ADVERTISEMENT

ತೆಕ್ಕಲಕೋಟೆ: ಸಾವಿರಾರು ಜನರ ನಿತ್ಯ ಸಂಚಾರಕ್ಕೆ 'ದೋಣಿ'ಯೇ ಗತಿ

ನಿಟ್ಟೂರು- ಸಿಂಗಾಪುರ ಸೇತುವೆ ನಿರ್ಮಾಣ ನೆನೆಗುದಿಗೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 4:44 IST
Last Updated 8 ಡಿಸೆಂಬರ್ 2025, 4:44 IST
<div class="paragraphs"><p>ತೆಕ್ಕಲಕೋಟೆ ಸಮೀಪದ ತುಂಗಭದ್ರಾ ನದಿ ತಟದ ನಿಟ್ಟೂರು- ಸಿಂಗಾಪುರ ಗ್ರಾಮಗಳ ಗ್ರಾಮಸ್ಥರು ದೋಣಿ ಮೂಲಕ ಸಂಚರಿಸುತ್ತಿರುವುದು</p></div>

ತೆಕ್ಕಲಕೋಟೆ ಸಮೀಪದ ತುಂಗಭದ್ರಾ ನದಿ ತಟದ ನಿಟ್ಟೂರು- ಸಿಂಗಾಪುರ ಗ್ರಾಮಗಳ ಗ್ರಾಮಸ್ಥರು ದೋಣಿ ಮೂಲಕ ಸಂಚರಿಸುತ್ತಿರುವುದು

   

ತೆಕ್ಕಲಕೋಟೆ: ನಿಟ್ಟೂರು ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ಕಾರ್ಯರೂಪಕ್ಕೆ ಬಾರದ ಹಿನ್ನೆಲೆ ಈ ಭಾಗದಲ್ಲಿ ನಿತ್ಯ ಸಂಚರಿಸುವ ಜನರಿಗೆ ಯಾಂತ್ರಿಕ ದೋಣಿಯೇ ಗತಿ ಎಂಬಂತಾಗಿದೆ.

ಸಿರುಗುಪ್ಪ ತಾಲ್ಲೂಕಿನ ನಿಟ್ಟೂರು ಹಾಗೂ ಸಿಂಧನೂರು ತಾಲ್ಲೂಕಿನ ಸಿಂಗಾಪುರ ಗ್ರಾಮಗಳ ಮಧ್ಯೆ ಏನಿಲ್ಲವೆಂದರೂ ನೂರಾರು ಬೈಕ್ ಹಾಗೂ ಸಾವಿರಾರು ಜನ ನಿತ್ಯ ಸಂಚರಿಸುತ್ತಾರೆ.
ಈ ಹಿಂದೆ ತೆಪ್ಪಗಳಲ್ಲಿ ಸಂಚರಿಸುತ್ತಿದ್ದ ಜನ ಈಗ ದೋಣಿಯಲ್ಲಿ ಸಂಚರಿಸುವಂತಾಗಿದೆ ಎಂಬ ಸಮಾಧಾನ ಮಾತ್ರ ಉಳಿದಿದೆ.

ADVERTISEMENT

’ಈಗಿನ ಯಾಂತ್ರಿಕ ದೋಣಿಯಲ್ಲಿ ಬೈಕ್‌ಗೆ ₹30 ಹಾಗೂ ಪ್ರಯಾಣಿಕರಿಗೆ ₹20 ನಿಗದಿ ಪಡಿಸಲಾಗಿದೆ. ದೋಣಿ ಒಂದು ಬಾರಿಗೆ ದಡದಿಂದ ಮತ್ತೊಂದು ದಡಕ್ಕೆ ಸಂಚರಿಸುವಾಗ 10 ರಿಂದ 12ಬೈಕ್ ಹಾಗೂ 40 ರಿಂದ 50 ಜನ ಪ್ರಯಾಣಿಕರು ಸಾಗುತ್ತಾರೆ. ದಿನಕ್ಕೆ ಕನಿಷ್ಟ 15 ರಿಂದ 20 ಬಾರಿ ಈ ಸಂಚಾರ ನಡೆದೇ ಇರುತ್ತದೆ. ಭಾನುವಾರ, ಗುರುವಾರ ಅಲ್ಲದೆ ಹಬ್ಬದ ವಿಶೇಷ ದಿನಗಳಂದು ಈ ಸಂಚಾರ ಇನ್ನೂ ಹೆಚ್ಚಾಗಿರುತ್ತದೆ’ ಎಂದು ದೋಣಿ ಚಾಲಕ ನಿಟ್ಟೂರು ಗ್ರಾಮಸ್ಥ ರಾಜ ಹೇಳುತ್ತಾರೆ.

