ADVERTISEMENT

‘ದೆವ್ವದಂತೆ ವಕ್ಕರಿಸಿತು ಬಿಳಿ ಬಸ್ಸು’: ಅಪಘಾತದಲ್ಲಿ ಬದುಕುಳಿದವರ ಮಾತು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಏಪ್ರಿಲ್ 2019, 6:39 IST
Last Updated 26 ಏಪ್ರಿಲ್ 2019, 6:39 IST
ಅಪಘಾತದ ವಿಷಯ ತಿಳಿದು ರಾಷ್ಟ್ರೀಯ ಹೆದ್ದಾರಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು
ಅಪಘಾತದ ವಿಷಯ ತಿಳಿದು ರಾಷ್ಟ್ರೀಯ ಹೆದ್ದಾರಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು   

ಹೊಸಪೇಟೆ: ‘ಆಗಷ್ಟೇ ಎಲ್ಲರೂ ಮನೆಯಿಂದ ಕೆಲಸಕ್ಕೆ ಹೊರಡುತ್ತಿದ್ದೆವು. ಒಬ್ಬೊಬ್ಬರು ಒಂದೊಂದು ವಿಚಾರ ಮಾತಾಡುತ್ತ ನಗುತ್ತ, ಹರಟುತ್ತಿದ್ದೆವು. ಒಮ್ಮೆಲೆ ದೆವ್ವದಂತೆ ವಕ್ಕರಿಸಿ ಬಂದ ಬಿಳಿ ಬಸ್ಸು ಎಲ್ಲರನ್ನೂ ರಕ್ತದ ಮಡುವಿನಲ್ಲಿ ಬೀಳುವಂತೆ ಮಾಡಿತು...’

ತಾಲ್ಲೂಕಿನ ಹಾರುವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೊಣಕಾಲು, ಭುಜಕ್ಕೆ ತೀವ್ರ ಗಾಯವಾಗಿ, ನರಳಾಡುತ್ತ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿಲಕನಹಟ್ಟಿಯ ಬೊಮ್ಮಪ್ಪ ಅವರ ಮಾತುಗಳಿವು.

ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ತಾಲ್ಲೂಕಿನ ಬಸವನದುರ್ಗ ಕೆರೆಯಲ್ಲಿ ಹೂಳೆತ್ತುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಆ ಕೆಲಸಕ್ಕೆಬೊಮ್ಮಪ್ಪ ಸೇರಿದಂತೆ ಚಿಲಕನಹಟ್ಟಿಯ ಒಟ್ಟು 40 ಜನ ಕಾರ್ಮಿಕರು ಗುರುವಾರ ಬೆಳಿಗ್ಗೆ ಆರು ಗಂಟೆಗೆ ಟ್ರಾಕ್ಟರ್‌ನಲ್ಲಿ ಬಸವನದುರ್ಗ ಕೆರೆಗೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಅತಿ ವೇಗದಲ್ಲಿ ಬಂದ ಬೆಂಗಳೂರು–ಗಂಗಾವತಿ ಸ್ಲೀಪರ್‌ ಕೋಚ್‌ ಬಸ್‌ ಡಿಕ್ಕಿ ಹೊಡೆದಿದೆ. ಇದರಿಂದ ಟ್ರಾಕ್ಟರ್‌ ಮಗುಚಿ ಬಿದ್ದಿದೆ. ಟ್ರಾಕ್ಟರ್‌ನಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಹೆದ್ದಾರಿಯಲ್ಲಿ ರಕ್ತದ ಕೋಡಿ ಹರಿದಿದೆ. ಅವರ ವಸ್ತುಗಳು ಎಲ್ಲೆಡೆ ಬಿದ್ದಿವೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಜೀವ ಬಿಟ್ಟಿದ್ದಾರೆ. ಅನೇಕ ಜನ ಪ್ರಜ್ಞೆ ಕಳೆದುಕೊಂಡಿದ್ದರು. ಅವರಲ್ಲಿ ಚಿತ್ತಪ್ಪ ಕೂಡ ಒಬ್ಬರಾಗಿದ್ದರು.

