು ತುಂಗಭದ್ರಾ ನದಿ ಪ್ರವಾಹದಿಂದ ಜಲಾವೃತವಾಗಿರುವ ದೃಶ್ಯ   

ಕಂಪ್ಲಿ: ತುಂಗಭದ್ರಾ ನದಿ ಪ್ರವಾಹದಿಂದ ಕೃಷಿಕರು ಮತ್ತು ಮೀನುಗಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

ಕಳೆದ ತಿಂಗಳ ಪ್ರವಾಹದಿಂದ 10 ದಿನ ತೊಂದರೆ ಆಗುರುವುದನ್ನು ಮರೆಯುವ ಮುನ್ನವೇ ಮತ್ತೆ ಮೂರು ದಿನದಿಂದ ನದಿ ಮೈದುಂಬಿ ಹರಿಯುತ್ತಿದೆ. ಅದರಿಂದ ತಾಲ್ಲೂಕು ಆಡಳಿತ ನದಿಯಲ್ಲಿ ಮೀನು ಬೇಟೆ ನಿಷೇಧಿಸಿದೆ. ಈ ಕಾರಣದಿಂದ ಕಂಪ್ಲಿ ಕೋಟೆ ಪ್ರದೇಶದ 60ಕ್ಕು ಹೆಚ್ಚು ಮೀನುಗಾರ ಕುಟುಂಬಗಳು ನದಿಯಲ್ಲಿ ಮೀನು ಬೇಟೆ ಇಲ್ಲದೇ ಕೈಚೆಲ್ಲಿ ಕುಳಿತಿದ್ದಾರೆ. ಅದೇ ರೀತಿ ನದಿ ಪಾತ್ರದ ರೈತರು ತಮ್ಮ ಪಂಪ್‍ಸೆಟ್‍ಗಳನ್ನು ಕೊಠಡಿಯಿಂದ ಎರಡನೇ ಬಾರಿ ದಂಡೆಗೆ ಸ್ಥಳಾಂತರಿಸಿದ್ದಾರೆ.

‘ಮೀನು ಬೇಟೆಯಿಂದ ಹೊಟ್ಟೆ ಹೊರೆಯುವ ನಾವು ಪ್ರವಾಹ ಬಂದಾಗಲೆಲ್ಲ ಕಠಿಣ ಪರಿಸ್ಥಿತಿ ಎದುರಿಸುವಂತಾಗಿದೆ. ಈ ಸಂದರ್ಭದಲ್ಲಿ ದೈನಂದಿನ ಜೀವನಕ್ಕೆ ಆಪತ್ತು ಎದುರಾದರೆ ಸ್ವಸಹಾಯ ಸಂಘದಲ್ಲಿ ಪಡೆದ ಸಾಲ ಪಾವತಿಗೂ ಪೆಟ್ಟಾಗುತ್ತದೆ’ ಎಂದು ಮೀನುಗಾರ ಕುಟುಂಬದ ಮಹಿಳೆಯರು ಅಳಲು ವ್ಯಕ್ತಪಡಿಸಿದರು.

ADVERTISEMENT

ಕಂಪ್ಲಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಎಂ. ರಾಜಶೇಖರ್ ಮಾತನಾಡಿ, ‘ಮೇಲಿಂದ ಮೇಲೆ ನದಿ ನೆರೆ ಎದುರಾಗಿರುವುದರಿಂದ ಮೀನುಗಾರ ಕುಟುಂಬಗಳ ಬದುಕು ದುಸ್ತರ ಸಾಮಾನ್ಯ. ಇಂಥ ಸಂದರ್ಭದಲ್ಲಿ ಸರ್ಕಾರ ಪ್ರವಾಹ ಇಳಿಮುಖವಾಗುವವರೆಗೆ ಕನಿಷ್ಠ ದಿನಸಿ ಕಿಟ್ ವ್ಯವಸ್ಥೆ ಮಾಡುವಂತೆ’ ಆಗ್ರಹಿಸಿದರು.

‘ಒಂದು ವೇಳೆ ಕಾಳಜಿ ಕೇಂದ್ರ ತೆರೆಯುವುದಾದರೆ ಮೀನುಗಾರರ ಕಾಲೊನಿಯಲ್ಲಿಯೇ ವ್ಯವಸ್ಥೆ ಮಾಡವಂತೆಯೂ’ ಮನವಿ ಮಾಡಿದರು.

