ADVERTISEMENT

ಬಳ್ಳಾರಿ: ಇಬ್ಬರು ಸಚಿವರಿಂದ ಜಿಲ್ಲೆಗೆ ಆಗಿದ್ದೇನು?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಜುಲೈ 2019, 19:48 IST
Last Updated 25 ಜುಲೈ 2019, 19:48 IST
ಪಿ.ಟಿ. ಪರಮೇಶ್ವರ ನಾಯ್ಕ
ಪಿ.ಟಿ. ಪರಮೇಶ್ವರ ನಾಯ್ಕ   

ಹೊಸಪೇಟೆ: ಕಾಂಗ್ರೆಸ್‌–ಜೆ.ಡಿ.ಎಸ್‌. ಸಮ್ಮಿಶ್ರ ಸರ್ಕಾರದ ಪತನದೊಂದಿಗೆ ಎಂಟು ತಿಂಗಳ ಹಿಂದೆಯಷ್ಟೇ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಪಿ.ಟಿ. ಪರಮೇಶ್ವರ ನಾಯ್ಕ ಹಾಗೂ ಈ. ತುಕಾರಾಂ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.

ಸತತ ಮೂರು ಸಲ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ತುಕಾರಾಂ ಅವರು ಎಸ್ಟಿ ಕೋಟಾದಡಿ ವೈದ್ಯಕೀಯ ಸಚಿವರಾಗಿ, ನಾಲ್ಕು ಬಾರಿ ಜಯಿಸಿರುವ ಪರಮೇಶ್ವರ ನಾಯ್ಕ ಅವರು ಕೌಶಲ ಮತ್ತು ಮುಜರಾಯಿ ಖಾತೆ ಸಚಿವರಾಗಿದ್ದರು. ತುಕಾರಾಂ ಅವರಿಗೆ ಮೊದಲ ಸಲ ಸಚಿವರಾಗುವ ಅವಕಾಶ ಒಲಿದು ಬಂದರೆ, ಪರಮೇಶ್ವರ ನಾಯ್ಕ ಅವರು ಎರಡನೇ ಸಲ ಮಂತ್ರಿಯಾಗಿದ್ದರು. ಇನ್ನಷ್ಟೇ ಇಬ್ಬರೂ ಅವರ ಖಾತೆಗಳ ಬಗ್ಗೆ ತಿಳಿದುಕೊಂಡು, ಕೆಲಸ ಮಾಡಬೇಕು ಅನ್ನುವಷ್ಟರಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

ಅಂದಹಾಗೆ, ಎಂಟು ತಿಂಗಳ ಕಿರು ಅವಧಿಯಲ್ಲಿ ಈ ಇಬ್ಬರು ಸಚಿವರಿಂದ ಜಿಲ್ಲೆಗೆ ಆಗಿದ್ದೇನು? ಕಾಂಗ್ರೆಸ್‌ ಪಕ್ಷಕ್ಕೆ ಆಗಿದ್ದೇನು?

ADVERTISEMENT

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದರೆ ಜಿಲ್ಲೆಗೆ ಹಾಗೂ ಅವರು ಪ್ರತಿನಿಧಿಸುವ ಪಕ್ಷಕ್ಕೆ ಹೆಚ್ಚೇನೂ ಪ್ರಯೋಜನವಾಗಿಲ್ಲ. ವಿಮ್ಸ್‌ನಲ್ಲಿ ಎಂ.ಆರ್‌.ಐ. ಸ್ಕ್ಯಾನಿಂಗ್‌ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿರುವುದು ಬಿಟ್ಟರೆ ತುಕಾರಾಂ ಅವರಿಂದ ಬೇರೇನೂ ಕೆಲಸವಾಗಿಲ್ಲ. ಇನ್ನೊಂದೆಡೆ ಪರಮೇಶ್ವರ ನಾಯ್ಕ ಅವರು ಹೂವಿನಹಡಗಲಿಯಲ್ಲಿ ₹27.50 ಕೋಟಿ ವೆಚ್ಚದಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಕ್ಕೆ ಇತ್ತೀಚೆಗೆ ಚಾಲನೆ ಕೊಟ್ಟಿದ್ದಾರೆ. ಅದನ್ನು ಹೊರತುಪಡಿಸಿದರೆ ಬೇರೇನೂ ಆಗಿಲ್ಲ.

ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸಚಿವರಿಬ್ಬರೂ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಸಂಡೂರಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಿಕ್ಕರೆ, ಹೂವಿನಹಡಗಲಿಯಲ್ಲಿ ಪಕ್ಷವು 14 ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆ ಗಳಿಸಿತು. ಈ ಹಿಂದಿನ ಚುನಾವಣೆಗಳಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 30 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಪಡೆದಿತ್ತು. ಅಲ್ಲದೇ ಇಬ್ಬರೂ ಜಿಲ್ಲೆಯಾದ್ಯಂತ ಓಡಾಡಿ ಪಕ್ಷ ಸಂಘಟಿಸುವ ಕೆಲಸವೂ ಮಾಡಲಿಲ್ಲ ಎಂಬ ಆರೋಪವಿದೆ. ಅದರಲ್ಲೂ ಗಣಿನಾಡಿನಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ತುಕಾರಾಂ ಮಾಡಲಿಲ್ಲ ಎನ್ನುವ ಆರೋಪವಿದೆ.

‘ಕಮತ್ತೂರು ಸೇರಿದಂತೆ ಸಂಡೂರಿನ ಹಲವೆಡೆ ಜನ ಗಣಿ ದೂಳಿನಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲಿನ ಆರೋಗ್ಯ ಉಪಕೇಂದ್ರಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಬೇಕು. ಸಂಡೂರು–ಹೊಸಪೇಟೆ ನಡುವೆ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಬೇಕು. ಒಂದುವೇಳೆ ಅದು ಸಾಧ್ಯವಾಗದಿದ್ದರೆ ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಯಲ್ಲಿ ಬಡವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕೆಂದು ಕೇಳಿಕೊಂಡಿದ್ದೆವು. ಅದು ಕೂಡ ಮಾಡಲಿಲ್ಲ’ ಎಂದು ಜನಸಂಗ್ರಾಮ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಆಲ್ದಳ್ಳಿ ತಿಳಿಸಿದರು.

‘ಪಟ್ಟಣದಲ್ಲಿ ಒಳಚರಂಡಿ ನಿರ್ಮಿಸಬೇಕು ಎನ್ನುವುದು ಸುಮಾರು 20 ವರ್ಷಗಳ ಬೇಡಿಕೆ ಇದೆ. ಅದಕ್ಕೆ ಚಾಲನೆ ಸಿಕ್ಕಿಲ್ಲ. ಬೀದಿಗೆ ಬಿದ್ದಿರುವ ಸಾವಿರಾರು ಜನ ಗಣಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ದೊರಕಿಸಿಕೊಡುವ ಬೇಡಿಕೆಯೂ ಈಡೇರಿಲ್ಲ’ ಎಂದರು.

‘ಸಿಂಗಟಾಲೂರು ಯೋಜನೆ ಅಡಿ ಕಿರುಗಾಲುವೆ, ಹೊಲಗಾಲುವೆಗಳ ಕೆಲಸ ನನೆಗುದಿಗೆ ಬಿದ್ದಿದೆ. ತಾಲ್ಲೂಕಿನಲ್ಲಿ ವಸತಿ ರಹಿತರು ಸಾಕಷ್ಟು ಜನ ಇದ್ದಾರೆ. ಅವರಿಗೆ ನಿವೇಶನ ಕೊಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದರೆ, ಆ ನಿಟ್ಟಿನಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಪರಮೇಶ್ವರ ನಾಯ್ಕ ಅವರು ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಬಹುದಿತ್ತು’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಬಸವರಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.