ವಾಲ್ಮೀಕಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಮೇಯರ್ ಮುಲ್ಲಂಗಿ ನಂದೀಶ್, ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ, ಲಿಡ್ಕರ್ ಅಧ್ಯಕ್ಷ ಮುಂಡರಿಗಿ ನಾಗರಾಜ ಮತ್ತಿತರರು ಉದ್ಘಾಟಿಸಿದರು.
ಬಳ್ಳಾರಿ: ‘ನಗರದ ವಾಲ್ಮೀಕಿ ವೃತ್ತ(ಎಸ್.ಪಿ ವೃತ್ತ)ದಲ್ಲಿ ₹1.10 ಕೋಟಿ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು, ವೃತ್ತವನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು.
‘ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಶಾಖಾ ಮಠ ಸ್ಥಾಪಿಸಲಾಗುವುದು. ಇದಕ್ಕಾಗಿ ಎರಡು ಎಕರೆ ಭೂಮಿ ನೀಡುತ್ತೇನೆ’ ಎಂದು ಭರವಸೆ ನೀಡಿದರು.
ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ‘ವಾಲ್ಮೀಕಿ ರಚಿಸಿದ ರಾಮಾಯಣ ಕೃತಿಯು ದೇಶದಲ್ಲಿಯೇ ಸರ್ವಶ್ರೇಷ್ಠ ಗ್ರಂಥ. ಒಟ್ಟು 24,000 ಶ್ಲೋಕಗಳನ್ನು ಒಳಗೊಂಡಿದೆ’ ಎಂದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಮಾತನಾಡಿ ‘ಸತ್ಯವು ಸದಾಚಾರ ಮತ್ತು ಧರ್ಮದ ಅಡಿಪಾಯ. ಧರ್ಮ ಎಂದರೆ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸುವುದು ಎಂದು ತೋರ್ಪಡಿಸುತ್ತದೆ. ಸತ್ಯವಂತ ಜೀವನವು ಶಾಂತಿ ಮತ್ತು ದೈವಿಕ ಅನುಗ್ರಹಕ್ಕೆ ಕಾರಣವಾಗುತ್ತದೆ. ಹಾಗಾಗಿ ಮಹರ್ಷಿ ವಾಲ್ಮೀಕಿಯವರ ಜೀವನದ ಆದರ್ಶ ತತ್ವಗಳನ್ನು ಪಾಲಿಸಬೇಕು’ ಎಂದರು.
ವಿಶೇಷ ಉಪನ್ಯಾಸ ನೀಡಿದ ಹೊಸಪೇಟೆಯ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ವೀರಭದ್ರಪ್ಪ ತಂಬ್ರಳ್ಳಿ, ‘ವಾಲ್ಮೀಕಿಯವರ ಸಂಪೂರ್ಣ ಜೀವನವು ದುಷ್ಟ ಕಾರ್ಯಗಳನ್ನು ತ್ಯಜಿಸಲು, ಒಳ್ಳೆಯ ಕಾರ್ಯಗಳು ಹಾಗೂ ಭಕ್ತಿಯ ಮಾರ್ಗವನ್ನು ಅನುಸರಿಸಲು ದಾರಿ ಮಾಡಿಕೊಡುತ್ತದೆ. ಈ ಮಹಾನ್ ವ್ಯಕ್ತಿಯ ಸಂದೇಶವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು’ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿದರು.
2024-25ನೇ ಸಾಲಿನ ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು. ಕಲೆ, ಸಾಹಿತ್ಯ-ಸಂಗೀತ ಕ್ಷೇತ್ರದಲ್ಲಿನ ಪರಿಣಿತರನ್ನು ಅಭಿನಂದಿಸಲಾಯಿತು.
ಇದಕ್ಕೂ ಮೊದಲು ನಗರದಲ್ಲಿ ಮೆರವಣಿಗೆ ನಡೆಯಿತು. ಎಸ್.ಪಿ ವೃತ್ತ ಮತ್ತು ವಾಲ್ಮೀಕಿ ಭವನದಲ್ಲಿನ ವಾಲ್ಮೀಕಿ ಪ್ರತಿಮೆಗೆ ಜಿಲ್ಲಾಡಳಿತದಿಂದ ಪುಷ್ಪನಮನ ಸಲ್ಲಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಬಳ್ಳಾರಿ ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ, ಉಪವಿಭಾಗಾಧಿಕಾರಿ, ಪಾಲಿಕೆ ಆಯುಕ್ತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಇದ್ದರು.
ವಾಲ್ಮೀಕಿ ನಾಯಕರೇ ಗೈರು ಜಿಲ್ಲಾಡಳಿತದಿಂದ ನಡೆದ ವಾಲ್ಮೀಕಿ ಜಯಂತಿಗೆ ವಾಲ್ಮೀಕಿ ಸಮುದಾಯದ ಜನಪ್ರತಿನಿಧಿಗಳೇ ಗೈರಾಗಿದ್ದರು. ಸಂಸದ ಇ. ತುಕಾರಾಂ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿ. ನಾಗೇಂದ್ರ ಕಂಪ್ಲಿಯ ಜೆ.ಎನ್ ಗಣೇಶ್ ಸಿರುಗುಪ್ಪದ ಬಿ.ಎಂ ನಾಗರಾಜು ಸಂಡೂರು ಶಾಸಕಿ ಅನ್ನಪೂರ್ಣಾ ಅವರೇ ಬಂದಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.