ADVERTISEMENT

‘ಟ್ರಾಕ್ಟರ್‌ ಪಲ್ಟಿಯಾಗಿ ಬಿದ್ದ ನಂತರ ನಾನೆಲ್ಲಿ ಬಿದ್ದೆನೋ ನನಗೆ ಗೊತ್ತಿಲ್ಲ. ಕೆಲ ನಿಮಿಷ ನಾನು ಮನುಷ್ಯನಾಗಿ ಇರಲಿಲ್ಲ. ಪ್ರಜ್ಞೆ ತಪ್ಪಿತ್ತು. ನಿಧಾನವಾಗಿ ಸ್ವಲ್ಪ ಪ್ರಜ್ಞೆ ಬಂತು. ಆಗ ಎಲ್ಲೆಡೆ ಕೂಗಾಟ, ಚೀರಾಟ, ಅಳುವ ಶಬ್ದ ಕೇಳಿಸಿತು. ನನ್ನ ಭುಜ, ಮೊಣಕಾಲು ತುಂಬ ರಕ್ತವಾಗಿತ್ತು. ನಮ್ಮೂರಿನ ರೇಣುಕ, ಯರ್ರಿಸ್ವಾಮಿ ಸತ್ತ ಸುದ್ದಿ ತಿಳಿದು ಬಹಳ ಬೇಜಾರಾಯಿತು. ವಿಧಿ ಬಡವರ ಜತೆ ಹೀಗೇಕೇ ನಡೆದುಕೊಂಡಿತು ಗೊತ್ತಾಗುತ್ತಿಲ್ಲ’ ಎಂದು ಹೇಳಿ ಬೊಮ್ಮಪ್ಪ ಮೌನವಾದರು.

ಬೊಮ್ಮಪ್ಪ ಅವರೊಂದಿಗೆ ಕೂಲಿ ಕೆಲಸಕ್ಕೆ ಜತೆಯಲ್ಲಿ ಹೋಗುತ್ತಿದ್ದ ಅವರ ಸಹೋದರ ಚಿತ್ತಪ್ಪ ಕೂಡ ಗಾಯಗೊಂಡು ಅವರಿಗೆ ಹೊಂದಿಕೊಂಡಂತಿದ್ದ ಇನ್ನೊಂದು ಹಾಸಿಗೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು, ಕಿವಿಯಿಂದ ರಕ್ತ ಹರಿಯುತ್ತಿತ್ತು. ನೋವಿನಲ್ಲಿ ಒದ್ದಾಡುತ್ತಿದ್ದ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

18 ವರ್ಷ ವಯಸ್ಸಿನ ರವಿ ಅವರ ತಲೆ, ಕೈ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅವರಿಗೆ ಬ್ಯಾಂಡೇಜ್‌ ಹಾಕಲಾಗಿತ್ತು. ಅವರಿಗೆ ಹಾಸಿಗೆಯಲ್ಲಿ ಕೂರಲು ಆಗುತ್ತಿರಲಿಲ್ಲ. ಮಲಗಲು ಆಗುತ್ತಿರಲಿಲ್ಲ. ಅದನ್ನು ಕಂಡು ಅವರ ತಾಯಿ ಕಣ್ಣೀರು ಹಾಕುತ್ತಿದ್ದರು. 45 ವಯಸ್ಸಿನ ವೈ.ಕೆ. ಶಿವಣ್ಣ ಅವರ ತಲೆ ಹಾಗೂ ಮುಖದ ಮೇಲೆ ಗಂಭೀರ ಗಾಯಗಳಾಗಿದ್ದವು. ಹಾಸಿಗೆ ಮೇಲೆ ಅತ್ತಿಂದಿತ್ತ ನರಳಾಡುತ್ತಿದ್ದರು. ‘ಬಹಳ ಪೆಟ್ಟಾಗಿದೆ. ವೈದ್ಯರು ಇಂಜೆಕ್ಷನ್‌ ನೀಡಿದ ನಂತರ ನೋವು ಸ್ವಲ್ಪ ಕಡಿಮೆಯಾಗಿದೆ’ ಎಂದರು.

ಹೀಗೆ ತುರ್ತು ಚಿಕಿತ್ಸಾ ವಿಭಾಗದ ಮೂರು ವಿಭಾಗಗಳ ತುಂಬೆಲ್ಲ 22 ಜನ ಒಂದಿಲ್ಲೊಂದು ರೀತಿಯಿಂದ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿರುವ ದೃಶ್ಯ ಮನಕಲಕುವಂತಿತ್ತು. ಅವರನ್ನು ನೋಡಿ ಅವರ ಸಂಬಂಧಿಕರು ಕಣ್ಣೀರು ಹಾಕುತ್ತಿದ್ದರು.

ಇನ್ನೊಂದೆಡೆ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ, ಹರಪ್ರಸಾದ್‌ ಹಾಗೂ ಅವರ ತಂಡ ಗಾಯಾಳುಗಳಿಗೆ ಚಿಕಿತ್ಸೆ ಕೊಡುವಲ್ಲಿ ನಿರತರಾಗಿದ್ದರು. ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಸೀನಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.