ಸಂಡೂರು: ತಾಲ್ಲೂಕಿನ ತೋರಣಗಲ್ಲು ಹೋಬಳಿಯಲ್ಲಿ ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಎಂ.ಗಂಗಲಾಪುರ, ವಿಠಲಾಪುರ ಗ್ರಾಮಗಳ ಹಳ್ಳಗಳು ತುಂಬಿ ಹರಿದಿವೆ. ವಿಠಲಾಪುರ ಗ್ರಾಮದ ಕೆರೆ ಕೋಡಿ ಬಿದ್ದಿದೆ.
ಕುರೆಕುಪ್ಪ, ವಡ್ಡು, ಬನ್ನಿಹಟ್ಟಿ, ತೋರಣಗಲ್ಲು, ವಿಠಲಾಪುರ, ಮೆಟ್ರಿಕಿ, ಯು.ರಾಜಾಪುರ, ಡಿ.ಅಂತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಕುರೆಕುಪ್ಪ ಪಟ್ಟಣದಲ್ಲಿ 8.6 ಸೆಂ.ಮೀ, ವಿಠಲಾಪುರ ಗ್ರಾಮದಲ್ಲಿ 8.8 ಸೆಂ.ಮೀ ಮಳೆ ವರದಿಯಾಗಿದೆ.
ವಿಠಲಾಪುರ ಗ್ರಾಮದ ರೈತ ಹಾಲಪ್ಪ ಅವರ ಜಮೀನಿಗೆ ಮಳೆ ನೀರು ನುಗ್ಗಿ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ. ವಿಠಲಾಪುರ ಗ್ರಾಮದ ಕೆಲ ರೈತರ ಜಮೀನುಗಳಲ್ಲಿನ ಶೇಂಗಾ ಬೆಳೆ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ.
ಕಳೆದ ಒಂದು ವಾರದಿಂದ ಬಿಸಿಲಿನ ವಾತಾವರಣವಿತ್ತು. ಬುಧವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಹತ್ತಿ, ಜೋಳ, ಶೇಂಗಾ, ನವಣೆ ಸೇರಿದಂತೆ ಇತರೆ ಮಳೆಯಾಶ್ರಿತ ಬೆಳೆಗಳಿಗೆ ಅನುಕೂಲ ಆಗಿದ್ದು, ಗ್ರಾಮೀಣ ಭಾಗದ ರೈತರು ಸಂತಸಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.