
ತೆಕ್ಕಲಕೋಟೆ: ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕೋಟ್ಯಾಂತರ ವೆಚ್ಚದ ಕಟ್ಟಡ ಕಾಮಗಾರಿ ಪೂರ್ಣಗೊಂಡು ಎಂಟರಿಂದ ಹತ್ತು ತಿಂಗಳು ಕಳೆದಿದೆ. ಆದರೂ ವಸತಿ ನಿಲಯ ಇನ್ನೂ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದೆ.
ಪಟ್ಟಣದ 1ನೇ ವಾರ್ಡಿನ ಗೊರವರ ಓಣಿಯಲ್ಲಿನ ಖಾಸಗಿ ಕಟ್ಟಡದಲ್ಲಿ ಮಾಸಿಕ ₹69 ಸಾವಿರ ಅಂದರೆ ವಾರ್ಷಿಕ ₹8.48 ಲಕ್ಷ ಬಾಡಿಗೆ ಆಧಾರದ ಮೇಲೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯ ನಡೆಯುತ್ತಿದೆ.
ವಸತಿ ನಿಲಯದಲ್ಲಿ ಉಪ್ಪಾರ ಹೊಸಳ್ಳಿ, ಬಲಕುಂದಿ, ಬಂಡ್ರಾಳ್, ಗೋನಾಳು, ಸಿರಿಗೇರಿಕ್ರಾಸ್, ಕೂರಿಗನೂರು, ಸಿರುಗುಪ್ಪ, ಮೋಕ, ದಡೇಸೂಗೂರು ಸೇರಿದಂತೆ ಗ್ರಾಮೀಣ, ನಗರ ಪ್ರದೇಶಗಳ ವಿದ್ಯಾರ್ಥಿನಿಯರು ಇದ್ದಾರೆ. ಪಿಯುಸಿ, ಪದವಿ, ಡಿಪ್ಲೋಮ ಅಲ್ಲದೆ ಡಿಇಡಿ ವ್ಯಾಸಂಗ ಮಾಡುತ್ತಿರುವ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ.
ಈಗಿರುವ ಬಾಲಕಿಯರ ವಸತಿ ನಿಲಯದಲ್ಲಿ 90 ವಿದ್ಯಾರ್ಥಿನಿಯರಿಗೆ ಅವಕಾಶ ಇದೆ. ಆದರೆ ಇಲ್ಲಿ 105ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. ಮಕ್ಕಳಿಗೆ ಹಾಸ್ಟಲ್ ವ್ಯವಸ್ಥೆ ಸಿಗದೆ ವಾಪಾಸ್ಸು ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಹಲವಾರು ವಿದ್ಯಾರ್ಥಿನಿಯರು ವಸತಿ ನಿಲಯದ ಸೌಲಭ್ಯವಿಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಪಾಳುಬಿದ್ದ ಹೊಸ ಕಟ್ಟಡ: ಪಟ್ಟಣದ ಜೆಸ್ಕಾಂ ಕಚೇರಿ ಹಿಂಭಾಗದ ಕರ್ನಾಟಕ ಗೃಹ ಮಂಡಳಿಯ ಕಾಲೋನಿ (ಸಿ. ಎ. ನಿವೇಶನ)ಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದ ₹2.70 ಕೋಟಿ ವೆಚ್ಚದ ಕಾಮಗಾರಿಯನ್ನು 2022ರಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಆರಂಭಸಿತ್ತು.
ಕಟ್ಟಡ ಈ ವರ್ಷದ ಜನವರಿಯಲ್ಲಿ ಹಸ್ತಾಂತರಗೊಳ್ಳುತ್ತದೆ ಎನ್ನಲಾಗಿತ್ತು. ಆದರೆ, ಈ ವರೆಗೆ ಆಗಿಲ್ಲ. ಕಟ್ಟಡದಲ್ಲಿ ಯಾವುದೇ ಸಣ್ಣ ಪುಟ್ಟ ಕೆಲಸಗಳೂ ಆಗುತ್ತಿಲ್ಲ. ಕಟ್ಟಡ ಕಾಮಗಾರಿ ಮುಗಿದಿದ್ದರೂ ಎಲ್ಲೆಂದರಲ್ಲಿ ಅಳಿದುಳಿದ ಸಾಮಗ್ರಿ ಹಾಕಿ ಗೋದಾಮು ಮಾಡಲಾಗಿದೆ. ಕಟ್ಟಡದ ಮೇಲ್ಭಾಗದ ನೀರಿನ ಟ್ಯಾಂಕ್‌ಗಳು ಗಾಳಿಗೆ ಹಾರಿ ಹೋಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ನಿಲಯದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಸ್ನಾನಗೃಹ ಇಲ್ಲ ಎಂದು ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿನಿಯರು ದೂರಿದರು.
ಕಟ್ಟಡದಲ್ಲಿ ಇನ್ನೂ ಸಣ್ಣ ಪುಟ್ಟ ಕೆಲಸಗಳು ಬಾಕಿ ಇದೆ. ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸುವಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್)ಗೆ ಪತ್ರ ಬರೆಯಲಾಗಿದೆ– ಜಲಾಲಪ್ಪ ಸಹಾಯಕ ನಿರ್ದೇಶಕ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.