ADVERTISEMENT

ವಿದ್ಯುತ್‌ ಕಂಬ ಸ್ಥಳಾಂತರಿಸದೆ ರಸ್ತೆ ವಿಸ್ತರಣೆ!

ಎ.ಪಿ.ಎಂ.ಸಿ.ಯಿಂದ ಸಾಯಿಬಾಬಾ ವೃತ್ತದ ವರೆಗೆ ಅವೈಜ್ಞಾನಿಕ ರಸ್ತೆ ವಿಸ್ತರಣೆ ಕಾಮಗಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 10 ಫೆಬ್ರುವರಿ 2019, 15:51 IST
Last Updated 10 ಫೆಬ್ರುವರಿ 2019, 15:51 IST
ವಿದ್ಯುತ್‌ ಕಂಬ, ಮರಗಳನ್ನು ತೆರವುಗೊಳಿಸದೆ ಹೊಸಪೇಟೆಯ ಎ.ಪಿ.ಎಂ.ಸಿ. ರಸ್ತೆ ವಿಸ್ತರಣೆ ಮಾಡುತ್ತಿರುವುದು–ಪ್ರಜಾವಾಣಿ ಚಿತ್ರ
ವಿದ್ಯುತ್‌ ಕಂಬ, ಮರಗಳನ್ನು ತೆರವುಗೊಳಿಸದೆ ಹೊಸಪೇಟೆಯ ಎ.ಪಿ.ಎಂ.ಸಿ. ರಸ್ತೆ ವಿಸ್ತರಣೆ ಮಾಡುತ್ತಿರುವುದು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.) ಪ್ರಾಂಗಣ ಎದುರಿನಿಂದ ಸಾಯಿಬಾಬಾ ವೃತ್ತದವರೆಗೆ ಕೈಗೆತ್ತಿಕೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ನಗರಸಭೆಯ ಕಾರ್ಯವೈಖರಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ವಿಸ್ತರಣೆಗೂ ಮುನ್ನ ಅಲ್ಲಿರುವ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಬೇಕು. ಅಗತ್ಯ ಇರುವ ಕಡೆಗಳಲ್ಲಿ ಮರಗಳನ್ನು ಕತ್ತರಿಸಬೇಕು. ಆದರೆ, ಯಾವುದನ್ನೂ ಮಾಡದೆ ರಸ್ತೆ ವಿಸ್ತರಿಸುವ ಕೆಲಸ ಶುರು ಮಾಡಲಾಗಿದೆ.

ಈಗಾಗಲೇ ಕಚ್ಚಾ ರಸ್ತೆ ನಿರ್ಮಿಸಲಾಗಿದ್ದು, ಟಾರ್‌ ಹಾಕುವುದೊಂದೆ ಬಾಕಿ ಇದೆ. ಹೀಗಿದ್ದರೂ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಂಬ, ಮರಗಳು ಇರುವುದರಿಂದ ವಾಹನಗಳು ಸಂಚರಿಸಲು ಆಗುತ್ತಿಲ್ಲ. ಅದು ವಾಹನ ನಿಲುಗಡೆಯ ಜಾಗವಾಗಿ ಮಾರ್ಪಟ್ಟಿದೆ.

ADVERTISEMENT

ಸದಾ ವಾಹನ ದಟ್ಟಣೆಯಿರುವ ಈ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ರಸ್ತೆ ವಿಸ್ತರಿಸಲಾಗುತ್ತಿದೆ. ಅದಕ್ಕಾಗಿ ನಗರೋತ್ಥಾನ ಯೋಜನೆಯಡಿ ₹1.18 ಕೋಟಿ ವೆಚ್ಚ ಮಾಡಲಾಗುತ್ತಿದೆ. ಆದರೆ, ಅವೈಜ್ಞಾನಿಕವಾಗಿ ಕೆಲಸ ಮಾಡುತ್ತಿರುವುದರಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.

