ADVERTISEMENT

ಸಿರುಗುಪ್ಪ: ಬೇಸಿಗೆ ಮುನ್ನವೇ ನೀರಿನ ಅಭಾವ

ಭೈರಗಾಮದಿನ್ನೆ: ನೀರಿಗಾಗಿ ಕಾದು ಕುಳಿತ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 5:29 IST
Last Updated 3 ಜನವರಿ 2026, 5:29 IST
ಸಿರುಗುಪ್ಪ ತಾಲ್ಲೂಕಿನ ಬೀರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರಗಾಮದಿನ್ನೆ ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆಯಿಂದ ನೇರವಾಗಿ ಬರುವ ಕೊಳಾಯಿ ಮುಂದೆ ನೀರು ಹಿಡಿಯಲು ಹರಸಾಹಸ ಮಾಡುತ್ತಿರುವ ಜನರು
ಸಿರುಗುಪ್ಪ ತಾಲ್ಲೂಕಿನ ಬೀರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರಗಾಮದಿನ್ನೆ ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆಯಿಂದ ನೇರವಾಗಿ ಬರುವ ಕೊಳಾಯಿ ಮುಂದೆ ನೀರು ಹಿಡಿಯಲು ಹರಸಾಹಸ ಮಾಡುತ್ತಿರುವ ಜನರು   

ಸಿರುಗುಪ್ಪ: ತಾಲ್ಲೂಕಿನ ಬೀರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರಗಾಮದಿನ್ನೆ ಗ್ರಾಮದಲ್ಲಿ ಬೇಸಿಗೆಗೂ ಮುನ್ನವೇ ನೀರಿನ ಅಭಾವ ಎದುರಾಗಿದ್ದು, ಕುಡಿಯುವ ಮತ್ತು ದಿನ ಬಳಕೆಯ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆ ಬರಲು ಮೂರು ತಿಂಗಳು ಇರುವಾಗಲೇ ಕುಡಿಯುವ ನೀರಿನ ಸಮಸ್ಯೆಯು ಎದುರಾಗಿರುವುದರಿಂದ, ಮಾರ್ಚ್– ಏಪ್ರಿಲ್‌ ತಿಂಗಳಲ್ಲಿ ಸಮಸ್ಯೆ ಇನ್ನಷ್ಟು ಕಾಡಬಹುದು ಎಂ ಆತಂಕ ಎದುರಾಗಿದೆ.

ಕೊತ್ತಲಚಿಂತ ಗ್ರಾಮದ ಹತ್ತಿರ ಇರುವ ಕುಡಿಯುವ ನೀರಿನ ಕೆರೆಯಿಂದ ಭೈರಗಾಮದಿನ್ನೆ ಗ್ರಾಮಕ್ಕೆ 20 ದಿನಗಳಿಂದ ನೀರು ಸರಬರಾಜು ಆಗಿಲ್ಲ. ನೇರವಾಗಿ ಕೆರೆಯಿಂದ ಇರುವ ಕೊಳಾಯಿ ಮುಂದೆ ಕಾದುಕುಳಿತು ನೀರು ಹಿಡಿದುಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ. ಗ್ರಾಮದಲ್ಲಿ ಎರಡು ಮೂರು ತಿಂಗಳ ಹಿಂದೆ ನೀರು ಸಂಗ್ರಹಿಸುವ ಟ್ಯಾಂಕ್‌ ನಿರ್ಮಿಸಿದರೂ ಪ್ರಯೋಜನವಾಗಿಲ್ಲ. ಅದರಿಂದ ನೀರು ಸರಬರಾಜು ಆಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

ಜನ, ಜಾನುವಾರುಗಳ ದಾಹ ನೀಗಿಸುವ ನೀರಿನ ಸರಬರಾಜು ಯೋಜನೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಡೆದು ತುರ್ತಾಗಿ ನೀರು ಒದಗಿಸುವಂತಾಗಲಿ ಮತ್ತು ಅಲ್ಲಿಯ ಗ್ರಾಮದ ಜನರಿಗೆ ಮತ್ತೊಂದು ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲಿ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ನಾಗರಿಕರ ಒಕ್ಕೊರಲ ಒತ್ತಾಯ.

ಪ್ರತಿವರ್ಷ ಕೆರೆಗಳ ಮೇಲುಸ್ತುವಾರಿ ಮತ್ತು ದುರಸ್ತಿಗೆ ಹಣ ಬಿಡುಗಡೆಯಾಗುತ್ತಿದ್ದರೂ, ಇಲ್ಲಿನ ಕೆರೆ ಬೇಲಿ, ಕಂಟಿಗಳಿಂದ ಕೂಡಿದ್ದು ಸ್ಮಶಾನದ ಅವಸ್ಥೆಯನ್ನು ಪಡೆದುಕೊಂಡಿದೆ. ಇತ್ತೀಚೆಗೆ ಉದ್ಘಾಟನೆಯಾಗಿರುವ ಗ್ರಾಮದ ಒಂದು ಲಕ್ಷ ಲೀಟರ್ ನೀರಿನ ಸಾಮರ್ಥ್ಯದ ಟ್ಯಾಂಕ್ ಈಗಲೇ ಸೋರುತ್ತಿದೆ. ಕೆಲ ಓಣಿಗಳಿಗೆ ನೀರೇ ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಗ್ರಾಮದ ಜನರಿಗೆ, ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ತಲೆದೋರಿದೆ’ ಎಂದು ಕಾರಂತ ರಂಗಲೋಕ ಸಂಸ್ಥೆ ರಂಗ ಸಂಶೋಧಕ ಹಾಗೂ ಕಾರ್ಯದರ್ಶಿ ಆರ್.ಪಿ. ಮಂಜುನಾಥ್ ಬಿ.ಜಿ.ದಿನ್ನೆ ಹೇಳಿದರು.

‘ಕೆರೆಯ ಫಿಲ್ಟರ್ ಟ್ಯಾಂಕ್‌ಗಳ ಸ್ವಚ್ಛತೆ ಕಾರ್ಯ ನಡೆದಿದ್ದು, ಮೂರು ದಿನಗಳಲ್ಲಿ ಗ್ರಾಮಕ್ಕೆ ನೀರು ಒದಗಿಸುವುದಾಗಿ ಬೀರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈರಣ್ಣ ತಿಳಿಸಿದ್ದಾರೆ’ ಎಂದು ಬೀರಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಂದ್ರ ತಿಳಿಸಿದರು.

3 ಕಿ.ಮೀ. ದೂರದಲ್ಲಿರುವ ಕುಡಿಯುವ ನೀರಿನ ಕೆರೆಗೆ ಗಾಡಿ ಮತ್ತು ತಳ್ಳುವ ಬಂಡಿ ತೆಗೆದುಕೊಂಡು ಹೋಗಿ ನೀರು ತರುವಂತಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀರಿನ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೆರೆಯ ಸ್ವಚ್ಛತೆ ಶುದ್ಧೀಕರಣ ಘಟಕದಲ್ಲಿ ಕಾಮಗಾರಿ ನಡೆಯುವುದರಿಂದ ನೀರು ಸರಬರಾಜು ವಿಳಂಬವಾಗಿದೆ. ಕೆಲಸ ಮುಗಿದ ನಂತರ ನೀರು ಸರಬರಾಜು ಮಾಡಲಾಗುವುದು
–ಪವನಕುಮಾರ್‌, ತಾಲ್ಲೂಕು ಪಂಚಾಯಿತಿ ಇ.ಒ. ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.