ADVERTISEMENT

ಶ್ಯೂರಿಟಿ ಇಲ್ಲದೆ ದುಡಿವ ವರ್ಗಕ್ಕೆ ಸಾಲ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ವಾರ್ಷಿಕ ಮಹಾಜನ ಸಭೆಯಲ್ಲಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 11:31 IST
Last Updated 20 ಆಗಸ್ಟ್ 2022, 11:31 IST
ಹೊಸಪೇಟೆಯಲ್ಲಿ ಶನಿವಾರ ನಡೆದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಬ್ಯಾಂಕಿನ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ ಹಾಗೂ ನಿರ್ದೇಶಕರು ಉದ್ಘಾಟಿಸಿದರು
ಹೊಸಪೇಟೆಯಲ್ಲಿ ಶನಿವಾರ ನಡೆದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಬ್ಯಾಂಕಿನ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ ಹಾಗೂ ನಿರ್ದೇಶಕರು ಉದ್ಘಾಟಿಸಿದರು   

ಹೊಸಪೇಟೆ (ವಿಜಯನಗರ): ಯಾವುದೇ ರೀತಿಯ ಶ್ಯೂರಿಟಿ ಇಲ್ಲದೆ ದುಡಿಯುವ ವರ್ಗಕ್ಕೆ ಸಾಲ ಕೊಟ್ಟು, ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗೊಳಿಸಲು ಶನಿವಾರ ನಗರದಲ್ಲಿ ನಡೆದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿ, ಘೋಷಿಸಲಾಯಿತು.

‘ಮಡಿವಾಳರು, ಚಮ್ಮಾರರು, ಕಮ್ಮಾರರು, ತರಕಾರಿ, ಹಣ್ಣು ಮಾರಾಟಗಾರರಿಗೆ ಶ್ಯೂರಿಟಿ ಇಲ್ಲದೆ ₹25 ಸಾವಿರ ವರೆಗೆ ಸಾಲ ಕೊಡಲಾಗುವುದು. ದುಡಿಯುವ ವರ್ಗದವರು ಕೂಡ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂಬ ಉದ್ದೇಶ ನಮ್ಮದು’ ಎಂದು ಬ್ಯಾಂಕಿನ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ ತಿಳಿಸಿದರು.

ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಎನ್‌.ಪಿ.ಎಸ್‌./ಯು.ಪಿ.ಐ. ವ್ಯವಸ್ಥೆ ಹೊಂದಿರುವ ಏಕಮಾತ್ರ ಸಹಕಾರಿ ಬ್ಯಾಂಕ್‌ ನಮ್ಮದು. ವಾಣಿಜ್ಯ ಬ್ಯಾಂಕುಗಳು ಕೊಡುತ್ತಿರುವ ಎಲ್ಲ ಸೇವೆಗಳನ್ನು ಒದಗಿಸಲಾಗುತ್ತಿದೆ. ಸದ್ಯ ಬ್ಯಾಂಕ್‌ 33 ಶಾಖೆಗಳನ್ನು ಹೊಂದಿದೆ. ಎರಡು ಮೊಬೈಲ್‌ ಬ್ಯಾಂಕ್‌ ವಾಹನಗಳಿವೆ. ಸತತ 45 ವರ್ಷಗಳಿಂದ ಲಾಭದ ಹಾದಿಯಲ್ಲಿ ಬ್ಯಾಂಕ್‌ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಇದಕ್ಕೆ ಅಧಿಕಾರಿ, ಸಿಬ್ಬಂದಿ ವರ್ಗದ ಶ್ರಮ ಹಾಗೂ ಗ್ರಾಹಕರ ಸಹಕಾರವೇ ಮುಖ್ಯ ಕಾರಣ ಎಂದು ವಿವರಿಸಿದರು.

ADVERTISEMENT

2022–23ನೇ ಸಾಲಿನಲ್ಲಿ 1,10,000 ರೈತರಿಗೆ ₹1 ಸಾವಿರ ಕೋಟಿ ಶೂನ್ಯ ಬಡ್ಡಿ ದರ ಕೆ.ಸಿ.ಸಿ. ಸಾಲ ಹಾಗೂ 600 ರೈತ ಸದಸ್ಯರಿಗೆ ₹35 ಕೋಟಿ ಮಧ್ಯಮ ಅವಧಿಯ ಕೃಷಿ ಸಾಲ ಶೇ 3ರ ಬಡ್ಡಿ ದರದಲ್ಲಿ ಕೊಡಲು ಯೋಜಿಸಲಾಗಿದೆ. ಇದಲ್ಲದೇ 10 ಸಾವಿರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹50 ಕೋಟಿ ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಬ್ಯಾಂಕಿನ ಗ್ರಾಹಕರಿಗೆ ₹500 ಕೋಟಿ ಕೃಷಿಯೇತರ ಸಾಲ, ಒಂದು ಸಾವಿರ ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಗುಂಪುಗಳಿಗೆ ₹20 ಕೋಟಿ ಸಾಲ ರಿಯಾಯಿತಿ ಬಡ್ಡಿ ದರದಲ್ಲಿ ನೀಡಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು.

