ADVERTISEMENT

‘ಫೇಸ್‌ಬುಕ್‌ ಯುದ್ಧೋತ್ಸಾಹ’ಕ್ಕೆ ತಣ್ಣೀರು!

ಸೈನ್ಯಕ್ಕೆ ಸೇರುವ, ಯುದ್ಧ ಮಾಡುವ ದಿಢೀರ್‌ ನಿರ್ಧಾರಕ್ಕೆ ಟೀಕೆ

ಕೆ.ನರಸಿಂಹ ಮೂರ್ತಿ
Published 18 ಫೆಬ್ರುವರಿ 2019, 5:11 IST
Last Updated 18 ಫೆಬ್ರುವರಿ 2019, 5:11 IST
   

ಬಳ್ಳಾರಿ: ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆಸಿದವರ ವಿರುದ್ಧ ಫೇಸ್‌ಬುಕ್‌ನಲ್ಲಿ ಹಲವರು ವ್ಯಕ್ತಪಡಿಸುತ್ತಿರುವ ಆಕ್ರೋಶ ತುಂಬಿದ ‘ಯುದ್ಧೋತ್ಸಾಹ’ವು ವ್ಯಾಪಕ ಟೀಕೆ, ವ್ಯಂಗ್ಯಕ್ಕೆ ಒಳಗಾಗಿದೆ. ಇದೇ ವೇಳೆ, ರಾಜಕಾರಣಿಗಳ ಕಾರ್ಯವೈಖರಿ ಕುರಿತೂ ಅಸಮಾಧಾನ ವ್ಯಕ್ತವಾಗಿದೆ.

‘ಪಾಕಿಸ್ತಾನದ ಮೇಲೆ ಕೂಡಲೇ ಯುದ್ಧ ಶುರು ಮಾಡಿಬಿಡಬೇಕು ಎಂದು ಬಾಯಿಬಡಿದುಕೊಳ್ಳುತ್ತಿರುವ ಮೂರ್ಖರು ಯುದ್ಧಭೂಮಿಯಲ್ಲಿ ಕಾದಾಡಬೇಕಾದ ಯೋಧರ ಸ್ಥಾನದಲ್ಲಿ ಮೊದಲು ತಮ್ಮ ತಂದೆ, ಅಣ್ಣ, ತಮ್ಮನನ್ನೋ, ಹತ್ತಿರದ ಬಂಧುವನ್ನೋ ಒಂದು ಕ್ಷಣ ಕಲ್ಪಿಸಿಕೊಳ್ಳಲಿ’ ಎಂದು ವಿ.ಎಲ್‌.ನರಸಿಂಹಮೂರ್ತಿ ಶನಿವಾರ ತಮ್ಮ ವಾಲ್‌ನಲ್ಲಿ ಬರೆದುಕೊಂಡಿದ್ದರು.

‘ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಹೇಳಿದ್ದರೆನ್ನಲಾದ ‘ಯಾರಿಗೆ ರಾಜಕಾರಣ ಮಾಡಲು ಆಸಕ್ತಿ ಇದೆಯೋ ಅವರಿಗೆ ಐದು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸುವಂಥ ಕಡ್ಡಾಯ ನಿಯಮ ಜಾರಿಗೊಳಿಸಬೇಕು. ದೇಶ ಶೇ 80ರಷ್ಟು ಹಾಳಾಗಿದ್ದು ದುಷ್ಟ ರಾಜಕಾರಣಿಗಳಿಂದ, ಅವರಿಗೂ ತಿಳಿಯಲಿ ಸೈನಿಕರ ಕಷ್ಟ ಏನು ಅಂತ’ ಎಂಬ ಮಾತನ್ನು ಹಲವರು ಶೇರ್‌ ಮಾಡಿದ್ದರು.

ADVERTISEMENT

‘ಯುದ್ಧ ಮಾಡುವುದೇ ದೇಶಾಭಿಮಾನ ಎನ್ನುವ ಮೂರ್ಖರಿಗೆ ಯುದ್ಧ ಏನೆಂದರೇನೆಂದೇ ಗೊತ್ತಿರುವುದಿಲ್ಲ. ಒಂದು ಯುದ್ಧ ನಡೆದರೆ ದೇಶವೊಂದು ಅನುಭವಿಸುವ ಕಷ್ಟ– ನಷ್ಟಗಳು, ಸೈನಿಕರ ಜೀವಹಾನಿಗಳು ಕಡಿಮೆಯೇನಲ್ಲ. ಯುದ್ಧದಲ್ಲಿ ಗೆದ್ದವನು ಸೋತ, ಸೋತವನು ಸತ್ತ ಎಂಬ ಗಾದೆ ಸುಮ್ಮನೇ ಹುಟ್ಟಿಕೊಂಡಿದ್ದಲ್ಲ’ ಎಂದು ಲೇಖಕ ಹರ್ಷಕುಮಾರ ಕುಗ್ವೆ ಪ್ರತಿಪಾದಿಸಿದ್ದರು.

