ಸಂಡೂರು: ‘ಪಟ್ಟಣದ ಬಡ ಜನರ ಅನುಕೂಲಕ್ಕಾಗಿ ಎರಡು ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. ಆ ಮನೆಗಳಲ್ಲಿ ಪರಿಶಿಷ್ಟರಿಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು. ಪಟ್ಟಣದಲ್ಲಿ ನಿರಂತರ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ₹ 60 ಕೋಟಿ ವೆಚ್ಚದಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗುವುದು’ ಎಂದು ಸಂಸದ ಇ.ತುಕಾರಾಂ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಂ ಜಯಂತಿಯ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
‘ಸಂಡೂರು ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಸಂವಿಧಾನ ಬದ್ಧವಾಗಿ ಕಲ್ಪಿಸಲಾಗಿದೆ. ಜನರ ಧ್ವನಿಯಾಗಿ ಕೆಲಸಮಾಡಿದ್ದೇನೆ. ಪಟ್ಟಣದಲ್ಲಿ ಹಳೆಯ 100 ಹಾಸಿಗೆಗಳ ಆಸ್ಪತ್ರೆಯನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಐದು ಅಂತಸ್ತಿನ ಮಾದರಿ ಕಟ್ಟಡವನ್ನು ನಿರ್ಮಿಸಲಾಗುವುದು’ ಎಂದರು.
ಜಯಂತಿಯ ಅಂಗವಾಗಿ ಪರಿಶಿಷ್ಟ ಜಾತಿಯ ಅತಿಹೆಚ್ಚು ಅಂಕ ಪಡೆದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು, ಪೌರಕಾರ್ಮಿಕರನ್ನು, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಸಕಿ ಅನ್ನಪೂರ್ಣ ತುಕಾರಾಂ, ಪುರಸಭೆಯ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷೆ ಲತಾ, ವಿರಕ್ತ ಮಠದ ಪ್ರಭು ಸ್ವಾಮೀಜಿ, ಪ್ರಗತಿಪರ ಚಿಂತಕ ಎಸ್.ಬಿ. ಚಂದ್ರಶೇಖರ್, ತಹಶೀಲ್ದಾರ್ ಅನಿಲ್ ಕುಮಾರ್ ಜಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಕೆ.ವೆಂಕಟೇಶ್, ಇಒ ಮಡಗಿನ ಬಸಪ್ಪ, ಸಿಪಿಐ ಮಹೇಶ್‍ಗೌಡ, ಪುರಸಭೆಯ ಮುಖ್ಯಾಧಿಕಾರಿ ಜಯಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.