ಬ್ಯಾಂಕ್‌ ಕೂಡ್ಲಿಗಿ, ಅರಸೀಕೆರೆ, ಹೊಸಹಳ್ಳಿ ಗ್ರಾಮಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು. ವ್ಯವಹಾರ ಹೆಚ್ಚಾಗಿರುವ ತೆಕ್ಕಲಕೋಟೆ, ಮರಿಯಮ್ಮನಹಳ್ಳಿ, ಹಿರೇಹಡಗಲಿ, ಕುಡುತಿನಿಯಲ್ಲಿ ನಿವೇಶನ ಖರೀದಿಸಿ, ಬರುವ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು. ಬ್ಯಾಂಕಿಂಗ್‌ ಸೇವೆ ಇನ್ನಷ್ಟು ವಿಸ್ತರಿಸಲು 12 ಶಾಖೆಗಳ ವ್ಯಾಪ್ತಿಯಲ್ಲಿ ಹೊಸ ಎ.ಟಿ.ಎಂ. ತೆರೆಯಲು ಯೋಜನೆ ರೂಪಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 2022–23ನೇ ಸಾಲಿನಲ್ಲಿ ಗಣಕೀಕರಣ ಕಾರ್ಯ ಪೂರ್ಣಗೊಳಿಸಲು ಹಾಗೂ 100 ಮೈಕ್ರೋ ಎ.ಟಿ.ಎಂ.ಗಳನ್ನು ನಬಾರ್ಡ್‌ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.

ವಿಜಯನಗರ, ಬಳ್ಳಾರಿ ಜಿಲ್ಲೆಯ ರೈತರಿಗೆ, ಗ್ರಾಹಕರಿಗೆ ಬ್ಯಾಂಕಿಂಗ್‌ ವ್ಯವಹಾರ ತಿಳಿಸಲು 300 ಆರ್ಥಿಕ ಸಾಕ್ಷರತಾ ಸಭೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ‘ಆತ್ಮ ನಿರ್ಭರ’ ಯೋಜನೆಯ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹು ಸೇವಾ ಕೇಂದ್ರಗಳಾಗಿ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ₹1 ಲಕ್ಷದ ವರೆಗೆ ಪಿಗ್ಮಿ ಸಾಲ, ಗ್ರಾಹಕರಿಗೆ ಚೆಕ್‌ ಬುಕ್‌ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್‌ ಬಿ.ಎಸ್‌., ನಿರ್ದೇಶಕರಾದ ಜೆ.ಎಂ. ವೃಷಭೇಂದ್ರಯ್ಯ, ಟಿ.ಎಂ. ಚಂದ್ರಶೇಖರಯ್ಯ, ಡಿ. ಭೋಗಾರೆಡ್ಡಿ, ಎಂ. ಗುರುಸಿದ್ದನಗೌಡ, ಕೋಳೂರು ಮಲ್ಲಿಕಾರ್ಜುನಗೌಡ, ಎಲ್‌.ಎಸ್‌. ಆನಂದ್‌, ಕೆ. ರವೀಂದ್ರನಾಥ, ಚಿದಾನಂದ ಐಗೋಳ, ಬಿ.ಕೆ. ಪ್ರಕಾಶ್‌, ಜೆ.ಎಂ. ಗಂಗಾಧರ, ಸಿ. ಯರ್ರಿಸ್ವಾಮಿ, ಬಿ.ಎ. ಕೇಸರಿಮಠ, ಯುವರಾಜಕುಮಾರ್‌ ಆರ್‌.ಎಸ್‌., ಉಪಪ್ರಧಾನ ವ್ಯವಸ್ಥಾಪಕರಾದ ಡಿ. ಶಂಕರ್‌, ಕೆ. ತಿಮ್ಮಾರೆಡ್ಡಿ, ಸಿ. ಮರಿಸ್ವಾಮಿ, ಶಶಿಕಾಂತ ಎಸ್‌. ಹೆಸರೂರ ಇದ್ದರು.

₹9.56 ಕೋಟಿ ನಿವ್ವಳ ಲಾಭ: ಎರಡು ತಿಂಗಳ ಬೋನಸ್‌

‘2022ರ ಮಾರ್ಚ್‌ಗೆ ಬ್ಯಾಂಕ್‌ ₹9.56 ಕೋಟಿ ಲಾಭ ಗಳಿಸಿದೆ. ಎಲ್ಲ ಸದಸ್ಯರಿಗೆ ಶೇ 4ರಷ್ಟು ಡಿವಿಡೆಂಟ್‌ ಹಾಗೂ ಸಿಬ್ಬಂದಿಗೆ ಎರಡು ತಿಂಗಳ ವೇತನವನ್ನು ಬೋನಸ್‌ ರೂಪದಲ್ಲಿ ಕೊಡಲಾಗುವುದು’ ಎಂದು ಬ್ಯಾಂಕಿನ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ ತಿಳಿಸಿದರು.

ಬ್ಯಾಂಕಿನಿಂದ 99238 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹887.67 ಕೋಟಿ ಕಿಸಾನ್‌ ಕ್ರೆಡಿಟ್‌ ಸಾಲ, ಶೇ 3ರ ಬಡ್ಡಿ ದರದಲ್ಲಿ 485 ರೈತರಿಗೆ ₹25.14 ಕೋಟಿ ಮಧ್ಯಮ ಅವಧಿಯ ಸಾಲ, 19495 ಗ್ರಾಹಕರಿಗೆ ₹436.03 ಕೋಟಿ ಕೃಷಿಯೇತರ ಸಾಲ ನೀಡಲಾಗಿದೆ. ಲೆಕ್ಕಪತ್ರ ವರ್ಗೀಕರಣದಲ್ಲಿ ಶೇ 94.60ರೊಂದಿಗೆ ಬ್ಯಾಂಕಿಗೆ ‘ಎ’ ಶ್ರೇಣಿ ಸಿಕ್ಕಿದೆ. ₹13.9 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದ್ದು, ಇನ್ನಷ್ಟೇ ಸರ್ಕಾರ ಬ್ಯಾಂಕಿಗೆ ನೀಡಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.