ADVERTISEMENT

ಹೊಸಪೇಟೆ: ಮಹಾತ್ಮ ಗಾಂಧಿ ವೃತ್ತದಲ್ಲೂ ಅನಧಿಕೃತ ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 11:07 IST
Last Updated 15 ಜುಲೈ 2020, 11:07 IST
ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದ ನಗರಸಭೆ
ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದ ನಗರಸಭೆ   

ಹೊಸಪೇಟೆ: ಕಳೆದ ಎರಡು ದಿನಗಳಿಂದ ಮೂರಂಗಡಿ ವೃತ್ತದಲ್ಲಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಿದ ನಗರಸಭೆ, ಬುಧವಾರ ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ತೆರವು ಕಾರ್ಯ ಕೈಗೆತ್ತಿಕೊಂಡಿದೆ.

ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿಗೆ ಹೊಂದಿಕೊಂಡಿರುವ ಚರ್ಚ್‌ನಿಂದ ಮಹಾತ್ಮ ಗಾಂಧಿ ವೃತ್ತದವರೆಗಿನ ಕಟ್ಟಡಗಳನ್ನು ಹಿಟಾಚಿ, ಜೆ.ಸಿ.ಬಿ. ಬಳಸಿ ತೆರವುಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ 15 ಮಳಿಗೆಗಳನ್ನು ತೆರವುಗೊಳಿಸಲಾಗುತ್ತಿದೆ.

ಮೂರು ದಿನಗಳ ಹಿಂದೆಯೇ ಈ ಭಾಗದಲ್ಲಿ ನಗರಸಭೆ ಸಿಬ್ಬಂದಿ ಸರ್ವೇ ನಡೆಸಿ, ಎಂಟು ಅಡಿ ರಸ್ತೆಯ ಜಾಗವನ್ನು ಅತಿಕ್ರಮಣಗೊಳಿಸಿರುವುದು ಪತ್ತೆ ಹಚ್ಚಿತ್ತು. ಬಳಿಕ ಕಟ್ಟಡಗಳ ಮಾಲೀಕರಿಗೆ ತೆರವುಗೊಳಿಸಿಕೊಳ್ಳುವಂತೆ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದರು. ಮಳಿಗೆಗಳಲ್ಲಿದ್ದ ವಸ್ತುಗಳನ್ನು ಮಾಲೀಕರು ಮಂಗಳವಾರವೇ ಬೇರೆಡೆ ಸಾಗಿಸಿದ್ದರು. ಬುಧವಾರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ. ಸ್ಥಳದಲ್ಲಿ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಮೊಕ್ಕಾಂ ಹೂಡಿದ್ದಾರೆ. ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ADVERTISEMENT

ಮೂರಂಗಡಿ ವೃತ್ತದಲ್ಲಿನ ದರ್ಗಾ ಮಸೀದಿಯ 21 ಮಳಿಗೆಗಳ ತೆರವು ಕಾರ್ಯಾಚರಣೆ ಮಂಗಳವಾರ ಸಂಜೆ ಪೂರ್ಣಗೊಂಡಿದೆ. ಮೂರಂಗಂಡಿ ವೃತ್ತದಿಂದ ಉದ್ಯೋಗ ಪೆಟ್ರೋಲ್‌ ಬಂಕ್‌, ನಗರಸಭೆ ಕಚೇರಿ, ಮಹಾತ್ಮ ಗಾಂಧಿ ವೃತ್ತ ಹಾಗೂ ಕೌಲ್‌ಪೇಟೆಗೆ ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಸಾರ್ವಜನಿಕ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಅಂಚೆ ಕಚೇರಿ ಎದುರಿನ ರಸ್ತೆಯಲ್ಲಿ ಜನ, ವಾಹನದಟ್ಟಣೆ ಉಂಟಾಗಿ, ಸಂಚಾರಕ್ಕೆ ಅಡಚಣೆಯಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.