ADVERTISEMENT

ತುಂಗಭದ್ರಾ ನದಿಯಲ್ಲಿ ಒಳ ಹರಿವು ಹೆಚ್ಚಳ; ಬ್ಯಾಲಹುಣ್ಸಿ-ಮಕರಬ್ಬಿ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 15:34 IST
Last Updated 24 ಜುಲೈ 2021, 15:34 IST
ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿ-ಮಕರಬ್ಬಿ ರಸ್ತೆಯ ಮೇಲೆ ನದಿ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವುದು.
ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿ-ಮಕರಬ್ಬಿ ರಸ್ತೆಯ ಮೇಲೆ ನದಿ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವುದು.   

ಹೂವಿನಹಡಗಲಿ: ಮಲೆನಾಡು ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಕಾರಣ ತುಂಗಭದ್ರಾ ನದಿಯು ತುಂಬಿ ಹರಿಯುತ್ತಿದ್ದು, ತಾಲ್ಲೂಕಿನ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ.

ತಾಲ್ಲೂಕಿನಲ್ಲಿ ಕಳೆದ 15 ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತಿತ್ತು. ಶನಿವಾರ ಮಳೆಯ ಪ್ರಮಾಣ ತಗ್ಗಿತ್ತಾದರೂ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ನದಿಯ ಒಳ ಹರಿವು ಹೆಚ್ಚಾಗಿದೆ.

ತಾಲ್ಲೂಕಿನ ಬನ್ನಿಮಟ್ಟಿ, ಬ್ಯಾಲಹುಣ್ಸಿ, ಮಕರಬ್ಬಿ, ಕೋಟಿಹಾಳ ಗ್ರಾಮಗಳ ನದಿ ತೀರದ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ಮೆಕ್ಕೆಜೋಳ, ಭತ್ತದ ಬೆಳೆಗಳು ಮುಳುಗಡೆಯಾಗಿವೆ. ನದಿ ತೀರದಲ್ಲಿ ಅಳವಡಿಸಿರುವ ಪಂಪ್ ಸೆಟ್ ಮೋಟಾರ್ ಗಳನ್ನು ರೈತರು ತೆರವುಗೊಳಿಸಿದರು. ಬ್ಯಾಲಹುಣ್ಸಿ-ಮಕರಬ್ಬಿ ಮಾರ್ಗ ಮಧ್ಯೆದಲ್ಲಿನ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಜೆಯಿಂದ ಈ ರಸ್ತೆ ಸಂಪರ್ಕ ಕಡಿತಗೊಂಡಿದೆ.

ADVERTISEMENT

‘ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ನಲ್ಲಿ ಶನಿವಾರ 1,29,854 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. 22 ಗೇಟ್ ಗಳನ್ನು ತೆರೆದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತದೆ. ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿಯ ಒಳ ಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ ಐಗೋಳ್ ತಿಳಿಸಿದರು.

ನದಿ ತೀರದ ಜನರಿಗೆ ಎಚ್ಚರಿಕೆ: ನದಿ ತೀರದ ಗ್ರಾಮಗಳಲ್ಲಿ ಟಾಂಟಾಂ ಪ್ರಚಾರ ನಡೆಸಿ ಎಚ್ಚರಿಕೆಯಿಂದ ಇರುವಂತೆ ಜನರಿಗೆ ತಿಳಿಸಲಾಗಿದೆ. ಹರವಿ, ಹರವಿ ಬಸಾಪುರ, ಕುರುವತ್ತಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸದ್ಯಕ್ಕೆ ಅಪಾಯದ ಸ್ಥಿತಿ ಇಲ್ಲ ಎಂದು ತಹಶೀಲ್ದಾರ್ ಎ.ಎಚ್.ಮಹೇಂದ್ರತಿಳಿಸಿದರು.

ಗ್ರಾಮ ಮಟ್ಟದ ಸಿಬ್ಬಂದಿ ಕೇಂದ್ರ ಸ್ಥಳದಲ್ಲೇ ಇದ್ದು ನದಿ ತೀರದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.