ಬಳ್ಳಾರಿ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಕೊನೆ ದಿನಕ್ಕೆ ತಲುಪಿದ್ದು, ಜಿಲ್ಲೆಯಲ್ಲಿ ಶೇ 83.11ರಷ್ಟು ಸಾಧನೆಯಾಗಿದೆ. ಆದರೆ, ಅನಗತ್ಯ ಸ್ಥಳಗಳಿಗೆ ನೀಡಿರುವ ಯುಎಚ್ ಐಡಿಗಳು ಶೇಕಡಾವಾರು ಸಾಧನೆ ಮೇಲೆ ಪರಿಣಾಮ ಬೀರಿದ್ದು, ಅವುಗಳ ರದ್ಧತಿಯೇ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ಒಟ್ಟು 3,85,908 ಮನೆಗಳನ್ನು ಸಮೀಕ್ಷೆಗೆ ಗುರುತಿಸಲಾಗಿದೆ. ಇವುಗಳಿಗೆ ಪ್ರತ್ಯೇಕ ಯುಎಚ್‌ಐಡಿ (ಮನೆಗಳ ವಿಶಿಷ್ಟ ಗುರುತು ಸಂಖ್ಯೆ)ಗಳನ್ನು ನೀಡಲಾಗಿದೆ. ಈ ಕಾರ್ಯವನ್ನು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಮಾಡಿದೆ.
ಕೆಲವು ವಾಣಿಜ್ಯ ಮಳಿಗೆಗಳು, ಪಾಳುಬಿದ್ದ, ಖಾಲಿ ಮನೆಗಳು, ಅಪಾರ್ಟ್‌ಮೆಂಟ್‌ನಲ್ಲಿನ ಖಾಲಿ ಫ್ಲ್ಯಾಟ್‌ಗಳಿಗೂ ಯುಎಚ್ ಐಡಿ ಚೀಟಿ ಅಂಟಿಸಲಾಗಿದೆ. ಹಲವು ಕಡೆಗಳಲ್ಲಿ ಅಂಗನವಾಡಿ ಕೇಂದ್ರ, ಶಾಲೆ, ದೇವಾಲಯಕ್ಕೂ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಬಳ್ಳಾರಿ ಜಿಲ್ಲೆಯೊಂದರಲ್ಲೇ ಇಂಥ 30,000 ಯುಎಚ್ ಐಡಿಗಳು ಇವೆ ಎಂದು ಅಂದಾಜಿಸಲಾಗಿದೆ. ಬಳ್ಳಾರಿ ನಗರದಲ್ಲಿ ಇದರ ಸಮಸ್ಯೆ ಹೆಚ್ಚಾಗಿದೆ. ಇದು ಜಿಲ್ಲೆಯ ಶೇಕಡಾವಾರು ಸಮೀಕ್ಷೆ ಸಾಧನೆ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಇವುಗಳನ್ನು ರದ್ಧುಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಒಂದು ಯುಎಚ್ ಐಡಿಯನ್ನು ರದ್ದು ಮಾಡಬೇಕಿದ್ದರೆ ಸಮೀಕ್ಷೆಯ ಮೇಲ್ವಿಚಾರಕ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಪರಿಶೀಲಿಸಿ, ಚೀಟಿಯ ಚಿತ್ರ ತೆಗೆದು ಸಮೀಕ್ಷೆಯ ಕೇಂದ್ರ ತಂಡಕ್ಕೆ ರವಾನಿಸಬೇಕು. ಕೇಂದ್ರ ಸಮೀಕ್ಷಾ ತಂಡವು ಚಿತ್ರ ನೋಡಿ, ಕೂಲಂಕಷವಾಗಿ ಪರಿಶೀಲಿಸಿ ಯುಎಚ್ ಐಡಿಯನ್ನು ರದ್ದುಗೊಳಿಸುತ್ತದೆ. ಆದರೆ, ಇದು ತ್ರಾಸದಾಯಕ ಮತ್ತು ಸಮಯ ಬೇಡುವ ಕೆಲಸವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂದು ಯುಎಚ್ ಐಡಿಯ ಮಾಹಿತಿಯನ್ನು ಕೇಂದ್ರ ಸಮೀಕ್ಷಾ ತಂಡಕ್ಕೆ ರವಾನೆ ಮಾಡಬೇಕಿದ್ದರೆ ಕನಿಷ್ಠ ಎರಡು ನಿಮಿಷಗಳು ಹಿಡಿಯುತ್ತವೆ. ಅಂಥ 30 ಸಾವಿರ ಸಂಖ್ಯೆಗಳನ್ನು ನಾವೀಗ ವರದಿ ಮಾಡಬೇಕಾಗಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ, ಇದನ್ನು ಜೆಸ್ಕಾಂ ನಿರಾಕರಿಸಿದೆ. ಮನೆಗಳನ್ನು ಮಾತ್ರವೇ ಗುರುತಿಸಿ ಚೀಟಿ ಅಂಟಿಸಲಾಗಿದೆ. ನಮ್ಮಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗಿನ ಸಾಧನೆ
ಬಳ್ಳಾರಿಯೂ ಸೇರಿದಂತೆ ಜೆಸ್ಕಾಂ ವ್ಯಾಪ್ತಿಯಲ್ಲಿ ಮ್ಯಾಪಿಂಗ್ ಕಾರ್ಯ ಸಮರ್ಪಕವಾಗಿ ಆಗಿದೆ. ಹೀಗಾಗಿ ಇಲ್ಲಿ ಶಾಲೆ ಅಂಗನವಾಡಿ ದೇಗುಲಗಳಿಗೆ ಯುಎಚ್‌ಐಡಿ ಅಂಟಿಸಿದ ಉದಾಹರಣೆಗಳು ಇಲ್ಲ.ತೇಜ ನಾಯಕ್ ಜೆಸ್ಕಾಂ ಎಸ್‌ಇ ಬಳ್ಳಾರಿ
ಸಮೀಕ್ಷಕರಿಗೆ ನಾನಾ ಸಮಸ್ಯೆ
ಜಿಲ್ಲೆಯಲ್ಲಿ ಸಮೀಕ್ಷಕರು ಸರ್ವೆ ವೇಳೆ ನಾನಾ ರೀತಿಯ ಸಮಸ್ಯೆ ಎದುರುಸಿದ್ದಾರೆ. ‘ಒಟಿಪಿ ಪಡೆದು ನಮಗೆ ಮೋಸ ಮಾಡಲು ಬಂದಿದ್ದೀರಾ?’ ‘ಮತಾಂತರ ಮಾಡಲು ಬಂದಿದ್ದೀರಾ?’ ಎಂಬ ಪ್ರಶ್ನೆಗಳಿಂದ ಹಿಡಿದು ನಾಯಿ ಕಾಟ ಅನುಭವಿಸುವವರೆಗೆ ಹಲವು ಸಮಸ್ಯೆಗಳನ್ನು ಕಂಡಿದ್ದಾರೆ. ಸದ್ಯ ಸಮೀಕ್ಷೆಯು ಕೊನೇ ಹಂತ ತಲುಪಿದ್ದು ಇನ್ನು ಅಂದಾಜು ಶೇ 17ರಷ್ಟು ಸಮೀಕ್ಷೆ ಪೂರ್ಣಗೊಂಡರೆ ಇಡೀ ಪ್ರಕ್ರಿಯೆ ಅಂತ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.