‘ಯಾರ ಅಣ್ಣ ತಮ್ಮಂದಿರು, ಯಾರ ಮಕ್ಕಳು, ಯಾರ ಪತಿ ಸೈನ್ಯದಲ್ಲಿ ಇದ್ದಾರೋ ಅವರಿಗೆ ಯುದ್ಧ ಬೇಡ, ಯಾರಿಗೆ
ತಮ್ಮಂತೆ ಎಲ್ಲರ ಜೀವ ಮುಖ್ಯವೋ ಅವರೂ ಯುದ್ಧ ಬಯಸುವುದಿಲ್ಲ’ ಎಂದು ನಿವೃತ್ತ ಬ್ಯಾಂಕ್‌ ಅಧಿಕಾರಿ ಮಾಲೂರು ವೆಂಕಟಸ್ವಾಮಿ
ಅಭಿಪ್ರಾಯ ದಾಖಲಿಸಿದ್ದರು.

‘ಸೈನಿಕರ ಕುಟುಂಬಗಳ ಸಾವು ನೋವು ಯಾರಿಗೂ ಬೇಕಾಗಿಲ್ಲ. ಎಲ್ಲರಿಗೂ ಬೇಕಾಗಿರುವುದು ತಮ್ಮ ನಾಲಿಗೆಯ ತೀಟೆ ತೀರಿಸಿಕೊಳ್ಳುವುದು. ಯುದ್ಧ ಸಾರಿಬಿಡಿ ಎಂಬ ಬೀಸು ಹೇಳಿಕೆಗಳು. ಸಾಯುವ ಯೋಧರು ಇವರ ಮನೆಯವರಲ್ಲವಲ್ಲಾ’ ಎಂದು ಚಿತ್ರ ನಿರ್ದೇಶಕ ಮನ್‌ಸೋ ರೇ ವಿಷಾದಿಸಿದ್ದರು.

‘ಯುದ್ಧಕ್ಕೆ ರೋಷಾವೇಶದಿಂದ ಕರೆ ಕೊಡುವ ಯಾರ ಮಕ್ಕಳೂ ಸೇನೆಯಲ್ಲಿರುವುದಿಲ್ಲ’ ಎಂದು ಲೇಖಕ ಸನತ್‌ಕುಮಾರ್‌ ಬೆಳಗಲಿ ಪೋಸ್ಟ್‌ ಮಾಡಿದ್ದರು.

‘ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ದುರ್ಬುದ್ಧಿ ಬೇಡ’ ಎಂದು ಉಪನ್ಯಾಸಕ ಮಂಜುನಾಥ ಸಿ.ನೆಟ್ಕಲ್ ವಾಲ್‌ನಲ್ಲಿ ಬರೆದುಕೊಂಡಿದ್ದರು.

ಇವೆಲ್ಲವುಗಳ ಜೊತೆಗೆ, ಸೈನಿಕರ ತ್ಯಾಗಬಲಿದಾನಗಳ ಸ್ಮರಣೆ ಕುರಿತ ಪೋಸ್ಟ್‌ಗಳೂ ಫೇಸ್‌ಬುಕ್‌ನಲ್ಲಿ ತುಂಬಿದ್ದವು.

ವ್ಯಂಗ್ಯಚಿತ್ರದ ಮುಳ್ಳು!

ಫೇಸ್‌ಬುಕ್‌ ಬಳಕೆದಾರರ ದಿಢೀರ್‌ ಯುದ್ಧೋತ್ಸಾಹವನ್ನು ಟೀಕಿಸಲು ಬಹಳ ಮಂದಿ ಶನಿವಾರ ಹಲವು ವ್ಯಂಗ್ಯಚಿತ್ರಗಳನ್ನೂ ಪೋಸ್ಟ್‌ ಮಾಡಿದ್ದರು.

ಹೆದರಿಕೊಂಡು ಕಬೋರ್ಡ್‌ ಒಳಗೆ ಬಚ್ಚಿಟ್ಟುಕೊಂಡಿರುವ ಪತಿಯನ್ನು ಕುರಿತು ಪತ್ನಿಯು, ‘ಫೇಸ್‌ಬುಕ್‌ನಲ್ಲಿ ನಿಮ್ಮ ಶೌರ್ಯವನ್ನು ಕಂಡ ಸೇನೆ ನಿಮ್ಮನ್ನು ನೇಮಕ ಮಾಡಿಕೊಳ್ಳಲು ಬಂದಿದೆ’ ಎಂದು ಹೇಳುತ್ತಿರುವ ಇಂಗ್ಲಿಷ್‌ ವ್ಯಂಗ್ಯಚಿತ್ರವನ್ನು ಹೆಚ್ಚು ಮಂದಿ ಶೇರ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.