ADVERTISEMENT

ತುಂಗಭದ್ರಾ ಕೊಳ್ಳದಲ್ಲಿ ನೀರಿನ ಕೊರತೆ: ಎರಡನೇ ಬೆಳೆಗೆ ನೀರು ನಿಲುಕುವುದೇ?

ಆರ್. ಹರಿಶಂಕರ್
Published 10 ನವೆಂಬರ್ 2025, 4:19 IST
Last Updated 10 ನವೆಂಬರ್ 2025, 4:19 IST
ತುಂಗಭದ್ರಾ ಜಲಾಶಯ (ಸಾಂದರ್ಭಿಕ ಚಿತ್ರ)
ತುಂಗಭದ್ರಾ ಜಲಾಶಯ (ಸಾಂದರ್ಭಿಕ ಚಿತ್ರ)   

ಬಳ್ಳಾರಿ: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟವೇನೋ ತಣ್ಣಗಾಗಿದೆ. ಈ ಮಧ್ಯೆ, ತುಂಗಭದ್ರಾ ಕೊಳ್ಳದಲ್ಲಿ ಎರಡನೇ ಬೆಳೆಗೆ ನೀರು ಬೇಕೆಂಬ ಹೋರಾಟಗಳು ಭುಗಿಲೇಳುವ ಸಾಧ್ಯತೆಗಳು ಗೋಚರಿಸುತ್ತಿವೆ. ಆದರೆ, ಭವಿಷ್ಯದಲ್ಲಿ ಮಳೆ ಮುನ್ಸೂಚನೆ ಇಲ್ಲವಾಗಿದೆ. ಜಲಾಶಯದ ನೀರು ದಿನೇ ದಿನೇ ಖಾಲಿಯಾಗುತ್ತಿದೆ. ಹೀಗಾಗಿ, ಎರಡನೇ ಬೆಳೆಗೆ ನೀರು ನಿಲುಕಲಾರದು ಎಂಬ ವಾಸ್ತವ ಸ್ಪಷ್ಟವಾಗುತ್ತಾ ಹೋಗುತ್ತಿದೆ.

ಜಲಾಶಯದಲ್ಲಿ ಭಾನುವಾರದ ಹೊತ್ತಿಗೆ 78.073 ಟಿಎಂಸಿ (1625.48 ಅಡಿ) ನೀರು ಉಳಿದಿದೆ. ಈ ನೀರನ್ನು ನಿತ್ಯ 8 ಸಾವಿರ ಕ್ಯುಸೆಕ್‌ನಂತೆ ಇನ್ನೂ 40–45 ದಿನಗಳವರೆಗೆ ಕಾಲುವೆಗಳಿಗೆ ಹರಿಸಬೇಕಾದ ಅಗತ್ಯವಿದೆ. ಅಂದರೆ, 27.64 ಟಿಂಎಂಸಿ ನೀರು ಜಲಾಶಯದಿಂದ ಹರಿದುಹೋಗಲಿದ್ದು, ಅಂದಾಜು 50 ಟಿಎಂಸಿಯಷ್ಟು ನೀರು ಮಾತ್ರ ಡಿಸೆಂಬರ್‌ ಅಂತ್ಯ ಅಥವಾ ಜನವರಿ ಮೊದಲ ವಾರದ ಹೊತ್ತಿಗೆ ಉಳಿದುಕೊಳ್ಳಲಿದೆ.

ತುಂಗಭದ್ರಾ ಕೊಳ್ಳದಲ್ಲಿ ಎರಡನೇ ಬೆಳೆ ಡಿಸೆಂಬರ್‌ನಲ್ಲಿ ಆರಂಭವಾಗಲಿದ್ದು, ಅದಕ್ಕೆ ನೀರು ಪೂರೈಸಬೇಕಿದ್ದರೆ, ಜನವರಿ ಹೊತ್ತಿಗೆ ಜಲಾಶಯದಲ್ಲಿ ಕನಿಷ್ಠ 85ರಿಂದ ಗರಿಷ್ಠ 90 ಟಿಂಎಸಿವರೆಗೆ ನೀರು ಇರಲೇಬೇಕು. ಇದರಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ 10 ಟಿಎಂಸಿ ನೀರು ಮೀಸಲಿಡಬೇಕಾಗುತ್ತದೆ. 

