ಕಂಪ್ಲಿ: ಇಲ್ಲಿಯ ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಸಂಘದ ವಿಭಾಗೀಯ ಪದಾಧಿಕಾರಿಗಳು ಕಲ್ಯಾಣ ಕರ್ನಾಟಕದ ಅನುದಾನರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ವೇತಾನಾನುದಾನಕ್ಕೆ ಒಳಪಡಿಸುವಂತೆ ಒತ್ತಾಯಿಸಿದರು.
ಈ ಕುರಿತ ಮನವಿಪತ್ರವನ್ನು ತಾಲ್ಲೂಕಿನ ಎಮ್ಮಿಗನೂರಿನ ವೆಂಕಯ್ಯ ಮೆಮೊರಿಯಲ್ ಶಾಲೆಯಲ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಗೆ ಶುಕ್ರವಾರ ಸಲ್ಲಿಸಿದರು.
ಬಳಿಕ ವಿಭಾಗೀಯ ಕೋಶಾಧ್ಯಕ್ಷ ಮುತ್ತಣ್ಣ ನಂದ್ಯಾಳ್ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ನಡೆಯುವುದೇ ದುಸ್ತರವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಮರೀಚಿಕೆಯಾಗುವುದನ್ನು ತಪ್ಪಿಸಲು ಅನುದಾನರಹಿತ ಕನ್ನಡ ಶಾಲೆಗಳಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
1995ರ ನಂತರದ ಎಲ್ಲ ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮ ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರಿಗೆ ವೇತನಾನುದಾನ ನೀಡಿ ಇಲ್ಲವೇ ಮಹಾರಾಷ್ಟ್ರ ಮಾದರಿಯಲ್ಲಿ ಅರ್ಧ ವೇತನವನ್ನಾದರೂ ನೀಡಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ 371ಜೆ ಅಡಿಯಲ್ಲಿ ಮೂಲ ಸೌಕರ್ಯ ನೀಡಬೇಕು. ನವೀಕರಣ ನಿಯಮಗಳಲ್ಲಿ ನಿಬಂಧನೆಗಳಲ್ಲಿ ರಿಯಾಯಿತಿ ತೋರಬೇಕು. ಸರ್ಕಾರಿ ಶಾಲೆಗಳಿಗೆ ನೀಡುವ ಸೌಲಭ್ಯಗಳನ್ನು ಅನುದಾನರಹಿತ ಶಾಲೆಗಳಿಗೂ ವಿಸ್ತರಿಸಬೇಕು ಎಂದು ವಿನಂತಿಸಿದರು.
ವಿಭಾಗೀಯ ಗೌರವ ಅಧ್ಯಕ್ಷ ತಾಂಡವಕೃಷ್ಣ, ಜಿಲ್ಲಾ ಅಧ್ಯಕ್ಷ ಎಂ.ಸುರೇಶ್, ಪದಾಧಿಕಾರಿ ಕೆ.ಎಸ್.ಚಾಂದ್‍ಬಾಷ, ಸಿ.ವೆಂಕಟೇಶ್, ಎಚ್.ಸಿ.ರಾಮಕೃಷ್ಣ, ಕೆ.ಶಂಕ್ರಪ್ಪ, ರಾಘವೇಂದ್ರ ಶ್ರೇಷ್ಠಿ, ವಿರುಪಾಕ್ಷಿ, ಮಾರುತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.