ADVERTISEMENT

ತುಂಗಭದ್ರಾ ನದಿ ಪಾತ್ರ: 8,000 ಹೆಕ್ಟೇರ್ ಹಿಂಗಾರು ಭತ್ತ ನಾಟಿಗೆ ಸಿದ್ಧತೆ ಜೋರು

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 10 ಡಿಸೆಂಬರ್ 2025, 5:27 IST
Last Updated 10 ಡಿಸೆಂಬರ್ 2025, 5:27 IST
ಕಂಪ್ಲಿ ತಾಲ್ಲೂಕು ತುಂಗಭದ್ರಾ ನದಿ ವ್ಯಾಪ್ತಿಯ ಸಣಾಪುರ ಗ್ರಾಮದ ಬಳಿ ಬೇಸಿಗೆ ಹಂಗಾಮಿಗಾಗಿ ಭತ್ತದ ಸಸಿ ಬೆಳೆಯಲಾಗಿದೆ
ಕಂಪ್ಲಿ ತಾಲ್ಲೂಕು ತುಂಗಭದ್ರಾ ನದಿ ವ್ಯಾಪ್ತಿಯ ಸಣಾಪುರ ಗ್ರಾಮದ ಬಳಿ ಬೇಸಿಗೆ ಹಂಗಾಮಿಗಾಗಿ ಭತ್ತದ ಸಸಿ ಬೆಳೆಯಲಾಗಿದೆ   

ಕಂಪ್ಲಿ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‍ಗಳ ಅಳವಡಿಕೆ ಕಾಮಗಾರಿ ಆರಂಭವಾಗಿರುವುದರಿಂದ ಈ ಬಾರಿ ಹಿಂಗಾರು ಹಂಗಾಮು ಭತ್ತ ನಾಟಿ ಕಂಪ್ಲಿ ತಾಲ್ಲೂಕಿನ ಮಟ್ಟಿಗೆ ತುಂಗಭದ್ರಾ ನದಿ ಪಾತ್ರ, ವಿಜಯನಗರ ಕಾಲುವೆ, ಕೆರೆ, ಪಂಪ್‍ಸೆಟ್, ಏತ ನೀರಾವರಿಗೆ ಮಾತ್ರ ಸೀಮಿತವಾಗಿದೆ.

ಈಗಾಗಲೇ ಭತ್ತದ ಸಸಿ ಸಮೃದ್ಧವಾಗಿ ಬೆಳೆದಿದ್ದು, ಭತ್ತ ನಾಟಿ ಪೂರ್ವ ಸಿದ್ಧತೆ ನದಿ ಪರಧಿಯ ಗದ್ದೆಗಳಲ್ಲಿ ಶುರುವಾಗಿದೆ. 90ರಿಂದ 100ದಿನದಲ್ಲಿ ಕೈಗೆಟಕುವ ಗಂಗಾ ಕಾವೇರಿ, ಆರ್.ಎನ್.ಆರ್, 1638, ಎಂ.ಎಸ್-2 ತಳಿ ಭತ್ತವನ್ನು ಬೆಳೆಯಲು ರೈತರು ಮುಂದಾಗಿದ್ದಾರೆ.

ಕಳೆದ ಮುಂಗಾರು ಕೊನೆ ಹಂತದಲ್ಲಿ ಹವಾಮಾನ ವೈಪರಿತ್ಯ, ದುಂಡಾಣು ರೋಗ ತಗುಲಿದ ಪರಿಣಾಮ ಸೋನಾ ಮಸೂರಿ, ಆರ್.ಎನ್.ಆರ್, ನೆಲ್ಲೂರು ಸೋನಾ, ಮತ್ತು 1010(ಐ.ಆರ್-64) ತಳಿ ಭತ್ತದ ಇಳುವರಿ ಕುಂಠಿತವಾಗಿ ನದಿ ವ್ಯಾಪ್ತಿಯ ರೈತರಲ್ಲಿ ನಿರಾಶೆ ಮೂಡಿಸಿತ್ತು. ಬೇಸಿಗೆ ಹಂಗಾಮಿನಲ್ಲಿಯಾದರೂ ಉತ್ತಮ ದರ ದೊರೆಯಬಹುದು ಎನ್ನುವ ನಿರೀಕ್ಷೆಯಲ್ಲಿ ಬೇಸಿಗೆ ಭತ್ತ ನಾಟಿಗೆ ಉತ್ಸುಕರಾಗಿದ್ದಾರೆ.