‘ನದಿಯಲ್ಲಿ ಮೀನುಗಾರಿಕೆ ಸದ್ಯ ನಿಷೇಧಿಸಿರುವುದರಿಂದ ತಾಲ್ಲೂಕಿನ ವಿವಿಧೆಡೆ ಇರುವ ಖಾಸಗಿ ಕೆರೆಗಳಿಂದ ಮೀನು ಖರೀದಿಸಿ ಕೆಲವರು ತಾತ್ಕಾಲಿಕ ವ್ಯಾಪಾರ ಮಾಡಿ ಹೊಟ್ಟೆ ಹೊರೆಯುತ್ತಿದ್ದಾರೆ’ ಎಂದರು.

ಪಂಪ್‍ಸೆಟ್ ರೈತರ ಸಂಕಷ್ಟ: ತಾಲ್ಲೂಕಿನ ನಂ.1 ಇಟಗಿ ಗ್ರಾಮ ಬಳಿಯ ಶಂಕರಾಚಾರಿ ಮಡುವು ಬಳಿಯ ಪಂಪ್‍ಸೆಟ್ ಕೊಠಡಿಗಳು, ಕೆಲ ಪಂಪ್‍ಸೆಟ್‍ಗಳು ನದಿ ಪ್ರವಾಹದಿಂದ ಮುಳುಗಿವೆ. ಕೆಲ ರೈತರು ಮಾತ್ರ ಮುಂಜಾಗ್ರತೆಯಾಗಿ ಪಂಪ್‍ಸೆಟ್‍ಗಳನ್ನು ಸ್ಥಳಾಂತರಿಸಿದ್ದಾರೆ.

ಶಂಕರಾಚಾರಿ ಮಡುವು ಪ್ರದೇಶದಲ್ಲಿ ಸುಮಾರು 350 ಪಂಪ್‍ಸೆಟ್‍ಗಳಿವೆ. ನದಿಗೆ ಪ್ರವಾಹ ಬಂದಾಗೆಲ್ಲ ಪಂಪ್‍ಸೆಟ್ ಸ್ಥಳಾಂತರಿಸಲು ಮೆಕಾನಿಕ್‍ಗೆ ₹300, ಪ್ರವಾಹ ಇಳಿಮುಖವಾದ ಬಳಿಕ ಮತ್ತೆ ಜೋಡಿಸಲು ₹300 ಭರಿಸಬೇಕು. ಒಂದು ವೇಳೆ ಪಂಪ್‍ಸೆಟ್ ಪ್ರವಾಹಕ್ಕೆ ಸಿಲುಕಿ ಹಾಳಾದಲ್ಲಿ ದುರಸ್ತಿ ಮಾಡಿ ಜೋಡಿಸಲು ₹900 ಹೊಂದಿಸಬೇಕಾಗುತ್ತದೆ ಎಂದು ನದಿ ಪಾತ್ರದ ರೈತರು ಬೇಸರದಿಂದ ತಿಳಿಸಿದರು.

‘ತಿಂಗಳಲ್ಲಿ ಎರಡು ಬಾರಿ ಈ ಸಮಸ್ಯೆ ಈಗಾಗಲೆ ಎದುರಾಗಿದ್ದು, ಕೃಷಿ ವೆಚ್ಚದ ಜೊತೆಗೆ ಪಂಪ್‍ಸೆಟ್ ಖರ್ಚು ನಿಭಾಯಿಸುವುದು ಹೊರೆಯಾಗಿದೆ’ ಎಂದು ಇಟಗಿ ಗ್ರಾಮ ರೈತ ಕುರುಬರ ವೀರೇಶ್ ಅಸಮಾಧಾನದಿಂದ ತಿಳಿಸಿದರು.

ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿ ಪ್ರವಾಹದಿಂದ ಮೀನು ಬೇಟೆ ನಿಷೇಧಿಸಿರುವುದರಿಂದ ಸದ್ಯ ತೆಪ್ಪಗಳಿಗೆ ಕೆಲಸವಿಲ್ಲದಂತಾಗಿದ್ದು ಮೀನುಗಾರರು ಅವುಗಳನ್ನು ಬೋರಲು ಹಾಕಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.