ADVERTISEMENT

ಸದ್ಯದ ಪರಿಸ್ಥಿತಿ ನೋಡಿದರೆ, ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಈ 40 ದಿನಗಳಲ್ಲಿ ಜಲಾಶಯದಿಂದ ಹರಿದುಹೋಗುವಷ್ಟೇ ನೀರು ಮತ್ತೆ ಬಂದು ತುಂಬಿಕೊಳ್ಳುವ ಸಾಧ್ಯತೆಗಳು ಕಾಣುತ್ತಿಲ್ಲ. ಹೀಗಾಗಿ ಎರಡನೇ ಬೆಳೆಗೆ ನೀರು ಎಟುಕುವ ಸಾಧ್ಯತೆಗಳು ಕ್ಷೀಣ ಎಂಬ ಅಭಿಪ್ರಾಯಗಳು ಜಲತಜ್ಞರು ಮತ್ತು ತುಂಗಭದ್ರಾ ಜಲಾಶಯದಲ್ಲಿ ಕೆಲಸ ಮಾಡಿದ ಉನ್ನತ ಅಧಿಕಾರಿಗಳಿಂದ ಕೇಳಿ ಬಂದಿದೆ.

ವಾಗ್ದಾನ ನೀಡಲಾಗದು: ಎರಡನೇ ಬೆಳೆಗೆ ನೀರು ಬಿಡುತ್ತೇವೆ ಎಂದು ಘೋಷಿಸಿ ಬದ್ಧತೆ ಪ್ರದರ್ಶಿಸುವುದು ನೀರಾವರಿ ಸಲಹಾ ಸಮಿತಿಗೆ ಅಷ್ಟು ಸುಲಭದ ಕೆಲಸವಲ್ಲ. ಬೇಸಿಗೆ ಬೆಳೆಗೆ ನೀರು ಕೊಡುತ್ತೇವೆ ಎಂದು ಒಂದು ಬಾರಿ ಘೋಷಿಸಿಬಿಟ್ಟರೆ, ಜಲಾಶಯದ ಕೊನೆ ಹನಿಯ ನೀರನ್ನೂ ಬಸಿದು ಕಾಲುವೆಗಳಿಗೆ ಹರಿಸಲೇಬೇಕಾದ ಅನಿವಾರ್ಯತೆ ಎದುರಾಗಿಬಿಡುತ್ತದೆ. ಆದ್ದರಿಂದಲೇ ಐಸಿಸಿ ಈ ಬಾರಿ ಎಂದಿಗಿಂತಲೂ ಮೊದಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿ, ಬೇಸಿಗೆ ಬೆಳೆಗೆ ನೀರಿಲ್ಲ ಎನ್ನುತ್ತಿರುವಂತಿದೆ. 

2025ರಲ್ಲಿ ಮಳೆ ಮೇ ಹೊತ್ತಿಗೆ ಆರಂಭವಾಗಿತ್ತು. ಆದರೆ, ಗಮನಿಸಬೇಕಾದ ಅಂಶವೆಂದರೆ, ಜೂನ್‌ ತಿಂಗಳಾದರೂ ಮಳೆಯೇ ಆಗದ ವರ್ಷಗಳನ್ನೂ ಕರ್ನಾಟಕ ಕಂಡಿದೆ. ಒಂದು ವೇಳೆ ಈಗಿರುವ ನೀರನ್ನೇ ನಂಬಿ ಎರಡನೇ ಬೆಳೆಗೆ ನೀರು ಹರಿಸಿ, ಮೇ ಹೊತ್ತಿಗೆ ಮಳೆಯಾಗದೇ, ಜೂನ್‌ನಲ್ಲಿ ಮುಂಗಾರೂ ಕೈಕೊಟ್ಟರೆ ಅಕ್ಷರಶಃ ಜಲಕ್ಷಾಮವೇ ಸೃಷ್ಟಿಯಾಗುತ್ತದೆ. ಈ ಆತಂಕ ಎಲ್ಲರಲ್ಲೂ ಇದೆ.