ADVERTISEMENT
ಮಣ್ಣು ರಕ್ಷಣೆಗೆ ಹಸಿರೆಲೆ ಗೊಬ್ಬರ ಬೆಳೆಯಲು ಸಲಹೆ
‘ತುಂಗಭದ್ರಾ ಬಲದಂಡೆ ಕೆಳಮಟ್ಟ ಕಾಲುವೆ ವ್ಯಾಪ್ತಿಯ ರೈತರಿಗೆ ಎರಡನೇ ಬೆಳೆಗೆ ನೀರು ಪೂರೈಕೆ ಇಲ್ಲದ ಕಾರಣ ಗದ್ದೆಯಲ್ಲಿ ಹಸಿರೆಲೆ ಗೊಬ್ಬರಗಳಾದ ಸೆಣಬು ಡಯಾಂಚ ಪಿಳ್ಳೆಪೆಸರು ಬೆಳೆದಲ್ಲಿ ಮಣ್ಣಿನ ಫಲವತ್ತತೆಗೆ ಅನುಕೂಲವಾಗಲಿದೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ. ಸೋಮಶೇಖರ್ ತಿಳಿಸಿದರು. ‘ಮಣ್ಣಿನ ಆರೋಗ್ಯ ಕಾಪಾಡಲು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಬೇಕಾಗಿದ್ದು ಪ್ರತಿಯೊಬ್ಬ ರೈತರು ಮುತುವರ್ಜಿ ವಹಿಸಬೇಕು. ಮಣ್ಣಿನಲ್ಲಿರುವ ಸೂಕ್ಷ್ಮ ಜೀವಕೋಶಗಳು ಹಾಳಾಗದಂತೆ ನೋಡಿಕೊಳ್ಳಬೇಕು. ತಾವು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನದಾಗಿ ಬಳಕೆ ಮಾಡುವ ರಾಸಾಯನಿಕ ಬಳಕೆ ಬದಲಾಗಿ ಸಾವಯವಗೊಬ್ಬರ ಉಪಯೋಗಿಸಬೇಕು. ಮಣ್ಣು ಸವಕಳಿಯಾಗದಂತೆ ಸಂರಕ್ಷಿಸುವ ಜವಾಬ್ದಾರಿ ಎಲ್ಲ ರೈತರ ಮೇಲಿದೆ’ ಎಂದರು.
‘6685 ಹೆಕ್ಟೇರ್‌ನಲ್ಲಿ 2ನೇ ಬೆಳೆ ಇಲ್ಲ’
ಕಂಪ್ಲಿ ತಾಲ್ಲೂಕು ವ್ಯಾಪ್ತಿಯ ತುಂಗಭದ್ರಾ ಬಲದಂಡೆ ಕೆಳಮಟ್ಟ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 6685 ಹೆಕ್ಟೇರ್‌ನಲ್ಲಿ ಎರಡನೇ ಬೆಳೆಯಾಗಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಜಲಾಶಯದ ಕ್ರೆಸ್ಟ್ ಗೇಟ್ ಕಾಮಗಾರಿ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ವಿರಾಮ ದೊರೆತಿದೆ. ಆದರೂ ಕೆಲವೇ ರೈತರು ಮಾತ್ರ ಗದ್ದೆಯಲ್ಲಿ ತೇವಾಂಶವಿರುವುದರಿಂದ ಕಡಲೆ ಬಿತ್ತನೆ ಮಾಡಿದ್ದಾರೆ. ಚಳಿ ಮತ್ತು ಇಬ್ಬನಿ ಬೀಳುವುದರಿಂದ ಈ ಬೆಳೆಗೆ ಹೆಚ್ಚಿನ ನೀರು ಅಗತ್ಯವಿಲ್ಲ ಎಂದು ರೈತರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.