ಕಳೆದ ಬಾರಿ ಬೆಂಗಳೂರು ಅಧಿವೇಶನದಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿ, 'ಸದರಿ ಸೇತುವೆ ನಿರ್ಮಾಣದಿಂದಾಗಿ ಸಿರುಗುಪ್ಪ ನಗರ ಹಾಗೂ ಗಂಗಾವತಿ ಮಧ್ಯೆ ಸುಮಾರು 50ಕಿ.ಮೀ. ದೂರದ ಪ್ರಯಾಣವು ಕಡಿಮೆಯಾಗುತ್ತದೆ.

ಈ ಯೋಜನೆಗೆ ರಾಜ್ಯ ಸರ್ಕಾರದಿಂದ ₹6.50 ಕೋಟಿ ಭೂಸ್ವಾಧೀನ ಮೊತ್ತ ರೇಖಾ ಅಂದಾಜು ಪಟ್ಟಿ ಸರ್ಕಾರದಲ್ಲಿ ಸ್ವೀಕೃತವಾಗಿದ್ದು, ಪರಿಶೀಲನೆಯಲ್ಲಿದೆ' ಎಂದು ಉತ್ತರಿಸಿದ್ದರು. ಆದರೆ ಈವರೆಗೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ.

ಈ ಸೇತುವೆ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿ ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಶಾಸಕ ಬಿ.ಎಂ.ನಾಗರಾಜ ಸರ್ಕಾರದ ಗಮನ ಸೆಳೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೊಪ್ಪಳ ಮಾಜಿ ಸಂಸದ ಕರಡಿ ಸಂಗಣ್ಣ ಹಾಗೂ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ 2018ರಲ್ಲಿ ನಿಟ್ಟೂರು-ಸಿಂಗಾಪುರ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ್ದರು. ಆರಂಭದಲ್ಲಿ ₹80 ಕೋಟಿಯಷ್ಟು ಇದ್ದ ಅಂದಾಜು ವೆಚ್ಚ ನಂತರ ₹120ಕೋಟಿಗೆ ಏರಿದ ಕಾಮಗಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಣ ಬಿಡುಗಡೆ ಆಗಿತ್ತಾದರೂ, ಭೂಸ್ವಾಧೀನ ಪ್ರಕ್ರಿಯೆಯಿಂದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. 2024 ಡಿಸೆಂಬರ್ ತಿಂಗಳಲ್ಲಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸಿಇಪಿಎಂಐಝೆಡ್ ಯೋಜನೆಯಡಿ ₹13.6೦ ಕೋಟಿ ಕಾಯ್ದಿರಿಸಿದೆ. ಆದರೆ ಈವರೆಗೆ ಭೂ ಸ್ವಾಧೀನ ಪ್ರಕ್ರಿಯೆಯಾಗಲಿ ಕಾಮಗಾರಿಯಾಗಲಿ ಆರಂಭಗೊಂಡಿಲ್ಲ.

ಸೇತುವೆ ನಿರ್ಮಿಸಿದಲ್ಲಿ ಕಾರಟಗಿಯಿಂದ ಸಿರುಗುಪ್ಪಗೆ ಸುಮಾರು 7೦ ಕಿಮೀಗಳ ಅಂತರ ಕಡಿಮೆ ಆಗಲಿದೆ. ಇದರಿಂದ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎನ್ನುವುದು ಈ ಭಾಗದ ಜನರ ಆಶಯವಾಗಿದೆ.

