ADVERTISEMENT

53 ಚಿನ್ನದ ಪದಕ ಹಂಚಿಕೊಂಡ 42 ವಿದ್ಯಾರ್ಥಿಗಳು

ವಿಎಸ್‌ಕೆಯು ಘಟಿಕೋತ್ಸವದಲ್ಲಿ ಡಾ.ಕೆ.ಜೆ.ಬಜಾಜ್‌ ಭಾಷಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 16:22 IST
Last Updated 12 ಜುಲೈ 2023, 16:22 IST
ಪ್ರೊ. ಸಿದ್ದು ಪಿ. ಅಲಗೂರ
ಪ್ರೊ. ಸಿದ್ದು ಪಿ. ಅಲಗೂರ   

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿಎಸ್‌ಕೆಯು) ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ 42 ವಿದ್ಯಾರ್ಥಿಗಳು ಈ ಸಲ 53 ಚಿನ್ನದ ಪದಕಗಳನ್ನು ಹಂಚಿಕೊಂಡಿದ್ದಾರೆ.

ಸ್ನಾತಕ ಪದವಿಯ 51 ಮತ್ತು ಸ್ನಾತಕೋತ್ತರ ಪದವಿಯ 72 ಸೇರಿದಂತೆ ಒಟ್ಟು 123 ವಿದ್ಯಾರ್ಥಿಗಳು ರ್‍ಯಾಂಕ್‌ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ. ವಿವಿಧ ವಿಭಾಗಗಳ 32 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‌.ಡಿ ಪದವಿ ಸ್ವೀಕರಿಸಲಿದ್ದಾರೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್‌ ಓಲೇಕಾರ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಂದಿಹಳ್ಳಿ ಕ್ಯಾಂಪಸ್‌ನ ಖನಿಜ ಸಂಸ್ಕರಣಾ ವಿಭಾಗದ ರುಬಾನ್‌ ಎಲ್‌., ಬಳ್ಳಾರಿ ಕ್ಯಾಂಪಸ್‌ನ ಔದ್ಳೋಗಿಕ ರಸಾಯನ ಶಾಸ್ತ್ರ ವಿಭಾಗದ ಹಜಿರಾಬಿ ಎ., ಕೊಪ್ಪಳ ಗವಿಸಿದ್ದೇಶ್ವರ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ರುಷಬ್‌ ಕುಮಾರ್ ಮೆಹ್ತಾ ತಲಾ ಮೂರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ADVERTISEMENT

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ  ಮೋಹನ್‌ ಕುಮಾರ್ ಆರ್‌.ಜಿ, ಸಮಾಜ ಶಾಸ್ತ್ರದ ಸುಮಾ ಕಾಯಣ್ಣವರ, ಬಳ್ಳಾರಿ ಕ್ಯಾಂಪಸ್‌ನ ರಸಾಯನಶಾಸ್ತ್ರ ವಿಭಾಗದ ಸ್ವಾತಿ ಎ, ಭೌತಶಾಸ್ತ್ರ ವಿಭಾಗದ ಕಾರ್ತಿಕ್‌ ರೆಡ್ಡಿ ಎಚ್‌.ಕೆ. ಮತ್ತು ಹೊಸಪೇಟೆ ವಿಜಯನಗರ ಕಾಲೇಜಿನ ಬಿ.ಎಸ್‌ಸಿ ವಿದ್ಯಾರ್ಥಿನಿ ವಿಶಾಲಾಕ್ಷಿ ತಲಾ ಎರಡು ಚಿನ್ನದ ಪದಕ ಪಡೆದಿದ್ದಾರೆ.

ವಿಶ್ವವಿದ್ಯಾಲಯದ 12,423 ಸ್ನಾತಕ ಹಾಗೂ 1,712 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ರಮೇಶ್ ಓಲೇಕಾರ್ ಹೇಳಿದರು. 

ಪ್ರೊ. ರಮೇಶ್‌ ಓಲೇಕಾರ್‌ 
ಪ್ರೊ. ಎಸ್‌.ಸಿ. ಪಾಟೀಲ
ವಿಎಸ್‌ಕೆಯು ಲಾಂಛನ

ವೇತನ ವ್ಯತ್ಯಾಸ ಪಾವತಿಗೆ ಕ್ರಮ...

