ADVERTISEMENT

ಡಿಸಿ ಕಚೇರಿ ಮುತ್ತಿಗೆ ಯತ್ನ, ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಪೊಲೀಸರ ವಶಕ್ಕೆ

ಬಳ್ಳಾರಿ ಜಿಲ್ಲೆ ವಿಭಜನೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 8:34 IST
Last Updated 23 ನವೆಂಬರ್ 2020, 8:34 IST
ಬಳ್ಳಾರಿ ವಿಭಜನೆ ವಿರೋಧಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು
ಬಳ್ಳಾರಿ ವಿಭಜನೆ ವಿರೋಧಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು   
""

ಬಳ್ಳಾರಿ: ಜಿಲ್ಲೆಯ ವಿಭಜನೆ ವಿರುದ್ಧ ಪ್ರತಿಭಟನೆ ಅಂಗವಾಗಿ ನಗರದಲ್ಲಿ‌ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಅವರನ್ನು ಪೊಲೀಸರು ವಶಕ್ಕೆ ಪಡೆದರು.

ನಗರದ ನಗರೂರು ನಾರಾಯಣರಾವ್ ಉದ್ಯಾನದಿಂದ ಜಿಲ್ಲಾ ಹೋರಾಟ ಸಮಿತಿ ಏರ್ಪಡಿಸಿದ್ದ ಪ್ರತಿಭಟನೆ ಮೆರವಣಿಗೆಯಲ್ಲಿ ಲಾರಿ ಏರಿ ಬಂದ ನಾಗರಾಜ್ ಮತ್ತು ನೂರಾರು ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.

ಮನವಿ ಪಡೆಯಲು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್ ಅವರು ಬರುತ್ತಿದ್ದಂತೆ ಮೇಲೆದ್ದ ವಾಟಾಳ್ ನಾಗರಾಜ್ ಪೊಲೀಸರ ಬ್ಯಾರಿ ಕೇಡ್ ದಾಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಆವರಣದೊಳಕ್ಕೆ ಧಾವಿಸಿದರು. ಅವರ ಬೆಂಬಲಿಗರು ಕೂಡ ಹೆಚ್ಷುವರಿ ಜಿಲ್ಲಾಧಿಕಾರಿಯನ್ನು ತಳ್ಳಿಕೊಂಡೇ ಮುನ್ನುಗ್ಗಿದರು.

ADVERTISEMENT

ಈ ಸಂದರ್ಭದಲ್ಲಿ ಕೆಲ ಕ್ಷಣ ತಳ್ಳಾಟ ಏರ್ಪಟ್ಟಿತು. ಇದೇ ವೇಳೆ ಕಚೇರಿ ಮೆಟ್ಟಿಲು ಹತ್ತಲು ಮುಂದಾದ ವಾಟಾಳ್ ನಾಗರಾಜ್ ಅವರನ್ನು ಬ್ರೂಸ್ಪೇಟೆ ಠಾಣೆ ಇನ್ ಸ್ಪೆಕ್ಟರ್ ನಾಗರಾಜ್ ತಡೆದು ನಿಲ್ಲಿಸಿದರು.

ಪೊಲೀಸ್ ಸಿಬ್ಬಂದಿ ಕೂಡಲೇ ನಾಗರಾಜ್ ಮತ್ತು ಗೋವಿಂದು ಅವರನ್ನು ಹೊತ್ತುಕೊಂಡು ಕೆಎಸ್ ಆರ್‌ಪಿ ವಾಹನದೆಡೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ, ವಿಭಜನೆ ವಿರುದ್ಧ ವಾಟಾಳ್ ಧಿಕ್ಕಾರ ಕೂಗಿದರು.

ನಂತರ ಉಳಿದ ಮುಖಂಡರು ಮನವಿ ಸಲ್ಲಿಸಿದರು. ಮುಖಂಡರಾದ ಎಸ್. ಪನ್ನರಾಜ್, ಎ.ಮಾನಯ್ಯ, ಪಾಟೀಲ, ಕಪ್ಪಗಲ್ ಆಚಾರ್, ದರೂರು ಪುರುಷೋತ್ತಮ ಗೌಡ, ಮುಂಡ್ರಿಗಿ ನಾಗರಾಜ್, ಮೋಹನ್ ಕುಮಾರ್, ಕುಡುತಿನಿ ಶ್ರೀನಿವಾಸ್, ವಿಜಯಕುಮಾರ್, ಶ್ರೀಧರಗೌಡ, ಸಿದ್ಮಲ್ ಮಂಜುನಾಥ್, ಜೆ.ಸತ್ಯಬಾಬು, ಟಿ.ಜಿ.ವಿಠಲ್, ಚಂದ್ರಕುಮಾರಿ ಪಾಲ್ಗೊಂಡಿದ್ದರು‌.

ಬಳ್ಳಾರಿ ವಿಭಜನೆಯನ್ನು ವಿರೋಧಿಸಿ ಬಳ್ಳಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ನೂರಾರು ಮುಖಂಡರು ಬಳ್ಳಾರಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಕುಡುತಿನಿ ಶ್ರೀನಿವಾಸ್ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.