ADVERTISEMENT

ಬಳ್ಳಾರಿ | ವೀರಶೈವ–ಲಿಂಗಾಯತ ಜಂಗಮ ಪರಿಷತ್ ಅಸ್ತಿತ್ವಕ್ಕೆ: ಕೆ.ಎಂ.ಮಹೇಶ್ವರಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:24 IST
Last Updated 17 ಸೆಪ್ಟೆಂಬರ್ 2025, 5:24 IST
ಮಹೇಶ್ವರ ಸ್ವಾಮಿ 
ಮಹೇಶ್ವರ ಸ್ವಾಮಿ    

ಬಳ್ಳಾರಿ: ವೀರಶೈವ ಲಿಂಗಾಯತ ಸಮುದಾಯದ ಏಕತೆಗಾಗಿ ‘ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್’ ಅಸ್ತಿತ್ವಕ್ಕೆ ತರಲಾಗಿದ್ದು, ಸೆ.18ರಂದು ನಗರದ ರಾಘವ ಕಲಾ ಮಂದಿರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಜನಗಣತಿಯಲ್ಲಿ ಅತ್ಯಂತ ಗೊಂದಲ ಸೃಷ್ಟಿಸಲಾಗಿದೆ. ಜನಗಣತಿಯಲ್ಲಿ ವೀರಶೈವ ಜಂಗಮ ಹೆಸರು ಕೈ ಬಿಡಲಾಗಿತ್ತು.  ತಕರಾರು ಸಲ್ಲಿಸಿದ ಬಳಿಕ ವೀರಶೈವ ಜಂಗಮರ ಹೆಸರು ಸೇರ್ಪಡೆಗೊಂಡಿದೆ’ ಎಂದರು. 

‘ಹಿಂದುಳಿದ ವರ್ಗಗಳ ಆಯೋಗದ ಜಾತಿ ಪಟ್ಟಿಯ ಕ್ರಮ ಸಂಖ್ಯೆ 556-ಜಂಗಮ, 1523 ವೀರಶೈವ ಜಂಗಮ/ಜಂಗಮರು, 1525-ವೀರಶೈವ ಲಿಂಗಾಯತ ಜಂಗಮ ಎಂದು ಉಲ್ಲೇಖಿಸಲಾಗಿದೆ. ಈ ಹಿಂದೆ ಜಂಗಮ ಜಾತಿ ಯಾವುದೇ ಗಣತಿಯಲ್ಲಿ ದಾಖಲೆಯಲ್ಲಿ ನಮೂದಾಗಿರಲಿಲ್ಲ.ಈಗ ಗಣತಿಯಲ್ಲಿ ಜಂಗಮ ಹೆಸರು ಸೇರ್ಪಡೆಗೊಂಡಿರುವುದು ಸಮುದಾಯಕ್ಕೆ ಹೆಚ್ಚು ಸಂತಸ ತಂದಿದೆ’ ಎಂದರು. 

ADVERTISEMENT

‘2026ರಲ್ಲಿ ಕೇಂದ್ರ ಸರ್ಕಾರ ಆಯೋಜಿಸುವ ಜಾತಿ ಜನಗಣತಿ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಜಾತಿಗಳ ಪಟ್ಟಿಯಲ್ಲಿ ವೀರಶೈವ ಜಂಗಮ ಹೆಸರನ್ನು ಸೇರಿಸುವುದು ಸೇರಿದಂತೆ ಸಮಸ್ತ ಜಂಗಮರ ಹಿತಾಸಕ್ತಿ ಕಾಪಾಡಲು ಪರಿಷತ್‌ ಶ್ರಮಿಸಲಿದೆ’ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತೀರ್ಮಾನದಂತೆ ಧರ್ಮದ ಕಾಲಂನ 11 ರಲ್ಲಿ ಇತರರು ಎಂದಿದ್ದು ಅದರಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಈ ಬಗ್ಗೆ ಸೆ.19ರಂದು ಹುಬ್ಬಳ್ಳಿಯಲ್ಲಿ ಜರುಗುವ ಸಮಾವೇಶದಲ್ಲಿ ಸೂಕ್ತ ನಿರ್ಣಯಕ್ಕೆ ಬರುವ ಸಾಧ್ಯತೆಯಿದೆ ಎಂದರು.

‘ವೀರಶೈವ ಲಿಂಗಾಯತ ಜಂಗಮರು ಬೇಡ ಜಂಗಮ ಎಂದು ಬರೆಸಬಾರದು’ ಎಂದೂ ಇದೇ ವೇಳೆ ಅವರು ಕಿವಿಮಾತು ಹೇಳಿದರು. 

ಸಮುದಾಯದ ಮುಖಂಡರಾದ ವಿ.ಎಸ್.ಪ್ರಭಯ್ಯಸ್ವಾಮಿ, ಎಚ್.ಕೆ.ಗೌರಿಶಂಕರ ಸ್ವಾಮಿ, ಎರಿಸ್ವಾಮಿ ಎತ್ತಿನಬೂದಿಹಾಳು ಮಠ, ರೇಣುಕಾ ಪ್ರಸಾದ್, ವಾಮದೇವಯ್ಯ, ಕೆ.ಎಂ.ಕೊಟ್ರೇಶ್, ಎಂ.ಕುಮಾರಸ್ವಾಮಿ, ಎಚ್‌.ಎಂ.ಕಿರಣ್ ಕುಮಾರ್, ಶಶಿಧರ್, ಗುರುಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.