10 ಬಾರಿ ನೀರು ಸಿಕ್ಕಿಲ್ಲ: ತುಂಗಭದ್ರಾ ಜಲಾಶಯ ಕೇವಲ ಜಲಾಶಯ ಮಾತ್ರವಲ್ಲ. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಆಂಧ್ರ, ತೆಲಂಗಾಣದ ಜೀವನಾಡಿ. ಈ ಜಲಾಶಯ ನಿರ್ಮಾಣವಾದಾಗಿನಿಂದ ಈವರೆಗೆ ವರ್ಷದಲ್ಲಿ ಒಂದು ಬೆಳೆಯನ್ನಂತೂ ರಕ್ಷಿಸಿಕೊಟ್ಟಿದೆ. 10 ಬಾರಿ ಹೊರತುಪಡಿಸಿ ಇನ್ನೆಲ್ಲ ವರ್ಷಗಳಲ್ಲಿ ಎರಡನೇ ಬೆಳೆಗೂ ನೀರು ಒದಗಿಸಿದೆ. ಅಷ್ಟರ ಮಟ್ಟಿಗೆ ರೈತರ ಜತೆಯಾಗಿ ನಿಂತಿದೆ.

ನೀರಾವರಿ ಸಲಹಾ ಸಮಿತಿ ತೀರ್ಮಾನ ಆಧರಿಸಿ ರೈತರು ಮುಂದಡಿ ಇಡಬೇಕು. ನೀರು ಲಭ್ಯವಾಗದಿದ್ದರೆ ಮುಸುಕಿನ ಜೋಳ ಸಿರಿಧಾನ್ಯ ಬೆಳೆಗಳನ್ನು ಬೆಳೆಯುವುದು ಒಳಿತು
ಸೋಮಸುಂದರ್‌ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಎರಡನೇ ಬೆಳೆಗೆ ನೀರು ಬಿಡಬೇಕು. ಜಲಾಶಯದ ಎರಡೂ ಗೇಟ್‌ಗಳನ್ನು ಕೂರಿಸಬೇಕು. ಈ ವಿಚಾರದಲ್ಲಿ ಕಾಲಹರಣ ಸಲ್ಲದು. ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಪ್ರತಿಭಟನೆ ನಡೆಸುತ್ತೇವೆ
ಮಾಧವ ರೆಡ್ಡಿ ಅಧ್ಯಕ್ಷ ರಾಜ್ಯ ರೈತ ಸಂಘ– ಹಸಿರುಸೇನೆ

ಪರಿಹಾರ ಏನಿದೆ?

ಸದ್ಯದ ಸನ್ನಿವೇಶದಲ್ಲಿ ಐಸಿಸಿ ಅಂತೂ ಎರಡನೇ ಬೆಳೆ ನೀರು ಹರಿಸುವ ಖಾತ್ರಿ ನೀಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ರೈತರು ಭತ್ತ ಮೆಣಸಿನಕಾಯಿಯಂಥ ಬೆಳೆಗಳನ್ನು ಬೆಳೆಯದೇ ಕಡಿಮೆ ನೀರು ಬೇಡುವ ಬೆಳೆಗಳತ್ತ ಗಮನ ಹರಿಸಿದರೆ ಒಳಿತು ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಆದರೆ ಇದಕ್ಕೆ ರೈತರು ಒಪ್ಪುವರೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.