‘ಹಂಪಿ ರಸ್ತೆ, ಸ್ಟೇಷನ್‌ ರಸ್ತೆ, ಟಿ.ಬಿ. ಡ್ಯಾಂ ರಸ್ತೆ ವಿಸ್ತರಣೆಗೂ ಮುನ್ನ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಿ, ಅಗತ್ಯ ಇರುವ ಕಡೆಗಳಲ್ಲಿ ಮರಗಳನ್ನು ಕತ್ತರಿಸಲಾಗಿತ್ತು. ಹೀಗಾಗಿ ಆ ರಸ್ತೆಗಳಲ್ಲಿ ಸುಗಮ ವಾಹನ ಸಂಚಾರ ಸಾಧ್ಯವಾಗಿದೆ. ಆದರೆ, ಎ.ಪಿ.ಎಂ.ಸಿ. ರಸ್ತೆಯಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡಲಾಗುತ್ತಿದೆ. ರಸ್ತೆ ವಿಸ್ತರಿಸಿದರೂ ಸಾರ್ವಜನಿಕರ ಉಪಯೋಗಕ್ಕೆ ಬರದಿದ್ದರೆ ಅದರಿಂದ ಯಾರಿಗೇನು ಪ್ರಯೋಜನ’ ಎಂದು ಸ್ಥಳೀಯ ನಿವಾಸಿ ರಮೇಶ ಪ್ರಶ್ನಿಸಿದ್ದಾರೆ.

‘ರಸ್ತೆ ವಿಸ್ತರಣೆಗಿಂತ ಬೇರೆಯದೇ ಉದ್ದೇಶ ಇದರಲ್ಲಿ ಇದ್ದಂತಿದೆ. ತೆರಿಗೆದಾರರ ಹಣವನ್ನು ಈ ರೀತಿ ಪೋಲು ಮಾಡುವುದು ಸರಿಯಲ್ಲ. ನಗರಸಭೆ ಅನೇಕ ಜನ ಎಂಜಿನಿಯರ್‌, ತಾಂತ್ರಿಕ ಸಲಹಾ ಸಮಿತಿ ಸೇರಿದಂತೆ ಇತರೆ ವಿಭಾಗಗಳನ್ನು ಹೊಂದಿರುತ್ತದೆ. ಇಷ್ಟೆಲ್ಲ ಇದ್ದರೂ ಅವೈಜ್ಞಾನಿಕ ಕಾಮಗಾರಿಗೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಪರಿಸರ ಉಳಿಸುವ ದೃಷ್ಟಿಯಿಂದ ಮರಗಳನ್ನು ಕಡಿಯದೆ ಹಾಗೆ ಬಿಟ್ಟಿದ್ದಾರೆ ಎಂದರೆ ಒಪ್ಪಿಕೊಳ್ಳಬಹುದು. ಆದರೆ, ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳಲು ಬಂದಿದ್ದರೂ ಕಂಬಗಳನ್ನು ಸ್ಥಳಾಂತರಿಸಿಲ್ಲ. ಹೀಗಾಗಿ ಇದು ವಾಸ್ತವದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯೇ ಅಲ್ಲ’ ಎಂದು ಯೂಸುಫ್‌ ರಾಜ ಹೇಳಿದರು.

‘ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಅದರಿಂದ ಸುಮಾರು ಹತ್ತು ಅಡಿಗಳ ವರೆಗೆ ರಸ್ತೆ ಮಾಡಲಾಗುತ್ತಿದೆ. ಆದರೆ, ಮಧ್ಯದಲ್ಲಿರುವ ಕಂಬ, ಮರಗಳನ್ನು ತೆರವುಗೊಳಿಸದೆ ರಸ್ತೆ ಮಾಡಿದರೆ ಏನು ಪ್ರಯೋಜನ. ಇನ್ನೂ ರಸ್ತೆಗೆ ಟಾರ್‌ ಹಾಕುವುದು ಬಾಕಿ ಇದೆ. ಅಷ್ಟರೊಳಗೆ ಕಂಬ, ಮರ ತೆರವುಗೊಳಿಸಿ, ಉತ್ತಮ ರೀತಿಯಲ್ಲಿ ರಸ್ತೆ ನಿರ್ಮಿಸಬೇಕು. ಇಲ್ಲವಾದಲ್ಲಿ ಸ್ಥಳೀಯರೊಂದಿಗೆ ಸೇರಿಕೊಂಡು ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಈ ಕುರಿತು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅಹಮ್ಮದ್‌ ಅವರನ್ನು ಸಂಪರ್ಕಿಸಿದಾಗ, ‘ಮರಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ತೀರ್ಮಾನಿಸಲಾಗಿದೆ. ಹೀಗಾಗಿ ಅವುಗಳನ್ನು ಕಡಿಯುತ್ತಿಲ್ಲ. ಕಂಬಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೆಸ್ಕಾಂನವರಿಗೆ ಸೂಚನೆ ಕೊಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.