ಸೇತುವೆ ನಿರ್ಮಾಣದಿಂದ ಅನಗತ್ಯ ಸುತ್ತು ಬಳಸಿ ಸಂಚರಿಸುವುದು ತಪ್ಪುತ್ತದೆ, ಅಲ್ಲದೆ ನಿತ್ಯ ಸಂಚರಿಸುವವರಿಗೆ ಅನುಕೂಲವಾಗುತ್ತದೆ
ಅಲಂಭಾಷ ಗ್ರಾಮಸ್ಥ ಸಿಂಗಾಪುರ
'ಕಾರಟಗಿಯಿಂದ ವ್ಯಾಪಾರಸ್ಥರು ಇಲ್ಲಿಗೆ ಬಂದರೆ ಭತ್ತದ ಕಣಜವಾಗಿರುವ ಈ ಭಾಗದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ ಹಾಗೂ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತದೆ'
ಕೆ ಮಲ್ಲಿಕಾರ್ಜುನ ನಿಟ್ಟೂರು ಗ್ರಾಮಸ್ಥ
ಭೂಸ್ವಾಧೀನ ಪ್ರಕ್ರಿಯೆಗೆ ಸಹಕರಿಸಲು ಗ್ರಾಮಸ್ಥರು ಸಿದ್ದರಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ
ಮಾಳಮ್ಮ ಗ್ರಾಮ ಪಂಚಾಯತಿ ಸದಸ್ಯೆ ನಿಟ್ಟೂರು
ರೈತರು, ಮೀನುಗಾರರು, ವ್ಯಾಪಾರಸ್ಥರು ಅಲ್ಲದೆ ಅಂಬಾಮಠ ಹಾಗೂ ಗಡ್ಡೆ ಖಾದರ್ ಬಾಷ ದರ್ಗಾಕ್ಕೆ ತೆರಳುವವರು ಈಗ ಹೆಚ್ಚಾಗುತ್ತಿದ್ದಾರೆ, ಸರ್ಕಾರ ಕೂಡಲೆ ಸೇತುವೆ ನಿರ್ಮಾಣ ಮಾಡಬೇಕು
ತುಬಾಕಿ ಮಾರೆಪ್ಪ ನಿಟ್ಟೂರು ಗ್ರಾಮಸ್ಥ
ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅನುದಾನ ಬಿಡುಗಡೆಗೊಳಿಸಿದೆ. ಕೇಂದ್ರದ ಅನುದಾನಕ್ಕೆ ಮನವಿ ಸಲ್ಲಿಸಲಾಗಿದ್ದು, ಈಗಿನ ಹೊಸ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು
ಸಿರುಗುಪ್ಪ ಶಾಸಕ ಬಿ. ಎಂ.ನಾಗರಾಜ
ತೆಕ್ಕಲಕೋಟೆ ಸಮೀಪದ ತುಂಗಭದ್ರಾ ನದಿ ತಟದ ನಿಟ್ಟೂರು- ಸಿಂಗಾಪುರ ಗ್ರಾಮಗಳ ಗ್ರಾಮಸ್ಥರ ದೋಣಿ ಸಂಚಾರ
ತೆಕ್ಕಲಕೋಟೆ ಸಮೀಪದ ತುಂಗಭದ್ರಾ ನದಿ ತಟದ ನಿಟ್ಟೂರು- ಸಿಂಗಾಪುರ ಗ್ರಾಮಗಳ ಸಂಚಾರಕ್ಕೆ ದೋಣಿಗಾಗಿ ಕಾಯುತ್ತಿರುವ ಜನ
ತೆಕ್ಕಲಕೋಟೆ ಸಮೀಪದ ತುಂಗಭದ್ರಾ ನದಿ ತಟದ ನಿಟ್ಟೂರು- ಸಿಂಗಾಪುರ ಗ್ರಾಮಗಳ ಜನ ಬೈಕ್ ಗಳೊಂದಿಗೆ ದೋಣಿ ಏರುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.