ಹೊರ ಗುತ್ತಿಗೆ ನೌಕರರ ವೇತನ ಪಾವತಿಯಲ್ಲಾಗಿರುವ ವ್ಯತ್ಯಾಸದ ಹಣವನ್ನು ವಿಎಸ್‌ಕೆವಿವಿ ಖಾತೆಯಿಂದ ಕೊಡಲು ಅವಕಾಶವಿದ್ದರೆ ಪರಿಶೀಲಿಸಲಾಗುವುದು. ಬಳಿಕ ಗುತ್ತಿಗೆದಾರರಿಂದ ವಸೂಲು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ಪ‍್ರೊ. ಸಿದ್ದು ಪಿ. ಅಲಗೂರ ಭರವಸೆ ನೀಡಿದರು. ವಿಎಸ್‌ಕೆವಿವಿ 11ನೇ ಘಟಿಕೋತ್ಸವ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ಅಧಿಕಾರಾವಧಿ ಮುಗಿಯುವುದರೊಳಗೆ ವೇತನ ವ್ಯತ್ಯಾಸದ ಹಣ ಪಾವತಿಸಲು ಪ್ರಯತ್ನಿಸಲಾಗುವುದು ಎಂದು ಕುಲಪತಿ ಭರವಸೆ ನೀಡಿದರು. ಹೊರ ಗುತ್ತಿಗೆ ನೌಕರರ ವೇತನ ಬಾಕಿಯನ್ನು ಸದ್ಯಕ್ಕೆ ಸ್ವಲ್ಪ ‍‍ಪ್ರಮಾಣದಲ್ಲಿ ಪಾವತಿ ಮಾಡಲಾಗುವುದು. ಉಳಿಕೆ ಮೊತ್ತವನ್ನು ಹಳೇ ಗುತ್ತಿಗೆದಾರರಿಂದ ವಸೂಲು ಮಾಡಿ ಕೊಡಲಾಗುವುದು ಎಂದು ಕುಲಪತಿ ಸ್ಪಷ್ಟಪಡಿಸಿದರು. ಹೊರ ಗುತ್ತಿಗೆ ನೌಕರರಿಗೆ ಒಂದು ತಿಂಗಳ ವೇತನ ಬಾಕಿ ಪಾವತಿಸಲಾಗಿದೆ. ಉಳಿಕೆ ಬಾಕಿ್ಗೆ ವಿವಿ ಹಣಕಾಸು ಅಧಿಕಾರಿಗೆ ಪತ್ರ ಬರೆಯಲಾಗಿದ್ದು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಇದಕ್ಕೂ ಮೊದಲು ಕುಲಸಚಿವ ಪ್ರೊ. ಎಸ್‌.ಸಿ. ಪಾಟೀಲ ಹೇಳಿದರು. ಹೊರ ಗುತ್ತಿಗೆ ನೌಕರರ ವೇತನ ಪಾವತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿಚಾರಣೆಗೆ ವಿಎಸ್‌ಕೆವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ಪ್ರೊ. ಜಯಪ್ರಕಾಶ್‌ ಗೌಡರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ 2022ರ ಅಕ್ಟೋಬರ್‌ ತಿಂಗಳಲ್ಲಿ ವರದಿ ಸಲ್ಲಿಸಿದೆ. ಅಲ್ಲಿಂದ ಇಲ್ಲಿವರೆಗೂ ಹೊರಗುತ್ತಿಗೆ ನೌಕರರಿಗೆ ವೇತನ ವ್ಯತ್ಯಾಸದ ಬಾಕಿ ಪಾವತಿಯಾಗಿಲ್ಲ ಎಂಬ ಟೀಕೆಗಳು ಕೇಳಿಬಂದಿವೆ.

ಕೇಂದ್ರದ ನಿರ್ಧಾರ ಪಾಲಿಸಬೇಕು... ಹೊಸ ಶಿಕ್ಷಣ ನೀತಿ ಅನುಷ್ಠಾನದ ವಿಷಯದಲ್ಲಿ ಕೇಂದ್ರ ಸರ್ಕಾರ ಗಟ್ಟಿ ನಿರ್ಧಾರ ಕೈಗೊಂಡರೆ ರಾಜ್ಯ ಸರ್ಕಾರ ಅದನ್ನು ಪಾಲಿಸಬೇಕಾಗುತ್ತದೆ ಎಂದು ಕುಲ‍ಪತಿ ಪ್ರೊ. ಸಿದ್ದು ಪಿ. ಅಲಗೂರ ಹೇಳಿದರು. ಹೊಸ ಶಿಕ್ಷಣ ನೀತಿ ಕೈಬಿಡುವ ಕುರಿತ ರಾಜ್ಯ ಸರ್ಕಾರದ ನಿಲುವು ಕುರಿತು ಕೇಳಿದ ಪ್ರಶ್ನೆಗೆ ಕುಲಪತಿ ಉತ್ತರಿಸಿದರು. ಕೇಂದ್ರ ಈ ಬಗ್ಗೆ ಗಟ್ಟಿ ತೀರ್ಮಾನ ಕೈಗೊಂಡರೆ ರಾಜ್ಯಗಳು ಅನುಸರಿಸಬೇಕಾಗುತ್ತದೆ ಎಂದರು. ಹೊಸ ಶಿಕ್ಷಣ ನೀತಿ ಕುರಿತು ಚರ್ಚಿಸಲು ಉನ್ನತ ಶಿಕ್ಷಣ ಸಚಿವರು ಸಭೆ ಕರೆದಿದ್ದರು. ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಪಾಲ್ಗೊಂಡರು. ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಇನ್ನು ನಿರ್ಧಾರವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.      

ಐಸಿಎಸ್‌ಎಸ್‌ಆರ್‌ ಅಧ್ಯಕ್ಷರ ಭಾಷಣ

ವಿಎಸ್‌ಕೆಯು ಬಯಲು ರಂಗಮಂದಿರದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಗೆ ಐಸಿಎಸ್‌ಎಸ್‌ಆರ್‌ ಅಧ್ಯಕ್ಷ ‍ಪ್ರೊ.ಜೆ.ಕೆ.ಬಜಾಜ್‌ 11ನೇ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಅಧ್ಯಕ್ಷತೆ ವಹಿಸುವರು. ಕುಲಪತಿ ಪ್ರೊ. ಸಿದ್ದು.ಪಿ.ಅಲಗೂರ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ‍ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.